ರಾಜ್‌ಕೋಟ್: ಇಲ್ಲಿನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯವು ರೋಚಕ ಬ್ಯಾಟಿಂಗ್ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ಕಿವೀಸ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಅವರ ಭರ್ಜರಿ ಶತಕಗಳ ನಡುವಿನ ಪೈಪೋಟಿಯಲ್ಲಿ, ಅಂತಿಮವಾಗಿ ಜಯ ನ್ಯೂಜಿಲೆಂಡ್ ಪಾಲಾಯಿತು. 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ಪ್ರವಾಸಿ ಪಡೆ, ಮೂರು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸುವ ಮೂಲಕ ಸರಣಿಯನ್ನು ಜೀವಂತವಾಗಿರಿಸಿದೆ.
ಆರಂಭಿಕರ ಭದ್ರ ಬುನಾದಿ, ಮಧ್ಯಮ ಕ್ರಮಾಂಕದ ಕುಸಿತ
ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದ ಪರ ಆರಂಭಿಕರಾಗಿ ಬಂದ ರೋಹಿತ್ ಶರ್ಮಾ (24 ರನ್, 38 ಎಸೆತ) ಮತ್ತು ನಾಯಕ ಶುಭಮನ್ ಗಿಲ್ (56 ರನ್, 53 ಎಸೆತ) ಮೊದಲ ವಿಕೆಟ್‌ಗೆ 70 ರನ್ ಸೇರಿಸಿ ಭರವಸೆಯ ಆರಂಭ ನೀಡಿದರು. ಗಿಲ್ ಅವರ ಆಟದಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಿತ್ತು. ಆದರೆ 13ನೇ ಓವರ್‌ನಲ್ಲಿ ಕ್ರಿಸ್ಟನ್ ಕ್ಲಾರ್ಕ್ ಈ ಜೋಡಿಯನ್ನು ಬೇರ್ಪಡಿಸಿದರು.
ನಂತರ ಬಂದ ವಿರಾಟ್ ಕೊಹ್ಲಿ (23) ಮತ್ತು ಶ್ರೇಯಸ್ ಅಯ್ಯರ್ ಅಲ್ಪ ಮೊತ್ತಕ್ಕೆ ಔಟಾಗುವ ಮೂಲಕ ಭಾರತ ತಂಡ ದಿಢೀರ್ ಕುಸಿತಕ್ಕೆ ಒಳಗಾಯಿತು. ಕೇವಲ 48 ರನ್‌ಗಳ ಅಂತರದಲ್ಲಿ ಗಿಲ್, ಕೊಹ್ಲಿ ಮತ್ತು ಅಯ್ಯರ್ ವಿಕೆಟ್ ಪತನಗೊಂಡಿದ್ದು ತಂಡಕ್ಕೆ ಹಿನ್ನಡೆಯಾಯಿತು. ಕ್ಲಾರ್ಕ್ ಅವರು ವಿರಾಟ್ ಅವರನ್ನು ಕ್ಲೀನ್‌ಬೌಲ್ಡ್ ಮಾಡುವ ಮೂಲಕ ಭಾರತದ ರನ್ ವೇಗಕ್ಕೆ ಬ್ರೇಕ್ ಹಾಕಿದರು.
ರಾಹುಲ್ ಏಕಾಂಗಿ ಹೋರಾಟ ಮತ್ತು ವಿಶಿಷ್ಟ ಸಂಭ್ರಮ
ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಬಂದ ಕೆ.ಎಲ್. ರಾಹುಲ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಮೊದಲು ರವೀಂದ್ರ ಜಡೇಜ (27) ಮತ್ತು ನಂತರ ನಿತೀಶ್ ಕುಮಾರ್ ರೆಡ್ಡಿ (20) ಅವರೊಂದಿಗೆ ಸಣ್ಣ ಜೊತೆಯಾಟವಾಡಿದ ರಾಹುಲ್, ವಿಕೆಟ್ ಪತನವನ್ನು ತಡೆದರು. ಏಕಾಂಗಿ ಹೋರಾಟ ನಡೆಸಿದ ಅವರು 92 ಎಸೆತಗಳಲ್ಲಿ ಅಜೇಯ 112 ರನ್ (11 ಬೌಂಡರಿ, 1 ಸಿಕ್ಸರ್) ಚಚ್ಚಿದರು. ಇದು ಅವರ ಏಕದಿನ ಕ್ರಿಕೆಟ್‌ನ 7ನೇ ಶತಕವಾಗಿದೆ. ಶತಕದ ಗಡಿ ದಾಟಲು ಸಿಕ್ಸರ್ ಎತ್ತಿದ ರಾಹುಲ್, ಒಂದು ಕೈಯಲ್ಲಿ ಬ್ಯಾಟ್ ಮೇಲೆತ್ತಿ, ಇನ್ನೊಂದು ಕೈ ಬೆರಳುಗಳನ್ನು ಬಾಯಲ್ಲಿಟ್ಟುಕೊಂಡು ವಿಶಿಷ್ಟ ರೀತಿಯಲ್ಲಿ ಸಂಭ್ರಮ ಆಚರಿಸಿದ್ದು ವಿಶೇಷವಾಗಿತ್ತು. ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 284 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಮಿಚೆಲ್ ಸ್ಫೋಟಕ ಬ್ಯಾಟಿಂಗ್‌ಗೆ ತಲೆಬಾಗಿದ ಭಾರತ
285 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌ಗೆ ಭಾರತದ ವೇಗಿಗಳಾದ ಪ್ರಸಿದ್ಧ ಕೃಷ್ಣ ಮತ್ತು ಹರ್ಷಿತ್ ರಾಣಾ ಆರಂಭಿಕ ಆಘಾತ ನೀಡಿದರು. ಕೇವಲ 24 ರನ್‌ಗಳಿಗೆ ಡವೊನ್ ಕಾನ್ವೆ ಮತ್ತು ಹೆನ್ರಿ ನಿಕೊಲ್ಸ್ ಔಟಾದಾಗ ಭಾರತಕ್ಕೆ ಗೆಲುವಿನ ಆಸೆ ಚಿಗುರಿತ್ತು. ಆದರೆ, ನಂತರ ಜೊತೆಯಾದ ವಿಲ್ ಯಂಗ್ (87 ರನ್, 98 ಎಸೆತ) ಮತ್ತು ಡ್ಯಾರಿಲ್ ಮಿಚೆಲ್ ಭಾರತೀಯ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು.
ಡ್ಯಾರಿಲ್ ಮಿಚೆಲ್ ಕೇವಲ 117 ಎಸೆತಗಳಲ್ಲಿ ಅಜೇಯ 131 ರನ್ (11 ಬೌಂಡರಿ, 2 ಸಿಕ್ಸರ್) ಸಿಡಿಸಿ ಪಂದ್ಯವನ್ನು ಭಾರತದ ಕೈಯಿಂದ ಕಿತ್ತುಕೊಂಡರು. ಮಿಚೆಲ್ ಅವರ ಆಟ ಟಿ20 ಶೈಲಿಯಲ್ಲಿದ್ದು, ಕುಲದೀಪ್ ಯಾದವ್ ಸೇರಿದಂತೆ ಭಾರತದ ಯಾವುದೇ ಬೌಲರ್ ಅವರಿಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಗ್ಲೆನ್ ಫಿಲಿಪ್ಸ್ (ಅಜೇಯ 32) ಅವರೊಂದಿಗೆ ಸೇರಿದ ಮಿಚೆಲ್, 47.3 ಓವರ್‌ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ:
- ಭಾರತ: 284/7 (50 ಓವರ್‌ಗಳಲ್ಲಿ) – ಕೆ.ಎ. ರಾಹುಲ್ 112*, ಶುಭಮನ್ ಗಿಲ್ 56; ಕ್ರಿಸ್ಟನ್ ಕ್ಲಾರ್ಕ್ 56ಕ್ಕೆ 3.
- ನ್ಯೂಜಿಲೆಂಡ್: 286/3 (47.3 ಓವರ್‌ಗಳಲ್ಲಿ) – ಡ್ಯಾರಿಲ್ ಮಿಚೆಲ್ 131*, ವಿಲ್ ಯಂಗ್ 87; ಹರ್ಷಿತ್ ರಾಣಾ 52ಕ್ಕೆ 1, ಪ್ರಸಿದ್ಧ ಕೃಷ್ಣ 49ಕ್ಕೆ 1.
- ಪಂದ್ಯದ ಶ್ರೇಷ್ಠ ಆಟಗಾರ: ಡ್ಯಾರಿಲ್ ಮಿಚೆಲ್.