ನಮ್ಮ ಮಕ್ಕಳು (children) ಚೆನ್ನಾಗಿ ಓದ್ಬೇಕು, ಉತ್ತಮ ಅಂಕ ಗಳಿಸಬೇಕು, ಕ್ರಿಯಾಶೀಲರಾಗಿರಬೇಕು, ಉತ್ತಮ ಸಾಧನೆ ಮಾಡ್ಬೇಕು ಎಂದು ಪೋಷಕರು ಬಯಸುತ್ತಾರೆ. ಅದಕ್ಕಾಗಿ ಚೆನ್ನಾಗಿ ಓದುವಂತೆ ಒತ್ತಾಯಿಸುತ್ತಾರೆ. ಆದರೆ ಕೆಲವು ಮಕ್ಕಳು ಮನೆಯಲ್ಲಿ, ಶಾಲೆಯಲ್ಲಿ ಎಷ್ಟೇ ಚೆನ್ನಾಗಿ ಓದಿದರೂ ಅದನ್ನೆಲ್ಲಾ ಮರೆತು ಬಿಡುತ್ತಾರೆ.
ಅದರಲ್ಲೂ ಪರೀಕ್ಷೆಯ ದಿನ ಹೆಚ್ಚಿನ ಮಕ್ಕಳು ಓದಿದ್ದನ್ನೆಲ್ಲಾ ಮರೆತು ಬಿಡ್ತಾರೆ. ಇದಕ್ಕೆಲ್ಲ ಕಾರಣ ಸ್ಮರಣ ಶಕ್ತಿಯ (memory power) ಕೊರತೆ. ಹೀಗಿರುವಾಗ ಪೋಷಕರು ಮಕ್ಕಳಿಗೆ ಹೊಡೆದು, ಗದರಿಸಿ ಓದಿಸುವುದರ ಬದಲು ಈ ಕೆಲವೊಂದಿಷ್ಟು ಸಲಹೆಗಳನ್ನು ಪಾಲಿಸುವ ಮೂಲಕ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸಬಹುದು. ಹಾಗಾದ್ರೆ ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸಲು ಪೋಷಕರು ಏನು ಮಾಡಬಹುದು ಎಂಬುದನ್ನು ನೋಡೋಣ ಬನ್ನಿ.
ಹೀಗೆ ಮಾಡಿದ್ರೆ ನಿಮ್ಮ ಮಕ್ಕಳ ನೆನಪಿನ ಶಕ್ತಿ ವೃದ್ಧಿಸುವುದು ಗ್ಯಾರಂಟಿ:
ಸರಿಯಾದ ನಿದ್ರೆ: ಮಕ್ಕಳ ಮೆದುಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಕಷ್ಟು ವಿಶ್ರಾಂತಿ ಅತ್ಯಗತ್ಯ. ಮಕ್ಕಳಿಗೆ ದಿನಕ್ಕೆ ಕನಿಷ್ಠ 8 ರಿಂದ 10 ಗಂಟೆಗಳ ಕಾಲ ನಿದ್ರೆ ಬೇಕು. ರಾತ್ರಿಯ ಉತ್ತಮವಾದ ನಿದ್ರೆಯು ಮೆದುಳು ಹಗಲಿನಲ್ಲಿ ಕಲಿತದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ನಿದ್ರೆಯು ಗಮನವನ್ನು ಸುಧಾರಿಸುತ್ತದೆ. ಹಾಗಾಗಿ ಮೊದಲು ಮೊಬೈಲ್, ಟಿವಿ ಮತ್ತು ಲ್ಯಾಪ್‌ಟಾಪ್ ಬಳಕೆಯನ್ನು ಕಡಿಮೆ ಮಾಡಿಸಿ ಮತ್ತು ಸರಿಯಾದ ಸಮಯಕ್ಕೆ ಮಲಗುವ ಅಭ್ಯಾಸವನ್ನು ಮಕ್ಕಳಲ್ಲಿ ರೂಢಿಸಿ.
ಆರೋಗ್ಯಕರ ಉಪಹಾರ, ಆಹಾರ: ಮಕ್ಕಳಿಗೆ ಬೆಳಗಿನ ಉಪಹಾರ ಬಹಳ ಮುಖ್ಯ. ಇದು ಮೆದುಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಮತ್ತು ಶಕ್ತಿಯನ್ನು ಒದಗಿಸುತ್ತದೆ. ಬೆಳಗ್ಗೆ ಶಾಲೆಗೆ ಹೋಗುವ ಆತುರದಲ್ಲಿ ಅನೇಕ ಮಕ್ಕಳು ಉಪಹಾರ ಸೇವಿಸದೆ ಶಾಲೆಗೆ ಹೋಗುತ್ತಾರೆ. ಆದರೆ ಇದು ದೇಹ ಮತ್ತು ಮನಸ್ಸು ಎರಡಕ್ಕೂ ಹಾನಿಕರವಾಗಿದೆ. ಹಾಗಾಗಿ ಮಕ್ಕಳಿಗೆ ಬೆಳಗ್ಗಿನ ಉಪಹಾರದಲ್ಲಿ ಧಾನ್ಯಗಳು, ಹಣ್ಣುಗಳು ಮತ್ತು ಹಾಲಿನಂತಹ ಪೌಷ್ಟಿಕ, ಆರೋಗ್ಯಕರ ಆಹಾರವನ್ನು ನೀಡಬೇಕು. ಇದು ಅವರನ್ನು ತರಗತಿಯಲ್ಲಿ ಸಕ್ರಿಯವಾಗಿ ಮತ್ತು ಉತ್ಸಾಹಭರಿತರನ್ನಾಗಿ ಇರಿಸುತ್ತದೆ.
ಓದುವ ಅಭ್ಯಾಸ: ಮೊಬೈಲ್, ಟಿವಿ ಮತ್ತು ಲ್ಯಾಪ್‌ಟಾಪ್‌ಗಳ ಬಳಕೆಯನ್ನು ಕಡಿಮೆ ಮಾಡಿಸಿ, ಮಕ್ಕಳಿಗೆ ಓದಲು ಕಥೆ ಪುಸ್ತಕಗಳು ಮತ್ತು ದಿನ ಪತ್ರಿಕೆಗಳನ್ನು ನೀಡಿ. ಅವರು ದಿನಕ್ಕೆ ಕನಿಷ್ಠ 20 ನಿಮಿಷಗಳ ಓದುವ ಅಭ್ಯಾಸವನ್ನು ರೂಢಿಸಿಕೊಂಡರೆ ಅವರ ಸ್ಮರಣ ಶಕ್ತಿ ಹೆಚ್ಚಾಗುತ್ತದೆ. ಇಲ್ಲದಿದ್ದರೆ ಫೊಷಕರು ಮಕ್ಕಳಿಗೆ ಕಥೆ ಹೇಳಬಹುದು. ಇದರಿಂದಲೂ ಅವರ ಸ್ಮರಣ ಶಕ್ತಿ ಸುಧಾರಿಸುತ್ತದೆ.
ಆಟಗಳು: ಒಗಟುಗಳು, ಸುಡೋಕು, ಬ್ಲಾಕ್‌ಗಳು, ಮೆಮೊರಿ ಕಾರ್ಡ್‌ಗಳಂತಹ ಆಟಗಳನ್ನು ಆಡಿಸಿ. ಇದು ಮೋಜಿನ ಆಟ ಮಾತ್ರವಲ್ಲದೆ ಮೆದುಳಿಗೆ ವ್ಯಾಯಾಮವನ್ನು ಸಹ ನೀಡುತ್ತದೆ. ಇದರಿಂದ ನೆನಪಿನ ಶಕ್ತಿ ಕೂಡ ಹೆಚ್ಚಾಗುತ್ತದೆ. ಹೀಗಿರುವಾಗ ಮಕ್ಕಳಿಗೆ ಮೊಬೈಲ್, ಟಿವಿ ಬದಲು ಇಂತಹ ಆಟಗಳನ್ನು ಆಡಿಸಿ. ಇಂತಹ ಆಟಗಳು ಮಕ್ಕಳ ಆಲೋಚನೆ ಮತ್ತು ಸ್ಮರಣಶಕ್ತಿಯನ್ನು ಸುಧಾರಿಸುತ್ತದೆ.
ಪ್ರಾಣಾಯಾಮ ಮತ್ತು ಧ್ಯಾನ: ಮಕ್ಕಳಿಗೆ ಬೆಳಿಗ್ಗೆ 10 ನಿಮಿಷಗಳ ಕಾಲ ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡಿಸಿ. ಇದು ಮಕ್ಕಳ ಮನಸ್ಸನ್ನು ಶಾಂತವಾಗಿರಿಸುತ್ತದೆ ಮತ್ತು ಅವರ ಗಮನವನ್ನು ಸುಧಾರಿಸುತ್ತದೆ.
Views: 18