ನಮ್ಮ ಆರೋಗ್ಯದ ಗುಟ್ಟನ್ನು ನಮ್ಮ ನಾಲಿಗೆಯೇ ಹೇಳುತ್ತದೆ!

ದೇಹದೊಳಗೆ ಏನಾಗುತ್ತಿದೆ ಎಂಬುದನ್ನು ತಿಳಿಯಬೇಕಾದರೆ ನಮ್ಮ ನಾಲಿಗೆಯನ್ನೂ ತಿಳಿಯಬೇಕು ನಾವು. ಅದರ ಬಣ್ಣ ಮತ್ತು ಮೇಲ್ಮೈ ಹೇಗಿದೆ ಎನ್ನುವುದರ ಮೇಲೆ ಬಹಳಷ್ಟು ವಿಷಯಗಳನ್ನು ತಿಳಿಯಬಹುದು.

ನಾಲಿಗೆಯು (Tongue Reveals Health) ಆರೋಗ್ಯದ ಕನ್ನಡಿ ಎನ್ನುವ ಮಾತಿದೆ. ನಮ್ಮ ದೇಹದ ಸ್ಥಿತಿ-ಗತಿಗಳ ಬಗ್ಗೆ ಅರಿಯುವುದಕ್ಕೆ ನಾಲಿಗೆ ಸಹಾಯಕ. ಅದರ ಬಣ್ಣ, ಮೇಲ್ನೋಟಗಳಿಂದ ದೇಹದೊಳಗೆ ಹೇಗಿದೆ, ಏನಾಗುತ್ತಿದೆ ಎಂಬುದನ್ನು ಅರಿಯಬಹುದು. ದೇಹಾರೋಗ್ಯದ ದಿಕ್ಸೂಚಿಯಂತೆ ಜಿಹ್ವೆ ಕೆಲಸ ಮಾಡುತ್ತದೆ. ಇದನ್ನು ಸರಿಯಾಗಿ ಅವಲೋಕಿಸಿದರೆ, ನಮಗೆ ತಿಳಿಯುವ ಮಾಹಿತಿಗಳು ಹಲವಾರು. ನಾಲಿಗೆ ತಿಳಿಸುವುದೇನು ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಗುಲಾಬಿ ಬಣ್ಣ

ಸುಂದರ ಗುಲಾಬಿ ಬಣ್ಣದ ನಾಲಿಗೆಯಿದ್ದರೆ, ಅದು ಸ್ವಸ್ಥ ಆರೋಗ್ಯದ ಸಂಕೇತ. ಇಷ್ಟೇ ಅಲ್ಲ, ರಸ ಒಸರುವ, ಮೃದುವಾದ ಮೇಲ್ಮೈ ಹೊಂದಿರುವ ನಾಲಿಗೆಯು ದೇಹಕ್ಕೆ ಅಗತ್ಯವಾದ ನೀರಿನಂಶ ಒದಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಜೊತೆಗೆ, ಜೀರ್ಣಾಂಗಗಳು ಚೆನ್ನಾಗಿ ಕೆಲಸ ಮಾಡುತ್ತಿವೆ ಎಂಬ ಸಂದೇಶವನ್ನೂ ನೀಡುತ್ತದೆ.

ಬಿಳಿ ನಾಲಿಗೆ

ನಾಲಿಗೆಯ ಮೇಲೆ ಬಿಳಿ ಬಣ್ಣದ ಹೊದಿಕೆಯಿದ್ದರೆ ಇದು ಬಹಳಷ್ಟನ್ನು ಸೂಚಿಸುತ್ತದೆ. ಈ ಬಿಳಿಯ ಬಣ್ಣವು ಬಾಯಿಯ ಭಾಗಕ್ಕೆ ಅಂಟಿಕೊಂಡ ಫಂಗಸ್‌ ಸೋಂಕಿನ ಲಕ್ಷಣವಿರಬಹುದು; ಬಾಯಿಯ ಸ್ವಚ್ಛತೆಯ ಕೊರತೆಯನ್ನು ಸೂಚಿಸಬಹುದು; ಬ್ಯಾಕ್ಟೀರಿಯ ದಾಳಿ ಮಾಡಿದ್ದರಿಂದಲೂ ಇರಬಹುದು. ಇದಲ್ಲದೆ, ದೇಹಕ್ಕೆ ಅಗತ್ಯವಾದಷ್ಟು ನೀರು ದೊರೆಯದಿದ್ದರೆ ಹೀಗಾಗುತ್ತದೆ. ಜೊತೆಗೆ, ಜೀರ್ಣಾಂಗಗಳ ಕೆಲಸದಲ್ಲಿ ಏರುಪೇರಾದರೆ, ಅಜೀರ್ಣ ಅಥವಾ ಮಲಬದ್ಧತೆಯಿದ್ದರೂ ನಾಲಿಗೆಯ ಮೇಲೆ ಬಿಳಿಯ ಹೊದಿಕೆಯನ್ನು ಕಾಣಬಹುದು.

ಕೆಂಪು ನಾಲಿಗೆ

ಸ್ಟ್ರಾಬೆರಿಯಂಥ ಕೆಂಪು ನಾಲಿಗೆಯು ದೇಹದಲ್ಲಿ ಅಗತ್ಯ ಸತ್ವಗಳ ಕೊರತೆಯನ್ನು ಸೂಚಿಸುತ್ತದೆ. ವಿಟಮಿನ್‌ಗಳ ಕೊರತೆಯಿದ್ದರೆ, ಅದರಲ್ಲೂ ಮುಖ್ಯವಾಗಿ ವಿಟಮಿನ್‌ ಬಿ೧೨ ಕಡಿಮೆಯಿದ್ದರೆ ನಾಲಿಗೆಯು ಹೀಗೆ ಸ್ಟ್ರಾಬೆರಿ ಕೆಂಪಿನ ಬಣ್ಣದಲ್ಲಿ ಗೋಚರಿಸುತ್ತದೆ. ಕಬ್ಬಿಣದಂಶ ಕಡಿಮೆಯಿದ್ದರೂ ನಾಲಿಗೆ ಕೆಂಪಾಗುತ್ತದೆ. ರಕ್ತನಾಳಗಳಲ್ಲಿ ಉರಿಯೂತ ತರುವ ಕವಾಸಾಕಿ ಎನ್ನುವ ರೋಗವೂ ಅಪರೂಪಕ್ಕೆ ಈ ಕೆನ್ನಾಲಗೆಗೆ ಕಾರಣವಾಗಬಹುದು

ಕಪ್ಪು ನಾಲಿಗೆ

ಕೆಲವೊಮ್ಮೆ ಕಪ್ಪಾದ ರೋಮಭರಿತ ಲಕ್ಷಣಗಳನ್ನು ನಾಲಿಗೆ ತೋರಿಸಬಹುದು. ಇದು ಸಹ ಬ್ಯಾಕ್ಟೀರಿಯ ಸೋಂಕಿನಿಂದ ಆಗುವಂಥದ್ದು. ಕೆಲವು ಔಷಧಿಗಳಿಂದ ನಾಲಿಗೆ ಕಪ್ಪಾಗಬಹುದು. ಧೂಮಪಾನ ಅತಿಯಾದರೂ ನಾಲಿಗೆ ಹೀಗೆ ಬಣ್ಣಗೆಡಬಹುದು. ಆದರೆ ನಾಲಿಗೆಯಲ್ಲಿ ನೋವು, ಊತ ಇದ್ದು, ಬಾಯಿಯ ರುಚಿ ವಾಸನೆಗಳು ಬದಲಾಗಿದ್ದರೆ ವೈದ್ಯರನ್ನು ಕಾಣಬೇಕಾಗುತ್ತದೆ.

ನಕಾಶೆ ನಾಲಿಗೆ

ಅಂದರೆ ನಾಲಿಗೆ ಮೇಲೆ ಕೆಂಪು ಬಣ್ಣದ ಮಚ್ಚೆಯಂಥ ಆಕೃತಿಗಳು ಕಾಣಬಹುದು. ನೋಡುವುದಕ್ಕೆ ಯಾವುದೇ ಭೂಪಟ ಅಥವಾ ನಕಾಶೆಯಂತೆ ಕಾಣುವ ಈ ಕೆಂಪು ಆಕೃತಿಗಳು ಸಾಮಾನ್ಯವಾಗಿ ಅಪಾಯ ಮಾಡುವುದಿಲ್ಲ. ಆದರೆ ಕೆಲವು ಆಹಾರಗಳಿಗೆ ಅಥವಾ ತೀಕ್ಷ್ಣ ರುಚಿಗಳಿಗೆ ಇವು ಪ್ರತಿಕ್ರಿಯಿಸಿ, ನೋವು ನೀಡುತ್ತವೆ. ಇದಕ್ಕೆ ನಿರ್ದಿಷ್ಟವಾದ ಕಾರಣಗಳು ತಿಳಿದಿಲ್ಲ.

ಸೀಳು ನಾಲಿಗೆ

ನಾಲಿಗೆಯ ಮೇಲ್ಮೈಯಲ್ಲಿ ಸೀಳಿನಂಥ ಆಳವಾದ ಗೆರೆಗಳು ಕಾಣಬಹುದು. ಕೆಲವೊಮ್ಮೆ ಇವು ಆನುವಂಶಿಕವಾಗಿ ಬರಬಹುದು. ಅದಿಲ್ಲದಿದ್ದರೆ, ಸೋರಿಯಾಸಿಸ್‌ ಅಥವಾ ಡೌನ್ಸ್‌ ಸಿಂಡ್ರೋಮ್‌ ಸಹ ಕಾರಣವಾಗಿರಬಹುದು. ಹೆಚ್ಚಿನ ಸಾರಿ ಈ ಗೆರೆಗಳು ಯಾವುದೇ ತೊಂದರೆ ನೀಡುವುದಿಲ್ಲ.

ಹುಣ್ಣುಗಳು

ಬಾಯಲ್ಲಿ ಹುಣ್ಣಾದಂತೆಯೇ ನಾಲಿಗೆ ಮೇಲೂ ಹುಣ್ಣುಗಳಾಗುತ್ತವೆ. ಇದಕ್ಕೆ ಹಲವು ಕಾರಣಗಳಿರಬಹುದು. ಕೆಲವೊಮ್ಮೆ ಸತ್ವಗಳ ಕೊರತೆ, ಸೋಂಕು ಅಥವಾ ಬ್ರೇಸಸ್‌ ಹಾಕಿದ ಕಾರಣಕ್ಕೂ ಆಗಿರಬಹುದು. ಹಲವು ವಾರಗಳಿಂದ ಈ ಹುಣ್ಣುಗಳು ಕಡಿಮೆಯಾಗದೆ ಮುಂದುವರಿಯುತ್ತಿದ್ದರೆ ಬಾಯಿ ಕ್ಯಾನ್ಸರ್‌ ಸೂಚನೆಯೂ ಇರಬಹುದು. ಗುಣವಾಗದ ಹುಣ್ಣುಗಳಿದ್ದರೆ ವೈದ್ಯರಲ್ಲಿ ತೋರಿಸುವುದು ಅಗತ್ಯ.

ಗಮನ ಕೊಡಿ

ಕೆಂಪು, ಬಿಳಿಯ ಮಚ್ಚೆಯಂಥವು ನಾಲಿಗೆಯ ಮೇಲೆ ಕಾಣಿಸಿಕೊಂಡು ನೋವು ಕೊಡುತಿದ್ದರೆ, ಬಾಯಿ ವಾಸನೆ ಬರುತ್ತಿದ್ದರೆ, ಹುಣ್ಣುಗಳು ಗುಣವಾಗದೆ ಉಳಿದಿದ್ದರೆ, ಬಾಯಿ ಅಥವಾ ನಾಲಿಗೆಯಲ್ಲಿ ಕಾಣಿಸಿಕೊಂಡ ಯಾವುದೇ ಹುಣ್ಣು, ವ್ರಣ, ಮಚ್ಚೆಗಳು ಸಾಮಾನ್ಯಕ್ಕಿಂತ ಭಿನ್ನ ಲಕ್ಷಣಗಳನ್ನು ಹೊಂದಿದ್ದರೆ, ವೈದ್ಯರನ್ನು ಕಾಣುವುದು ಸೂಕ್ತ. ಇಂಥ ಯಾವುದೇ ಲಕ್ಷಣಗಳು ಕ್ಯಾನ್ಸರ್‌ನ ಸೂಚಕಗಳಾಗಿರಬಹುದು.

Source : https://vistaranews.com/lifestyle/health/tongue-reveals-health-our-tongue-tells-the-history-of-our-health/637269.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *