Nose Health; ನಿಮ್ಮ ಮೂಗಿನ ಆರೋಗ್ಯ ಚೆನ್ನಾಗಿರಲಿ.

Health tips: ಪ್ರತಿ ವರ್ಷ ಲಕ್ಷಾಂತರ ಮಂದಿಯನ್ನು ಬಾಧಿಸುವ ಮೂಲಕ ಮತ್ತು ಜೀವನ ಗುಣಮಟ್ಟದ ಮೇಲೆ ಗಮನಾರ್ಹ ಪ್ರತಿಕೂಲ ಪರಿಣಾಮವನ್ನು ಬೀರುತ್ತ ಮೂಗಿಗೆ ಸಂಬಂಧಿಸಿದ ಕಾಯಿಲೆಗಳು ಜಾಗತಿಕವಾಗಿ ಏರುಗತಿಯಲ್ಲಿವೆ. ಮೂಗಿಗೆ ಸಂಬಂಧಿಸಿದ ಕಾಯಿಲೆಗಳು ನಿದ್ದೆಗೆ ತೊಂದರೆ ಉಂಟು ಮಾಡಬಹುದು, ಉತ್ಪಾದಕತೆ ಕುಸಿಯುವಂತೆ ಮಾಡಬಹುದು ಹಾಗೂ ಕಿವಿಯ ಸೋಂಕುಗಳು ಮತ್ತು ಶ್ವಾಸಾಂಗದ ಕೆಳಭಾಗದ ಸಮಸ್ಯೆಗಳಿಗೂ ಕಾರಣವಾಗಬಹುದು.

ಮೂಗು ಶ್ವಾಸಾಂಗದ ಪ್ರಮುಖ ಒಂದು ಅಂಗವಾಗಿದ್ದು, ಉಸಿರಾಟ ಸಾಧ್ಯವಾಗುವಂತೆ ಮಾಡುತ್ತದೆಯಲ್ಲದೆ ಉಸಿರಾಡುವ ಗಾಳಿಯನ್ನು ಪರಿಶೋಧಿಸುತ್ತದೆ, ವಾಸನೆಗಳನ್ನು ಗುರುತಿಸುತ್ತದೆ ಮತ್ತು ಮಾತನಾಡುವುದಕ್ಕೆ ಸಹಾಯ ಮಾಡುತ್ತದೆ. ಆದರೆ ಸಾಮಾನ್ಯವಾಗಿ ಸಮಸ್ಯೆಗಳು ಉದ್ಭವಿಸುವವರೆಗೆ ಮೂಗನ್ನು ನಾವು ನಿರ್ಲಕ್ಷಿಸುವುದೇ ಹೆಚ್ಚು.

ಮೂಗಿನ ಸಾಮಾನ್ಯ ಸಮಸ್ಯೆಗಳು

ಮೂಗನ್ನು ಬಾಧಿಸುವ ಕೆಲವು ಸಾಮಾನ್ಯ ಸಮಸ್ಯೆಗಳು ಹೀಗಿವೆ:

 ಅಲರ್ಜಿಕ್‌ ರೈನೈಟಿಸ್‌: ಪರಾಗರೇಣುಗಳು, ಧೂಳು ಅಥವಾ ಸಾಕುಪ್ರಾಣಿಗಳ ಮೈಧೂಳಿನಿಂದ ಇದು ಉಂಟಾಗುತ್ತದೆ. ಅಲರ್ಜಿಕ್‌ ರೈನೈಟಿಸ್‌ನಿಂದ ಸೀನು, ಮೂಗಿನಲ್ಲಿ ಅಡಚಣೆ, ಮೂಗಿನಿಂದ ಸ್ರಾವ ಹಾಗೂ ಮೂಗು, ಕಣ್ಣುಗಳಲ್ಲಿ ತುರಿಕೆ ಉಂಟಾಗುತ್ತದೆ. ಸರಿಸುಮಾರು ಶೇ. 30 ಮಂದಿಯನ್ನು ಇದು ಬಾಧಿಸುತ್ತದೆ ಎಂದು ಅಂದಾಜಿಸಲಾಗಿದೆ.

 ಸೈನಸೈಟಿಸ್‌: ಸಾಮಾನ್ಯವಾಗಿ ಸೋಂಕು ಅಥವಾ ಅಲರ್ಜಿಗಳಿಂದ ಉಂಟಾಗುವ ಸೈನಸ್‌ ಉರಿಯೂತವು ಕ್ಲಪ್ತ ಕಾಲದಲ್ಲಿ ಸರಿಯಾದ ಚಿಕಿತ್ಸೆ ಒದಗಿಸದೆ ಇದ್ದಲ್ಲಿ ದೀರ್ಘ‌ಕಾಲೀನ ಸಮಸ್ಯೆಯಾಗಿ ಕಾಡಬಹುದು. ಮುಖದ ನೋವು, ತಲೆನೋವು, ಮೂಗು ಕಟ್ಟುವುದು ಮತ್ತು ಮೂಗಿನಿಂದ ದಪ್ಪನೆಯ ಸ್ರಾವ ಇದರ ಲಕ್ಷಣಗಳು.

 ಮೂಗಿನ ಪಾಲಿಪ್‌ಗಳು: ಮೂಗಿನ ರಂಧ್ರಗಳು ಅಥವಾ ಸೈನಸ್‌ಗಳಲ್ಲಿ ಉಂಟಾಗುವ ಈ ದುರ್ಮಾಂಸಗಳು ಉಸಿರಾಟಕ್ಕೆ ಅಡಚಣೆ ಉಂಟುಮಾಡಬಹುದು ಮತ್ತು ವಾಸನೆ ಗ್ರಹಣ ಶಕ್ತಿಯನ್ನು ಕುಗ್ಗಿಸಬಹುದು. ಅಸ್ತಮಾ ಹಾಗೂ ದೀರ್ಘ‌ಕಾಲೀನ ಉರಿಯೂತದ ಜತೆಗೂ ಇವು ಸಂಬಂಧ ಹೊಂದಿವೆ.

 ಓರೆಯಾದ ಮೂಗು: ಮೂಗಿನ ಮುಖ್ಯ ಮೂಳೆಯು ಮುಖದ ಮಧ್ಯಭಾಗದಲ್ಲಿ ಇರದೆ ಇರುವುದು ಅಥವಾ ಓರೆಯಾಗಿರುವುದು. ಇದರಿಂದಾಗಿ ಉಸಿರಾಟಕ್ಕೆ ತೊಂದರೆ ಮತ್ತು ಆಗಾಗ ಸೈನಸ್‌ ಸೋಂಕು ಉಂಟಾಗಬಹುದು.

ಲಕ್ಷಣಗಳನ್ನು ಗುರುತಿಸುವುದು: ಯಾವಾಗ ಸಹಾಯ ಕೇಳಬೇಕು

 ಮೂಗು ಕಟ್ಟಿದ್ದಾಗ

 ಮೂಗಿನಿಂದ ಸ್ರಾವ ಉಂಟಾಗುತ್ತಿದ್ದರೆ

 ತಲೆನೋವು

 ಸೀನು

 ಮೂಗು, ಕಣ್ಣು ಮತ್ತು ಗಂಟಲು ತುರಿಕೆ

 ವಾಸನೆ ಗ್ರಹಣ ಶಕ್ತಿ ಕಡಿಮೆಯಾಗಿರುವುದು

 ಮೂಗಿನಿಂದ ರಕ್ತಸ್ರಾವ

ರೋಗಪತ್ತೆ

ರೋಗಿಯ ವಿವರಗಳನ್ನು ಸಂಗ್ರಹಿಸಿ, ಪ್ರಾಥಮಿಕ ಪರೀಕ್ಷೆಗಳನ್ನು ನಡೆಸಿದ ಬಳಿಕ ಇನ್ನೂ ಕೆಲವು ಪರೀಕ್ಷೆಗಳು ಅಗತ್ಯವಾಗಬಹುದು:

  1. ಡಯಗ್ನೋಸ್ಟಿಕ್‌ ನೇಸಲ್‌ ಎಂಡೋಸ್ಕೋಪಿ: ಮೂಗಿನ ರಂಧ್ರಗಳ ವಿವರವಾದ ಎಂಡೋಸ್ಕೋಪಿಕ್‌ ವಿವರವನ್ನು ಒದಗಿಸುತ್ತದೆ.
  2. ಮೂಗು ಮತ್ತು ಪ್ಯಾರಾನೇಸಲ್‌ ಸೈನಸ್‌ಗಳ ಸಿಟಿ ಸ್ಕ್ಯಾನ್‌: ಸೈನಸ್‌ಗಳ ಮಾಹಿತಿಯನ್ನು ಒದಗಿಸುತ್ತದೆ.

ಆರೋಗ್ಯದ ಮೇಲೆ ಪರಿಣಾಮ ಮತ್ತು ಅಪಾಯ ಅಂಶಗಳು

ಮೂಗಿನ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ ಪರಿಸರದ ಮಾಲಿನ್ಯ, ಅಲರ್ಜಿಗಳನ್ನು ಸರಿಯಾಗಿ ನಿಭಾಯಿಸದೆ ಇರುವುದು ಮತ್ತು ದೇಹರಚನೆಗೆ ಸಂಬಂಧಿಸಿದ ಸಮಸ್ಯೆಗಳು ಕಾರಣವಾಗಿರುತ್ತವೆ. ಗಾಳಿಯಲ್ಲಿ ಇರುವಂತಹ ಮಾಲಿನ್ಯಕಾರಕಗಳಿಂದಾಗಿ ನಗರವಾಸಿಗಳು ಮೂಗು ಸಂಬಂಧಿ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು.

ಚಿಕಿತ್ಸೆ ಮತ್ತು ತಡೆ

ಮೂಗಿನ ಅನಾರೋಗ್ಯಗಳಿಗೆ ಕಾರಣವಾಗಿರುವ ಅಂಶಗಳನ್ನು ಆಧರಿಸಿ ಚಿಕಿತ್ಸೆಯ ಆಯ್ಕೆಗಳು ಬದಲಾಗುತ್ತವೆ. ಇವುಗಳಲ್ಲಿ ಆಯಂಟಿಬಯೋಟಿಕ್‌ಗಳು, ಆಯಂಟಿಹಿಸ್ಟಾಮಿನ್‌ಗಳು, ಡಿಕಂಜಸ್ಟೆಂಟ್‌ಗಳು, ನೇಸಲ್‌ ಕಾರ್ಟಿಕೊಸ್ಟಿರಾಯ್ಡಗಳ ಉಪಯೋಗ ಅಥವಾ ತೀವ್ರ ತರಹದ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ (ಸೆಪ್ಟೊಪ್ಲಾಸ್ಟಿ, ಟರ್ಬಿನೆಕ್ಟೊಮಿ, ಫ‌ಂಕ್ಷನಲ್‌ ಎಂಡೊಸ್ಕೋಪಿಕ್‌ ಸೈನಸ್‌ ಸರ್ಜರಿ ಇತ್ಯಾದಿ) ಸೇರಿರುತ್ತವೆ. ಅಲರ್ಜಿಕಾರಕಗಳಿಂದ ದೂರವಿರುವುದು, ಉತ್ತಮ ನೈರ್ಮಲ್ಯ ಕಾಪಾಡಿಕೊಳ್ಳುವುದು ಮತ್ತು ಸಲೈನ್‌ ನೇಸಲ್‌ ಸ್ಪ್ರೇಗಳ ಉಪಯೊಗದಿಂದ ಮೂಗಿಗೆ ಸಂಬಂಧಿಸಿದ ಅನಾರೋಗ್ಯಗಳಿಂದ ದೂರವಿರಬಹುದು.

ತೊಂದರೆ ಇದ್ದಲ್ಲಿ ಏನು ಮಾಡಬೇಕು?

ಮೂಗಿಗೆ ಸಂಬಂಧಿಸಿದ ಅನಾರೋಗ್ಯಗಳು ಉಂಟಾದಲ್ಲಿ ಸ್ವಯಂ ಔಷಧ ಮಾಡಿಕೊಳ್ಳುವ ಬದಲು ಶೀಘ್ರವಾಗಿ ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಈ ಸಮಸ್ಯೆಗಳನ್ನು ನಿರ್ಲಕ್ಷಿಸದರೆ ದೀರ್ಘ‌ಕಾಲೀನ ತೊಂದರೆಗೆ ದಾರಿಯಾಗಬಹುದು. ಆದ್ದರಿಂದ ಆದಷ್ಟು ಶೀಘ್ರ ಚಿಕಿತ್ಸೆ ಪಡೆಯುವುದು ಮುಖ್ಯ. ಸರಿಯಾದ ತಿಳಿವಳಿಕೆ ಮತ್ತು ಆರೈಕೆಯಿಂದ ಮೂಗಿಗೆ ಸಂಬಂಧಿಸಿದ ಅನೇಕ ಅನಾರೋಗ್ಯಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು ಅಥವಾ ತಡೆಗಟ್ಟಲೂ ಬಹುದಾಗಿದೆ. ಹೀಗೆ ಮಾಡುವುದರಿಂದ ಶ್ವಾಸಾಂಗ ಆರೋಗ್ಯವನ್ನು ಪುನರ್‌ಸ್ಥಾಪಿಸಬಹುದು ಮತ್ತು ಉತ್ತಮ ಜೀವನ ನಡೆಸಬಹುದು.

Udayavani

Leave a Reply

Your email address will not be published. Required fields are marked *