ಪ್ರತಿಯೊಂದು ಕಷ್ಟವನ್ನು ದಾಟಿ….; ಪತಿ ರಾಹುಲ್ ಬಗ್ಗೆ ಅಥಿಯಾ ಶೆಟ್ಟಿ ಹೇಳಿದ್ದೇನು ಗೊತ್ತಾ?

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ತಂಡ 188 ರನ್‌ಗಳಿಗೆ ಆಲೌಟ್ ಆಗಿದ್ದರೂ, ಭಾರತ ಗೆಲ್ಲಲು ಸಾಕಷ್ಟು ಹೋರಾಟ ನಡೆಸಬೇಕಾಯಿತು. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಂತರ, ಕೆಎಲ್ ರಾಹುಲ್ ಇನ್ನಿಂಗ್ಸ್ ನಿಭಾಯಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಇದೀಗ ಪತಿ ರಾಹುಲ್ ಅವರ ಇನ್ನಿಂಗ್ಸ್ ನೋಡಿದ ಅವರ ಪತ್ನಿ ಅಥಿಯಾ ಶೆಟ್ಟಿ ಕೂಡ ತನ್ನ ಪತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.ವಾಸ್ತವವಾಗಿ ಮೊದಲ ಪಂದ್ಯದಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್​ಗೆ ಬಂದಾಗ ತಂಡ 16 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತ್ತು. ಇಲ್ಲಿಂದ ಕೆಎಲ್ ರಾಹುಲ್ ಒಂದು ತುದಿಯಲ್ಲಿ ಭದ್ರವಾಗಿ ನಿಂತು, ಮೊದಲು ಹಾರ್ದಿಕ್ ಪಾಂಡ್ಯ ಮತ್ತು ನಂತರ ರವೀಂದ್ರ ಜಡೇಜಾ ಜೊತೆ ಮಹತ್ವದ ಜೊತೆಯಾಟ ನಡೆಸಿದರು. ಅಂತಿಮವಾಗಿ ರಾಹುಲ್ 91 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡಂತೆ 75 ರನ್ ಬಾರಿಸಿದರು. ವಾಸ್ತವವಾಗಿ ಬಹಳ ದಿನಗಳಿಂದ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ ರಾಹುಲ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಯಿತು. ಅದೇ ವೇಳೆ ಉಪನಾಯಕತ್ವವನ್ನೂ ಅವರಿಂದ ಕಿತ್ತುಕೊಳ್ಳಲಾಯಿತು. ಬಳಿಕ ಅವರ ಫಾರ್ಮ್‌ ಬಗ್ಗೆ ಅವರು ನಿರಂತರವಾಗಿ ಟ್ರೋಲ್‌ಗೆ ಒಳಗಾಗಿದ್ದರು. ತಂಡದಲ್ಲಿ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಆದರೆ ಶುಕ್ರವಾರ ಅವರು ಆಡಿದ ಇನ್ನಿಂಗ್ಸ್‌, ಎಲ್ಲಾ ಟೀಕಕಾರರಿಗೆ ಉತ್ತರ ನೀಡಿದೆ.ಇದೀಗ ಪತಿಯ ಅದ್ಭುತ ಇನ್ನಿಂಗ್ಸ್ ಬಗ್ಗೆ ಬರೆದುಕೊಂಡಿರುವ ಅಥಿಯಾ, ರಾಹುಲ್ ತಮ್ಮ ಅರ್ಧಶತಕದ ನಂತರ ಜಡೇಜಾ ಅವರೊಂದಿಗೆ ವಿಜಯೋತ್ಸವವನ್ನು ಆಚರಿಸುತ್ತಿರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ‘ಪ್ರತಿಯೊಂದು ಕಷ್ಟವನ್ನು ದಾಟಿ ಹಿಂತಿರುಗುವುದು ಹೇಗೆ ಎಂದು ತಿಳಿದಿರುವ ವ್ಯಕ್ತಿ' ಎಂದು ಬರೆದುಕೊಂಡಿದ್ದಾರೆ. ಕೆಎಲ್ ರಾಹುಲ್ ಈ ವರ್ಷ ಹಿರಿಯ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಅವರನ್ನು ವಿವಾಹವಾದರು. ಅಥಿಯಾ ಸ್ವತಃ ಬಾಲಿವುಡ್ ನಟಿ ಕೂಡ ಆಗಿದ್ದಾರೆ. ಬಹಳ ಸಮಯದಿಂದ ಡೇಟಿಂಗ್ ನಡೆಸುತ್ತಿದ್ದ ಈ ಜೋಡಿ ಅಂತಿಮವಾಗಿ ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿರಿಸಿತ್ತು.

source https://tv9kannada.com/photo-gallery/cricket-photos/ind-vs-aus-1st-odi-athiya-shetty-calls-kl-rahul-most-resilient-showers-love-on-him-psr-au14-538687.html

Leave a Reply

Your email address will not be published. Required fields are marked *