ಒಲಿಂಪಿಕ್ಸ್​ನಲ್ಲಿ ಮಿಂಚಲಿದ್ದಾರೆ ರಘು ದೀಕ್ಷಿತ್! ಪ್ಯಾರಿಸ್​ನಲ್ಲಿ ಪಸರಿಸಲಿದ್ದಾರೆ ಕನ್ನಡ ಕಂಪು!

ಕನ್ನಡದ ಗಾಯಕ (Singer) ರಘು ದೀಕ್ಷಿತ್ (Raghu Dixit) ಅವರ ಮ್ಯೂಸಿಕ್ (Music)​ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ತಮ್ಮ ವಿಭಿನ್ನ ವೇಷಭೂಷಣ, ಕನ್ನಡದ ಜಾನಪದ ಹಾಡುಗಳು ಮತ್ತು ಪ್ರಮುಖ ಕವಿಗಳ ಕವಿತೆಗಳನ್ನು ಹಾಡುವ ಮೂಲಕ ಕೇಳುಗರ ಮನ ಗೆದ್ದಿದ್ದಾರೆ. ರಘು ದೀಕ್ಷಿತ್ ಕರ್ನಾಟಕ (Karnataka) ಮತ್ತು ಭಾರತಕ್ಕೆ ಮಾತ್ರ ಸೀಮಿತರಾಗಿಲ್ಲ. ಬೇರೆ ದೇಶಗಲ್ಲೂ ಅಭಿಮಾನಿಗಳನ್ನ ಹೊಂದಿರುವ ಅವರು ನೂರಾರು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಕನ್ನಡ ಹಾಡುಗಳ ಕಂಪನ್ನು ಬೇರೆ ಬೇರೆ ದೇಶಗಳಿಗೆ ಪಸರಿಸಿರುವ ಅವರು ಇದೀಗ ಪ್ಯಾರಿಸ್ ಒಲಿಂಪಿಕ್ಸ್​ನಲ್ಲೂ (Paris Olympics) ಮಿಂಚಲಿದ್ದಾರೆ.

2 ದಿನ ರಘು ದೀಕ್ಷಿತ್ ಕಾರ್ಯಕ್ರಮ

ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿರುವ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸಂಗೀತ ಪ್ರದರ್ಶನ ನೀಡಲು ರಘು ದೀಕ್ಷಿತ್ ಸಿದ್ಧರಾಗಿದ್ದಾರೆ. ರಘು ದೀಕ್ಷಿತ್ ಅವರ ಬ್ಯಾಂಡ್ ಜುಲೈ 29 ಮತ್ತು 30 ರಂದು ಪಾರ್ಕ್ ಡೆ ಲಾ ವಿಲೆಟ್‌ನಲ್ಲಿರುವ ಒಲಿಂಪಿಕ್ ಹೌಸ್ ಆಫ್ ಇಂಡಿಯಾದಲ್ಲಿ ಪ್ರತಿ ದಿನ ಒಂದು ಗಂಟೆ ಕಾಲ ಸಂಗೀತ ಪ್ರದರ್ಶನ ನೀಡಲಿದೆ.

ಗೌರವದ ವಿಷಯ ಎಂದ ರಘು ದೀಕ್ಷಿತ್

ಈ ಹಿಂದೆ ಹಲವು ಬಾರಿ ಭಾರತವನ್ನು ಪ್ರತಿನಿಧಿಸಿರುವ ಈ ಬ್ಯಾಂಡ್​ನ​ ಮುಂದಾಳು ರಘು ದೀಕ್ಷಿತ್, ದೇಶವನ್ನು ಪ್ರತಿನಿಧಿಸುವಾಗ ಸಿಗುವ ಸಂತೋಷ ಎಂದಿಗೂ ಮರೆಯಾಗುವಂತದ್ದಲ್ಲ ಎಂದು ಹೇಳಿದ್ದಾರೆ . ಭಾರತವನ್ನು ಪ್ರತಿನಿಧಿಸುವುದು ಯಾವಾಗಲೂ ಗೌರವದ ವಿಚಾರ. ಒಂದೆರಡು ವರ್ಷಗಳ ಕಾಲ ನಾವು ಕೇನ್ಸ್‌ನಲ್ಲಿ ಪ್ರದರ್ಶನ ನೀಡಿದ್ದೇವೆ ಎಂದಿದ್ದಾರೆ. ಸಂತೋಷದ ವಿಚಾರ ಎಂದರೆ ಸಂಗೀತ ಪ್ರದರ್ಶನ ಬರಿ ಅಲ್ಲಿನ ಪ್ರತಿನಿಧಿಗಳಿಗೆ ಮಾತ್ರವಲ್ಲ, ಸಾರ್ವಜನಿಕರು ಕೂಡ ಆಗಮಿಸಬಹುದು ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಎಲ್ಲರೂ ನೃತ್ಯ ಮಾಡಬೇಕು

ನಮ್ಮ ಕಾರ್ಯಕ್ರಮದ ಸಮಯದಲ್ಲಿ ಎನರ್ಜಿ ಯಾವಾಗಲೂ ಹೆಚ್ಚಾಗಿರುವುದನ್ನು ನಾನು ಗಮನಿಸಿದ್ದೇನೆ. ಕಾರ್ಯಕ್ರಮದ ವೇಳೆ ಪ್ರತಿಯೊಬ್ಬರೂ ನೃತ್ಯ ಮಾಡಬೇಕು ಎಂಬ ನಿಯಮವನ್ನು ನಾವು ಅನುಸರಿಸುತ್ತಿದ್ದೇವೆ. ಬಂದ ಪ್ರೇಕ್ಷಕರು ಯಾರೆ ಆಗಿರಲಿ, ಪ್ರತಿಯೊಬ್ಬರೂ ನೃತ್ಯ ಮಾಡಬೇಕು ಎಂದು ರಘು ದೀಕ್ಷಿತ್ ಹೇಳಿದ್ದಾರೆ.

ಶಿಶುನಾಳ ಷರೀಫ, ಬೇಂದ್ರೆ ಕವನಗಳು

ನಮ್ಮ ಸಂಗೀತ 19ನೇ ಶತಮಾನದ ಕವಿ ಶಿಶುನಾಳ ಷರೀಫ ಅವರ ಸಾಂಪ್ರದಾಯಿಕ ಕಾವ್ಯವನ್ನು ಒಳಗೊಂಡಿರುತ್ತದೆ. ನಮ್ಮಲ್ಲಿ ಕಬೀರ ಮತ್ತು ಕನ್ನಡ ಕವಿ ದ.ರಾ.ಬೇಂದ್ರೆಯವರ ಕೆಲವು ಕವನಗಳಿವೆ. ನಮ್ಮಿಂದ ಸಾಕಷ್ಟು ಫ್ಯೂಷನ್ ಸಂಗೀತವನ್ನು ನೀವುನಿರೀಕ್ಷಿಸಬಹುದು” ಎಂದು ತಮ್ಮ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದಾರೆ. ಭಾರತೀಯ ತತ್ತ್ವಶಾಸ್ತ್ರವನ್ನು ವೇದಿಕೆಗೆ ತರುವುದು ನಮ್ಮ ಸಂಗೀತ ತಂಡದ ಕಲ್ಪನೆ. ಎಲ್ಲಾ ಹಾಡುಗಳು ನಮ್ಮ ಸಾಮರ್ಥ್ಯವನ್ನು ಗುರುತಿಸುವ ಬಗ್ಗೆ ಇವೆ. ಈ ಹಾಡುಗಳನ್ನು ಕೇಳುವ ಪ್ರೇಕ್ಷಕರು ಮತ್ತು ಕ್ರೀಡಾಪಟುಗಳು ತಮ್ಮ ಮಿತಿಗಳನ್ನು ಮೀರಿ ಅವರ ಸಾಮರ್ಥ್ಯವನ್ನು ಕಂಡುಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ ಅಂತ ರಘು ದೀಕ್ಷಿತ್ ವಿವರಿಸಿದ್ದಾರೆ.

ಡಿಫ್ರೆಂಟ್​ ಲುಕ್​ನಲ್ಲಿ ರಘು ದೀಕ್ಷಿತ್

ರಘು ದೀಕ್ಷಿತ್ ಅವರ ಸಂಗೀತವಷ್ಟೆ ಅಲ್ಲ ಅವರ ಉಡುಗೆ ತೊಡುಗೆಗಳು ಕೂಡ ಸಖತ್ ಡಿಫ್ರೆಂಟ್. ತಮ್ಮ ಉಡುಗೆ ಬಗ್ಗೆ ಮಾತನಾಡಿರುವ ಅವರು, ಆಲ್ಬಮ್‌ನ ಕೆಲಸದ ಹಿನ್ನೆಲೆ ಹೊರಗಡೆ ಇದ್ದೇವೆ. ಒಲಿಂಪಿಕ್ ಕಾರ್ಯಕ್ರಮದಲ್ಲಿ ಡಿಫ್ರೆಂಟ್​ ಲುಕ್ ಅಲ್ಲಿ ಕಾಣಿಸಿಕೊಳ್ಳಲಿದ್ದು, ಬೆಂಗಳೂರಿನ ವಿನ್ಯಾಸಕರಾದ ಸಂಜಯ್ ಮತ್ತು ಸೀಮಾ ಆದಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ರಘು ದೀಕ್ಷಿತ್ ಜೊತೆ ಭಾರತೀಯ ಮತ್ತು ಭಾರತೀಯ ಮೂಲದ ಕಲಾವಿದರಾದ ಶಾನ್, ಪೆನ್ ಮಸಾಲಾ, ಟಾಮಿ ಖೋಸ್ಲಾ ಮತ್ತು ಜವಾರಿ ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Source : https://kannada.news18.com/news/entertainment/raghu-dixit-to-perform-at-2024-paris-olympics-brm-1785261.html

 

Leave a Reply

Your email address will not be published. Required fields are marked *