“ನಾನು ರೈತನ ಮಗ, ಕುರಿ ಕಾದು ಈ ಹುದ್ದೆಗೆ ಬಂದವನು” – ರೈತರ ಮನವೊಲಿಸಲು ಮುಂದಾದ ಅಪರ ಜಿಲ್ಲಾಧಿಕಾರಿ ಕೆ.ಟಿ. ಕುಮಾರಸ್ವಾಮಿ
ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203
ಭೀಮಸಮುದ್ರ: ಭೀಮಸಮುದ್ರ ಗ್ರಾಮದ ಮೂಲಕ ಗಣಿ ಲಾರಿಗಳ ಸಂಚಾರದಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ವಿರೋಧಿಸಿ ಗಣಿ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ ಹಾಗೂ ಭೀಮಸಮುದ್ರ ರೈತ ಸಂಘದ ವತಿಯಿಂದ ನಡೆಯುತ್ತಿರುವ ಧರಣಿ ಭಾನುವಾರ 23ನೇ ದಿನಕ್ಕೆ ಕಾಲಿಟ್ಟಿತು.
ಧರಣಿ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಕೆ.ಟಿ. ಕುಮಾರಸ್ವಾಮಿ ಹಾಗೂ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಬಂಡಾರು ಭೇಟಿ ನೀಡಿ, ಧರಣಿನಿರತ ರೈತರು ಮತ್ತು ಗಣಿ ಭೂಬಾಧಿತ ಸದಸ್ಯರ ಸಮಸ್ಯೆಗಳನ್ನು ಆಲಿಸಿದರು. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಧರಣಿಯನ್ನು ಕೈಬಿಡುವಂತೆ ಅಧಿಕಾರಿಗಳು ಮನವಿ ಮಾಡಿದರು. ಆದರೆ, ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವವರೆಗೆ ಧರಣಿಯನ್ನು ಕೈಬಿಡುವುದಿಲ್ಲ ಎಂದು ರೈತರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಧರಣಿನಿರತರು, ಭೀಮಸಮುದ್ರ ಗ್ರಾಮದ ಒಳಭಾಗದಲ್ಲಿ ಯಾವುದೇ ಕಾರಣಕ್ಕೂ ಗಣಿ ಲಾರಿಗಳ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು. ನಿರಂತರ ಲಾರಿ ಸಂಚಾರದಿಂದ ಧೂಳು ಹೆಚ್ಚಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಶಾಲಾ ಮಕ್ಕಳ ಓಡಾಟಕ್ಕೂ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದರು.
ಗಣಿ ಲಾರಿಗಳ ಸಂಚಾರಕ್ಕೆ ಪರ್ಯಾಯವಾಗಿ ಪ್ರತ್ಯೇಕ ಕಾರಿಡಾರ್ ಅಥವಾ ಸೂಕ್ತ ಮಾರ್ಗವನ್ನು ರೂಪಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಲಾರಿಗಳನ್ನು ಸಂಚರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಧರಣಿಯನ್ನು ಮುಂದುವರಿಸಲಾಗುವುದು ಎಂದು ರೈತ ಸಂಘದ ಸದಸ್ಯರು ತಿಳಿಸಿದರು.
“ನಾನು ರೈತನ ಮಗ, ಕುರಿ ಕಾದು ಈ ಹುದ್ದೆಗೆ ಬಂದವನು”
ಧರಣಿನಿರತರೊಂದಿಗೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕೆ.ಟಿ. ಕುಮಾರಸ್ವಾಮಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಂಡು ಪರ್ಯಾಯ ವ್ಯವಸ್ಥೆ ರೂಪಿಸುವ ಭರವಸೆ ನೀಡಿದರು.
“ನಾನು ಒಬ್ಬ ರೈತನ ಮಗ. ನಮ್ಮ ತಂದೆ ಐಎಎಸ್ ಅಧಿಕಾರಿಯಾಗಿರಲಿಲ್ಲ. ನಾನು ಕುರಿ ಕಾದು, ಕಷ್ಟಪಟ್ಟು ಈ ಹುದ್ದೆಗೆ ಬಂದಿದ್ದೇನೆ. ಹೀಗಾಗಿ ರೈತರ ಮತ್ತು ಗ್ರಾಮಸ್ಥರ ಸಮಸ್ಯೆಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂದಿನ ದಿನಗಳಲ್ಲಿ ಸೂಕ್ತ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲಾಗುವುದು,” ಎಂದು ಅವರು ತಿಳಿಸಿದರು.
ನಿರಂತರ ಧರಣಿಯಿಂದ ಸಾರ್ವಜನಿಕರ ದಿನನಿತ್ಯದ ಕೆಲಸಗಳಿಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ, ಧರಣಿಯನ್ನು ಕೈಬಿಟ್ಟು ಆಡಳಿತದೊಂದಿಗೆ ಸಹಕರಿಸುವಂತೆ ಕುಮಾರಸ್ವಾಮಿ ಮನವಿ ಮಾಡಿದರು.
ಧೂಳಿನಿಂದ ಆರೋಗ್ಯ ಮತ್ತು ಬೆಳೆಗಳಿಗೆ ಹಾನಿ: ರೈತರ ಆರೋಪ
ಭೀಮಸಮುದ್ರದ ವೀರೇಶ್ ಮಾತನಾಡಿ, ಹಲವು ವರ್ಷಗಳಿಂದ ಗಣಿ ಲಾರಿಗಳು ಗ್ರಾಮದ ರಸ್ತೆಯಲ್ಲಿ ಸಂಚರಿಸುತ್ತಿದ್ದು, ವಾಹನಗಳಿಂದ ಏಳುವ ಧೂಳು ಜನರ ಕಣ್ಣು ಮತ್ತು ಉಸಿರಾಟದ ವ್ಯವಸ್ಥೆಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ ಎಂದು ಆರೋಪಿಸಿದರು.
“ಲಾರಿಗಳ ಸಂಚಾರದಿಂದ ಉಂಟಾಗುವ ಧೂಳು ಅಡಿಕೆ, ಬಾಳೆ ಹಾಗೂ ತೆಂಗಿನ ಬೆಳೆಗಳ ಮೇಲೆ ಕುಳಿತು ಬೆಳೆಗಳಿಗೆ ಹಾನಿಯಾಗುತ್ತಿದೆ. ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈ ಸಮಸ್ಯೆಯನ್ನು ಗಣಿ ಕಂಪನಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ,” ಎಂದು ಅವರು ದೂರಿದರು.
ವರ್ಷಗಳಿಂದ ರಸ್ತೆಯ ಸ್ಥಿತಿಯೂ ಹದಗೆಟ್ಟಿದ್ದು, ಬಿದರಗುಡಿ ಭಾಗದಿಂದ ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಅವರು ಹೇಳಿದರು.
ಅಂಬುಲೆನ್ಸ್ ಸಂಚಾರಕ್ಕೂ ಸಮಸ್ಯೆ
ಭೀಮಸಮುದ್ರ ರೈತ ಸಂಘದ ಅಧ್ಯಕ್ಷ ಶಂಕ್ರಮೂರ್ತಿ ಮಾತನಾಡಿ, “ನಾವು ನಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಧರಣಿ ನಡೆಸುತ್ತಿಲ್ಲ. ಸಾರ್ವಜನಿಕರ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಗ್ರಾಮಸ್ಥರ ಸಮಸ್ಯೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು,” ಎಂದು ಒತ್ತಾಯಿಸಿದರು.
ರಸ್ತೆಯ ದುಸ್ಥಿತಿಯಿಂದ ವಿ.ಪಾಳ್ಯ ಗ್ರಾಮಕ್ಕೆ ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ಸೇವೆಯೂ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಅವರು ಆರೋಪಿಸಿದರು. ರಾತ್ರಿ ವೇಳೆ ಯಾರಿಗಾದರೂ ಆರೋಗ್ಯ ಸಮಸ್ಯೆ ಉಂಟಾದರೆ ಆಸ್ಪತ್ರೆಗೆ ತೆರಳುವುದು ಕಷ್ಟಕರವಾಗಿದೆ ಎಂದು ತಿಳಿಸಿದರು.
ಕೆಲವು ದಿನಗಳ ಹಿಂದೆ ಭೀಮಸಮುದ್ರದ ರತ್ನಮ್ಮ ಅವರು ರಸ್ತೆಯಲ್ಲಿ ಬಿದ್ದು ಗಾಯಗೊಂಡು ದಾವಣಗೆರೆಯ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆಯನ್ನು ಉಲ್ಲೇಖಿಸಿದ ಅವರು, ಇಂತಹ ಪರಿಸ್ಥಿತಿಗಳಿಗೆ ರಸ್ತೆ ದುಸ್ಥಿತಿಯೂ ಕಾರಣವಾಗುತ್ತಿದೆ ಎಂದು ಹೇಳಿದರು.
ಗ್ರಾಮದೊಳಗಿನ ಗಣಿ ಲಾರಿ ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸಿ, ಪರ್ಯಾಯ ಮಾರ್ಗದ ಮೂಲಕ ಲಾರಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಸಮಸ್ಯೆಗೆ ಸೂಕ್ತ ಪರಿಹಾರ ದೊರೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಧರಣಿನಿರತರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಭೀಮಸಮುದ್ರ ರೈತ ಸಂಘದ ಅಧ್ಯಕ್ಷ ಶಂಕ್ರಮೂರ್ತಿ, ಪ್ರಸನ್ನಕುಮಾರ್, ಶೈಲೇಂದ್ರ, ರಘು, ವೀರೇಶ್, ಬಸವರಾಜಪ್ಪ, ವಿನಯ್ ಕುಮಾರ್ ಸೇರಿದಂತೆ ವಿ.ಪಾಳ್ಯ ಹಾಗೂ ಭೀಮಸಮುದ್ರ ಗ್ರಾಮಸ್ಥರು ಉಪಸ್ಥಿತರಿದ್ದರು.