ದಿನಾಂಕ 24.09.2025 ರಂದು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP) ಮೈಸೂರು ಮತ್ತು ಚೈಲ್ಡ್ ಫಂಡ್ ಇಂಟರ್ನ್ಯಾಷನಲ್ ಇವರ ಸಹಯೋಗದೊಂದಿಗೆ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ವನ್ನು ಮೈಸೂರಿನ ಕಲ್ಯಾಣ ಗಿರಿ 147ನೇ ಅಂಗನವಾಡಿ ಕೇಂದ್ರದಲ್ಲಿ ನಡೆಸಲಾಯಿತು.

ಶ್ರೀಮತಿ. ಸರಸ್ವತಿ, ನಿರ್ದೇಶಕರು, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಮೈಸೂರು ಇವರು ಕಾರ್ಯಕ್ರಮದ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಶ್ರೀಮತಿ. ಮುನಿಯಂದ್ರಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರು ಮಾತನಾಡುತ್ತಾ ರಾಷ್ಟ್ರೀಯ ಪೌಷ್ಠಿಕತಾ ವಾರ 2025ನ್ನು ಭಾರತದಾದ್ಯಂತ ಸೆಪ್ಟೆಂಬರ್ 1ರಿಂದ 7ರವರೆಗೆ ಆಚರಿಸಲಾಗುತಿದ್ದು. ಇದರ ಉದ್ದೇಶವೆಂದರೆ ಸರಿಯಾದ ಪೌಷ್ಠಿಕ ಆಹಾರ, ಸಮತೋಲಿತ ಆಹಾರ ಪದ್ಧತಿ ಹಾಗೂ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಎಲ್ಲಾ ವಯೋಮಾನದ ಜನರಿಗೆ, ವಿಶೇಷವಾಗಿ ಮಕ್ಕಳಿಗೆ, ಕಿಶೋರರಿಗೆ ಮತ್ತು ಮಹಿಳೆಯರಿಗೆ ತಲುಪಿಸುವುದು. ಈ ವರ್ಷದ ಥೀಮ್ “Eat Right for a Better Life” (ಉತ್ತಮ ಜೀವನಕ್ಕಾಗಿ ಸರಿಯಾಗಿ ತಿನ್ನಿರಿ) ಆಗಿತ್ತು. ಇದು ಪೌಷ್ಠಿಕ ಹಾಗೂ ಸುರಕ್ಷಿತ ಆಹಾರದ ಮಹತ್ವವನ್ನು ಒತ್ತಿ ಹೇಳಿ, ಆರೋಗ್ಯಕರ ಭವಿಷ್ಯ ನಿರ್ಮಾಣದಲ್ಲಿ ಅದರ ಪಾತ್ರವನ್ನು ಹೈಲೈಟ್ ಮಾಡಿತು. ಈ ಥೀಮ್ ಮೂಲಕ ಪೌಷ್ಠಿಕಾಂಶದ ಕೊರತೆಯನ್ನು ಕಡಿಮೆ ಮಾಡುವುದು, ಜೀವನಶೈಲಿ ಸಂಬಂಧಿತ ರೋಗಗಳನ್ನು ತಡೆಯುವುದು ಮತ್ತು ಜನರು ತಮ್ಮ ಆಹಾರ ಆಯ್ಕೆಗಳನ್ನು ಜಾಗೃತಿಯಿಂದ ಮಾಡಿಕೊಳ್ಳುವಂತೆ ಉತ್ತೇಜಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿಯು ಕಡಿಮೆಯಾಗುತ್ತಿದ್ದು ಎಲ್ಲರೂ ಜಂಕ್ ಫುಡ್ಗಳ ಮೊರೆ ಹೋಗುತ್ತಿದ್ದಾರೆ ನಾವು ನಮ್ಮ ಮನೆಯಲ್ಲಿ ಮತ್ತು ಸುತ್ತಮುತ್ತಲಿನ ವಾತಾವರಣದಲ್ಲಿ ಸಿಕ್ಕುವ ನುಗ್ಗೆ ಸೊಪ್ಪು, ನಿಂಬೆಹಣ್ಣು, ತರಕಾರಿ ಹಾಗೂ ಆಯಾ ಕಾಲಕ್ಕೆ ದೊರಕುವ ಹಣ್ಣುಗಳು ಇವುಗಳನ್ನು ತಿನ್ನಬೇಕು. ಉಪ್ಪು, ಸಕ್ಕರೆ ಮತ್ತು ಕಾರ ಈ ಮೂರುಗಳನ್ನು ಕಡಿಮೆ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ.
ಮಕ್ಕಳಿಗೆ ನಾವು ಪ್ರತಿದಿನ ಗೋಬಿ ಪಾನಿಪುರಿ ಕುರ್ಕುರೆ ಗಳನ್ನು ಕೊಡಿಸದೆ ಮೊಳಕೆ ಕಟ್ಟಿದ ಕಾಳುಗಳು, ಬೀಟ್ರೂಟ್ ಜ್ಯೂಸ್, ಹಣ್ಣುಗಳನ್ನು ನೀಡಲಿ ಮಕ್ಕಳು ಪೌಷ್ಟಿಕವಾಗಿ ಇರುತ್ತಾರೆ. ಆಹಾರ ಎಂದರೆ ಕೇವಲ ರುಚಿ ಅಥವಾ ಪ್ರಮಾಣವಲ್ಲ, ಅದು ಸಮತೋಲನ, ಆರೋಗ್ಯ ಮತ್ತು ದೀರ್ಘಕಾಲೀನ ಕಲ್ಯಾಣ ಎಂಬುದನ್ನು ನೆನಪಿಸಿತು. ಜಾಗೃತಿ ಹರಡುವುದರ ಮೂಲಕ ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವುದರ ಮೂಲಕ, ಈ ಕಾರ್ಯಕ್ರಮವು ಆರೋಗ್ಯಕರ ಮತ್ತು ಪೌಷ್ಠಿಕತೆ ಅರಿವುಳ್ಳ ಸಮಾಜ ನಿರ್ಮಾಣಕ್ಕೆ ಮಹತ್ತರ ಕೊಡುಗೆ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಗಿರಿಭೋವಿ ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ರಕ್ಷಣಾಧಿಕಾರಿಗಳಾದ ಶ್ರೀಮತಿ. ಮಂಜುಳಾ, ಶ್ರೀಮತಿ.ಶಿವಲಿಂಗಮ್ಮ, ಕುಮಾರಿ. ಸುನಿತಾ, ಶ್ರೀ.ದಿಲೀಪ್, ಅಂಗನವಾಡಿ ಸಹಾಯಕಿಯಾದ ಶ್ರೀಮತಿ.ಸುಮಲತಾ ಹಾಗೂ ಆರ್ ಎಲ್.ಎಚ್.ಪಿ ಸಂಸ್ಥೆಯ ಹಿರಿಯ ಯೋಜನಾಧಿಕಾರಿಯದ ಶ್ರೀ. ಸಂಪತ್ ಕಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರ ತಯಾರಿಕೆ ಪ್ರಾತ್ಯಕ್ಷಿಕೆಯನ್ನು ಮಾಡುವ ಮೂಲಕ ಗೆದ್ದ ಮಹಿಳೆಯರಿಗೆ ಬಹುಮಾನಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿ ಸುಮಾರು 100ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
Views: 17