ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಭವ್ಯ ಸಮಾರಂಭದಲ್ಲಿ, ದೇಶೀಯ ಕ್ರಿಕೆಟ್‌ನಲ್ಲಿ ದಾಖಲೆಮಯ ಪ್ರದರ್ಶನ ನೀಡುತ್ತಿರುವ ಬಿಹಾರದ 14 ವರ್ಷದ ಪ್ರತಿಭಾನ್ವಿತ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು.

ಶೌರ್ಯ, ಕಲೆ ಮತ್ತು ಸಂಸ್ಕೃತಿ, ಪರಿಸರ, ಆವಿಷ್ಕಾರ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾಮಾಜಿಕ ಸೇವೆ ಹಾಗೂ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಕ್ಕಳಿಗೆ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಕ್ರೀಡಾ ವಿಭಾಗದಲ್ಲಿ ಪ್ರಶಸ್ತಿ ಪಡೆದ ವೈಭವ್, ಈ ಗೌರವವನ್ನು ಪಡೆದ ಮೊದಲ ಕ್ರಿಕೆಟಿಗ ಎಂಬ ಅಪೂರ್ವ ಸಾಧನೆಗೂ ಪಾತ್ರರಾಗಿದ್ದಾರೆ.
ಸಮಾರಂಭದ ಬಳಿಕ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ವೈಭವ್ ಅಬ್ಬರ
ದೇಶೀಯ ಕ್ರಿಕೆಟ್‌ನಲ್ಲಿ ಒಂದರ ಮೇಲೊಂದು ದಾಖಲೆಗಳನ್ನು ಮುರಿಯುತ್ತಿರುವ ವೈಭವ್, ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಕೇವಲ 84 ಎಸೆತಗಳಲ್ಲಿ 190 ರನ್ ಗಳಿಸಿ ಗಮನ ಸೆಳೆದಿದ್ದರು. ಈ ಇನ್ನಿಂಗ್ಸ್‌ನಲ್ಲಿ ಅವರು 16 ಬೌಂಡರಿ ಮತ್ತು 15 ಸಿಕ್ಸರ್‌ಗಳನ್ನು ಬಾರಿಸಿದರು. ವೈಭವ್ ಅವರ ಬ್ಯಾಟಿಂಗ್ ಬಲದಿಂದ ಬಿಹಾರ ತಂಡವು 50 ಓವರ್‌ಗಳಲ್ಲಿ 574 ರನ್ ಗಳಿಸಿ ವಿಶ್ವದಾಖಲೆ ನಿರ್ಮಿಸಿತು.
ಅದರಲ್ಲೂ ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸಿದ ವೈಭವ್, ಲಿಸ್ಟ್-ಎ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ಕಿರಿಯ ಆಟಗಾರ ಎಂಬ ದಾಖಲೆಗೂ ಪಾತ್ರರಾದರು. ಇದೇ ವೇಳೆ ಎಬಿ ಡಿವಿಲಿಯರ್ಸ್ ಅವರ ಅತ್ಯಂತ ವೇಗದ 150 ರನ್ ದಾಖಲೆಗೂ ತೆರೆ ಎಳೆದರು. ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಭಾರತೀಯ ಆಟಗಾರನೊಬ್ಬ ಸಿಡಿಸಿದ ಅತಿ ಹೆಚ್ಚು 15 ಸಿಕ್ಸರ್‌ಗಳ ದಾಖಲೆಯೂ ವೈಭವ್ ಹೆಸರಿನಲ್ಲಿದೆ.
ಅಂಡರ್-19 ಮತ್ತು ಐಪಿಎಲ್ ಸಾಧನೆ
ವೈಭವ್ ಈ ಹಿಂದೆ ಅಂಡರ್-19 ಏಷ್ಯಾ ಕಪ್‌ನಲ್ಲಿ ಯುಎಇ ವಿರುದ್ಧ 171 ರನ್ ಗಳಿಸುವ ಮೂಲಕ ದಾಖಲೆ ಬರೆದಿದ್ದರು. ಈ ವರ್ಷದ ಆರಂಭದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಅವರು, ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿ, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅಂಡರ್-19 ವಿಶ್ವಕಪ್ ತಯಾರಿ
ಪ್ರಧಾನಮಂತ್ರಿಯನ್ನು ಭೇಟಿ ಮಾಡಿದ ಬಳಿಕ, ವೈಭವ್ ಅವರು ಭಾರತ ಅಂಡರ್-19 ತಂಡದೊಂದಿಗೆ ಜನವರಿ 15ರಿಂದ ಆರಂಭವಾಗುವ ಅಂಡರ್-19 ವಿಶ್ವಕಪ್ ತಯಾರಿಗಾಗಿ ಜಿಂಬಾಬ್ವೆ ಪ್ರವಾಸಕ್ಕೆ ತೆರಳಲಿದ್ದಾರೆ. ಈ ಹಿನ್ನೆಲೆ, ವಿಜಯ್ ಹಜಾರೆ ಟ್ರೋಫಿಯ ಉಳಿದ ಪಂದ್ಯಗಳಿಂದ ಅವರು ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.