ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಡಿ.28:
ನಗರದ ಕಬೀರಾನಂದ ನಗರದಲ್ಲಿರುವ ಶ್ರೀ ಸದ್ಗುರು ಕಬೀರಾನಂದಾಶ್ರಮದಲ್ಲಿ ನಡೆಯಲಿರುವ 96ನೇ ಮಹಾ ಶಿವರಾತ್ರಿ ಮಹೋತ್ಸವ ಹಾಗೂ ಶಿವನಾಮ ಸಪ್ತಾಹದ ರೂಪುರೇಷೆಗಳ ಕುರಿತು ಭಕ್ತಾಧಿಗಳ ಪೂರ್ವಭಾವಿ ಸಭೆ ಡಿಸೆಂಬರ್ 27ರ ಶನಿವಾರ ಸಂಜೆ ಆಶ್ರಮ ಸಭಾಂಗಣದಲ್ಲಿ ನಡೆಯಿತು.
ಮಹಾ ಶಿವರಾತ್ರಿ ಉತ್ಸವ ಸಮಿತಿಯ ಕಾರ್ಯದರ್ಶಿ ವಿ.ಎಲ್. ಪ್ರಶಾಂತ್ ಮಾತನಾಡಿ, 96ನೇ ಶಿವನಾಮ ಸಪ್ತಾಹವು 2026ರ ಫೆಬ್ರವರಿ 9ರಿಂದ 15ರವರೆಗೆ ನಡೆಯಲಿದೆ ಎಂದರು. ಫೆ.9ರಂದು ಕಳಶ ಸ್ಥಾಪನೆ, ಶ್ರೀ ಗುರು ಕರ್ತೃ ಗದ್ದಿಗೆಯ ಮೂರ್ತಿಗೆ ರುದ್ರಾಭಿಷೇಕ ಹಾಗೂ ಶಿವಮಹಿಮ್ನಾ ಸ್ತೋತ್ರದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ವೇದಿಕೆ ಕಾರ್ಯಕ್ರಮಗಳು ಫೆ.11ರಿಂದ ಫೆ.15ರವರೆಗೆ ಪ್ರತಿದಿನ ಸಂಜೆ 6.30ರಿಂದ ನಡೆಯಲಿದ್ದು, ನಾಡಿನ ವಿವಿಧ ಮಠಾಧೀಶರು, ಸಾಹಿತಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
ಫೆ.15ರಂದು ಶ್ರೀ ಶಿವಲಿಂಗಾನಂದ ಶ್ರೀಗಳ ಪಲ್ಲಕ್ಕಿ ಉತ್ಸವ ಹಾಗೂ ಜಾನಪದ ಕಲಾಮೇಳ, ಫೆ.16ರಂದು ಕೌದಿ ಪೂಜೆಯೊಂದಿಗೆ ಶಿವನಾಮ ಸಪ್ತಾಹ ಸಮಾಪ್ತಿಗೊಳ್ಳಲಿದೆ ಎಂದು ವಿವರಿಸಿದರು.
ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಎಂ. ವೀರೇಶ್ ಮಾತನಾಡಿ, ಚಿತ್ರದುರ್ಗದ ಮಠಗಳು ವಿವಿಧ ಸಂಸ್ಕೃತಿ ಮತ್ತು ಆಚರಣೆಗಳ ಮೂಲಕ ನಗರಕ್ಕೆ ಗೌರವ ತಂದಿವೆ ಎಂದರು. ಹಿರಿಯ ಪತ್ರಕರ್ತ ಉಜ್ಜನಪ್ಪ, ಮಹಾ ಶಿವರಾತ್ರಿ ಹಿಂದೂ ಸಮಾಜದ ಮಹತ್ವದ ಹಬ್ಬವಾಗಿದ್ದು, ಆಧ್ಯಾತ್ಮಿಕ ಶುದ್ಧೀಕರಣಕ್ಕೆ ಇದು ಸಹಕಾರಿ ಎಂದು ಹೇಳಿದರು.
ವೀರಶೈವ ಸಮಾಜದ ಮುಖಂಡ ಕೆ.ಇ.ಬಿ. ಷಣ್ಮುಖಪ್ಪ ಹಾಗೂ ಜೆಡಿಎಸ್ ಮುಖಂಡ ಗೋಪಾಲಸ್ವಾಮಿ ಮಾತನಾಡಿ, ಕಬೀರಾನಂದಾಶ್ರಮ ಜಾತ್ಯಾತೀತ ಮಠವಾಗಿದ್ದು, ಎಲ್ಲರಿಗೂ ಸಮಾನ ಆಶೀರ್ವಾದ ನೀಡುವ ಕೇಂದ್ರವಾಗಿದೆ ಎಂದರು.
ಸಭೆಯ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು, “ವಂತಿಕೆಗಿಂತ ಹೃದಯ ಶ್ರೀಮಂತಿಕೆ ಮುಖ್ಯ. ಜನರ ಭಾಗವಹಿಸುವಿಕೆಯೇ ಮಹೋತ್ಸವದ ಯಶಸ್ಸು” ಎಂದು ಆಶೀರ್ವಚನ ನೀಡಿದರು.
ಸಭೆಯಲ್ಲಿ ನಗರಸಭಾ ಸದಸ್ಯರು, ಭಕ್ತಾಧಿಗಳು, ಸಮಾಜಮುಖಂಡರು ಉಪಸ್ಥಿತರಿದ್ದು, ಸಲಹೆ ಮತ್ತು ಸಹಕಾರ ನೀಡಿದರು. ಗಣಪತಿಶಾಸ್ತ್ರಿ ವೇದಘೋಷ ಮಾಡಿದರೆ, ಶ್ರೀಮತಿ ಜ್ಯೋತಿ ಪ್ರಾರ್ಥಿಸಿದರು. ಮುರುಗೇಶ್ ನಿರೂಪಿಸಿ, ವಂದಿಸಿದರು.