
Prime Volleyball League 2023: ಪ್ರೈವ್ ವಾಲಿಬಾಲ್ ಲೀಗ್ ಸೀಸನ್-2 ವೇಳಾಪಟ್ಟಿ ಪ್ರಕಟವಾಗಿದೆ. ಹಾಲಿ ಚಾಂಪಿಯನ್ ಕೋಲ್ಕತ್ತಾ ಥಂಡರ್ಬೋಲ್ಟ್ಸ್ ವಿರುದ್ಧದ ಪಂದ್ಯದೊಂದಿಗೆ ಬೆಂಗಳೂರು ಟಾರ್ಪಿಡೋಸ್ ತಂಡ ಈ ಬಾರಿ ಅಭಿಯಾನ ಆರಂಭಿಸಲಿದೆ. ಫೆಬ್ರವರಿ 4 ರಂದು ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಬೆಂಗಳೂರು ತಂಡವು ಶುಭಾರಂಭ ಮಾಡುವ ಇರಾದೆಯಲ್ಲಿದೆ. ಚೊಚ್ಚಲ ಸೀಸನ್ನಲ್ಲಿ ನಾಕೌಟ್ ಹಂತ ಪ್ರವೇಶಿಸಲು ವಿಫಲವಾಗಿದ್ದ ಬೆಂಗಳೂರು ಟಾರ್ಪಿಡೋಸ್ ಈ ಬಾರಿ ಉತ್ತಮ ಸಮತೋಲನದಿಂದ ಕೂಡಿದ ತಂಡವನ್ನು ಹೊಂದಿದೆ. ಅದರಲ್ಲೂ ತಂಡದಲ್ಲಿ ಸ್ಟಾರ್ ಶೂಟರ್ ಎಂದೇ ಖ್ಯಾತರಾಗಿರುವ ಪಂಕಜ್ ಶರ್ಮಾ ಈ ಬಾರಿ ಕೂಡ ಮುನ್ಪಡೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ವಿನಾಯಕ ರೋಖಡೆ ಮತ್ತು ಬಿ ಮಿಧುನ್ ಕುಮಾರ್ರಂತಹ ಸ್ಟಾರ್ ಆಟಗಾರರು ಕೂಡ ತಂಡದಲ್ಲಿದ್ದಾರೆ. ಅದರಂತೆ ಈ ಕಳೆದ ಬಾರಿಗಿಂತ ಈ ಬಾರಿ ಟಾರ್ಪಿಡೋಸ್ ತಂಡದ ಅಟ್ಯಾಕಿಂಗ್ ವಿಂಗ್ ಮತ್ತಷ್ಟು ಬಲಿಷ್ಠವಾಗಿದೆ ಎಂದೇ ಹೇಳಬಹುದು.
ಇನ್ನು ಬೆಂಗಳೂರು ತಂಡದಲ್ಲಿ ಅಂತಾರಾಷ್ಟ್ರೀಯ ಆಟಗಾರರಾದ ಇರಾನ್ನ ಅಲಿರೆಜಾ ಅಬಲೂಚ್ ಮತ್ತು ಬಲ್ಗೇರಿಯಾದ ಟ್ವೆಟೆಲಿನ್ ಟ್ವೆಟಾನೋವ್ ಕೂಡ ಇದ್ದಾರೆ. ಇದೇ ಕಾರಣದಿಂದಾಗಿ ಈ ಸಲ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ ಬೆಂಗಳೂರು ಟಾರ್ಪಿಡೋಸ್ ಫ್ರಾಂಚೈಸ್.
ಈ ಬಗ್ಗೆ ಮಾತನಾಡಿರುವ ಬೆಂಗಳೂರು ಟಾರ್ಪಿಡೋಸ್ನ ಸಹ-ಮಾಲೀಕ ಅಂಕಿತ್ ನಾಗೋರಿ, ಕಳೆದ ವರ್ಷ ನಾವು ಅತ್ಯುತ್ತಮ ಪ್ರದರ್ಶನ ನೀಡಿದ್ದೇವೆ. ಆದರೆ ಸೆಮಿ-ಫೈನಲ್ಗೆ ಅರ್ಹತೆ ಪಡೆಯಲು ನಾವು ಕೇವಲ ಒಂದು ಪಾಯಿಂಟ್ನಿಂದ ದೂರ ಉಳಿದಿದ್ದೆವು. ಇದೀಗ ಹೊಸ ಸೀಸನ್ಗಾಗಿ ನಾವು ಅತ್ಯಂತ ಬಲಿಷ್ಠ ತಂಡವನ್ನು ಹೊಂದಿದ್ದೇವೆ. ಅಷ್ಟೇ ಅಲ್ಲದೆ ಈ ಬಾರಿ ನಾವು ಅಗ್ರಸ್ಥಾನದೊಂದಿಗೆ ಮರಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಪ್ರೈವ್ ವಾಲಿಬಾಲ್ ಲೀಗ್ ಹೊರತಾಗಿ, ನಾವು ಮಲ್ಲೇಶ್ವರಂನಲ್ಲಿ ಟಾರ್ಪಿಡೋಸ್ ಅಕಾಡೆಮಿಯನ್ನು ತೆರೆದಿದ್ದೇವೆ. ಅಲ್ಲಿ ಯಾರು ಬೇಕಾದರೂ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಅಲ್ಲದೆ ಉಚಿತ ತರಬೇತಿ ಮತ್ತು ಮಾರ್ಗದರ್ಶನ ಪಡೆಯಬಹುದಾಗಿದೆ ಎಂದು ಅಂಕಿತ್ ನಾಗೋರಿ ತಿಳಿಸಿದ್ದಾರೆ.
ವಿನಾಯಕ ರೋಖಡೆ ಹೊರತಾಗಿ, ಬೆಂಗಳೂರು ಫ್ರಾಂಚೈಸಿಯು ಕರ್ನಾಟಕದ ಇತರ ಮೂವರು ಆಟಗಾರರನ್ನು ಹೊಂದಿದೆ. ಅದರಂತೆ ತಂಡದಲ್ಲಿ ಕನ್ನಡಿಗರಾಗಿ ಸುಧೀರ್ ಶೆಟ್ಟಿ, ಸೃಜನ್ ಶೆಟ್ಟಿ ಮತ್ತು ತರುಣ್ ಗೌಡ ಕಾಣಿಸಿಕೊಳ್ಳಲಿದ್ದಾರೆ. ಈ ಆಟಗಾರರು ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಇನ್ನು ಈ ಸ್ಟಾರ್ ವಾಲಿಬಾಲ್ ಆಟಗಾರರಿಗೆ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ನೀಡಲು ಬೆಂಗಳೂರು ಟಾರ್ಪಿಡೋಸ್ ಫ್ರಾಂಚೈಸಿಯು ಮುಖ್ಯ ತರಬೇತುದಾರರಾಗಿ ಡೇವಿಡ್ ಲೀ ಅವರನ್ನು ನೇಮಿಸಿದೆ. ವಿಶೇಷ ಎಂದರೆ ಅಮೆರಿಕ ಮೂಲದ ಡೇವಿಡ್ ಲೀ 2008 ರ ಒಲಿಂಪಿಕ್ಸ್ನಲ್ಲಿ ಚಿನ್ನ ಮತ್ತು 2016 ರಲ್ಲಿ ಕಂಚು ಗೆದ್ದ ತಂಡದ ಭಾಗವಾಗಿದ್ದರು. ಹಾಗೆಯೇ 2015 ರ ವಿಶ್ವಕಪ್ ಮತ್ತು ವಿಶ್ವ ಲೀಗ್ (2008 ಮತ್ತು 2014) ನಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದರು. ಹೀಗಾಗಿಯೇ ಈ ಬಾರಿ ಬೆಂಗಳೂರು ತಂಡದ ಮೇಲೆ ನಿರೀಕ್ಷೆ ಹೆಚ್ಚಿದೆ.
ಬೆಂಗಳೂರು ಟಾರ್ಪಿಡೋಸ್ ತಂಡ ಹೀಗಿದೆ:
ಅಲಿರೆಜಾ ಅಬಲೂಚ್, ಟ್ವೆಟೆಲಿನ್ ತ್ವೆತನೋವ್, ಸೇತು ಟಿಆರ್, ಮುಜೀಬ್ ಎಂಸಿ, ಜಿಷ್ಣು ಪಿವಿ, ಐಬಿನ್ ಜೋಸ್, ನಿಸಾಮ್ ಮುಹಮ್ಮದ್, ಸುಧೀರ್ ಶೆಟ್ಟಿ, ವೈಶಾಕ್ ರೆಂಜಿತ್, ಪಂಕಜ್ ಶರ್ಮಾ, ವಿನಾಯಕ್ ರೋಖಡೆ, ಬಿ ಮಿಧುನ್ ಕುಮಾರ್, ತರುಣ್ ಗೌಡ ಮತ್ತು ಸೃಜನ್ ಶೆಟ್ಟಿ.
ಕಣದಲ್ಲಿ ಒಟ್ಟು 8 ತಂಡಗಳು:
ಪ್ರೈವ್ ವಾಲಿಬಾಲ್ ಲೀಗ್ನಲ್ಲಿ ಈ ಬಾರಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದೆ. ಅಂದರೆ ಕಳೆದ ಬಾರಿ 7 ತಂಡಗಳ ನಡುವೆ ಪೈಪೋಟಿ ನಡೆದಿತ್ತು. ಈ ಬಾರಿ ಮುಂಬೈ ತಂಡ ಸೇರ್ಪಡೆಯಾಗಿದೆ. ಅದರಂತೆ ಈ ಬಾರಿ ಕಣದಲ್ಲಿರುವ ತಂಡಗಳು ಈ ಕೆಳಗಿನಂತಿದೆ…
- ಬೆಂಗಳೂರು ಟಾರ್ಪಿಡೋಸ್
- ಮುಂಬೈ ಮಿಟಿಯರ್ಸ್
- ಚೆನ್ನೈ ಬ್ಲಿಟ್ಜ್
- ಅಹಮದಾಬಾದ್ ಡಿಫೆಂಡರ್ಸ್
- ಕ್ಯಾಲಿಕಟ್ ಹೀರೋಸ್
- ಹೈದರಾಬಾದ್ ಬ್ಲ್ಯಾಕ್ ಹಾಕ್ಸ್
- ಕೊಚ್ಚಿ ಬ್ಲೂ ಸ್ಪೈಕರ್ಸ್
- ಕೋಲ್ಕತ್ತಾ ಥಂಡರ್ ಬೋಲ್ಟ್ಸ್
ಬೆಂಗಳೂರು ಟಾರ್ಪಿಡೋಸ್ ತಂಡದ ವೇಳಾಪಟ್ಟಿ:
- ಫೆಬ್ರವರಿ 4: ಬೆಂಗಳೂರು ಟಾರ್ಪಿಡೋಸ್ vs ಕೋಲ್ಕತ್ತಾ ಥಂಡರ್ಬೋಲ್ಟ್ಸ್
- ಫೆಬ್ರವರಿ 9: ಬೆಂಗಳೂರು ಟಾರ್ಪಿಡೋಸ್ vs ಅಹಮದಾಬಾದ್ ಡಿಫೆಂಡರ್ಸ್
- ಫೆಬ್ರವರಿ 12: ಬೆಂಗಳೂರು ಟಾರ್ಪಿಡೋಸ್ vs ಮುಂಬೈ ಮಿಟಿಯರ್ಸ್
- ಫೆಬ್ರವರಿ 16: ಬೆಂಗಳೂರು ಟಾರ್ಪಿಡೋಸ್ vs ಚೆನ್ನೈ ಬ್ಲಿಟ್ಜ್
- ಫೆಬ್ರವರಿ 17: ಬೆಂಗಳೂರು ಟಾರ್ಪಿಡೋಸ್ vs ಕೊಚ್ಚಿ ಬ್ಲೂ ಸ್ಪೈಕರ್ಸ್
- ಫೆಬ್ರವರಿ 21: ಬೆಂಗಳೂರು ಟಾರ್ಪಿಡೋಸ್ vs ಹೈದರಾಬಾದ್ ಬ್ಲ್ಯಾಕ್ಹಾಕ್ಸ್
- ಫೆಬ್ರವರಿ 28: ಬೆಂಗಳೂರು ಟಾರ್ಪಿಡೋಸ್ vs ಕ್ಯಾಲಿಕಟ್ ಹೀರೋಸ್.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ ವೀಕ್ಷಿಸಬಹುದು?
ಈ ಪಂದ್ಯಗಳ ನೇರ ಪ್ರಸಾರವನ್ನು ಸೋನಿ ಟೆನ್ 1, ಸೋನಿ ಟೆನ್ 2, ಸೋನಿ ಟೆನ್ 3 (ಹಿಂದಿ), ಸೋನಿ ಟೆನ್ 4 (ತಮಿಳು/ತೆಲುಗು) ಚಾನೆಲ್ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಸೋನಿ ಲೈವ್ ಆ್ಯಪ್ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.