ರಾಜ್ಯದ ಮತ್ತೊಂದು ಬ್ಯಾಂಕ್ ಲೈಸೆನ್ಸ್ ರದ್ದು ಮಾಡಿದ ಆರ್ ಬಿಐ ! ಇಂದಿನಿಂದಲೇ ಎಲ್ಲಾ ವ್ಯವಹಾರ ಕ್ಯಾನ್ಸಲ್

Reserve Bank of India: ರಿಸರ್ವ್ ಬ್ಯಾಂಕ್ ಹೇಳಿಕೆಯ ಪ್ರಕಾರ, ಇನ್ನು ಮುಂದೆ ಎರಡೂ ಬ್ಯಾಂಕುಗಳು ಯಾವುದೇ ರೀತಿಯ ಠೇವಣಿಗಳನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ ಈಗಾಗಲೇ ಖಾತೆಯಲ್ಲಿರುವ ಠೇವಣಿಗಳನ್ನು ಗ್ರಾಹಕರಿಗೆ ನೀಡಲು ಕೂಡಾ ಸಾಧ್ಯವಾಗುವುದಿಲ್ಲ. 

ಬೆಂಗಳೂರು : ನಿಯಮಗಳನ್ನು ಪಾಲಿಸದ ಬ್ಯಾಂಕ್‌ಗಳ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್‌ ನಿರಂತರವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿಂದೆ ಎಚ್‌ಡಿಎಫ್‌ಸಿ ಮತ್ತು ಎಚ್‌ಎಸ್‌ಬಿಸಿ ಬ್ಯಾಂಕ್‌ಗಳಿಗೆ ದಂಡ ವಿಧಿಸಿದ ನಂತರ, ಆರ್‌ಬಿಐ ಈಗ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ಬ್ಯಾಂಕ್‌ಗಳ ಪರವಾನಗಿಯನ್ನು ರದ್ದುಗೊಳಿಸಿದೆ. ಜುಲೈ 5, 2023 ರಂದು ಈ ಎರಡು ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಈ ಎರಡು ಬ್ಯಾಂಕ್ ಗಳ ಲೈಸೆನ್ಸ್ ರದ್ದುಗೊಳಿಸಿದ ನಂತರ ಯಾವುದೇ ರೀತಿಯ ಬ್ಯಾಂಕಿಂಗ್ ವ್ಯವಹಾರವನ್ನು ಮಾಡದಂತೆ ಎರಡೂ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ನೀಡಿದೆ. 

ಯಾವುದೇ ರೀತಿಯ ಠೇವಣಿಯನ್ನು ಸ್ವೀಕರಿಸುವುದು ಸಾಧ್ಯವಾಗುವುದಿಲ್ಲ : 
ಬುಲ್ಧಾನಾ ಮೂಲದ ಮಲ್ಕಾಪುರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮತ್ತು ಬೆಂಗಳೂರು ಮೂಲದ ಸುಶ್ರುತಿ ಸೌಹಾರ್ದ ಸಹಕಾರ ಬ್ಯಾಂಕ್ ನಿಯಮಿತ ಈ ಎರಡು ಬ್ಯಾಂಕ್ ಗಳ ಬ್ಯಾಂಕಿಂಗ್ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಆರ್‌ಬಿಐ ಹೇಳಿಕೆಯ ಪ್ರಕಾರ,  ಪರವಾನಗಿಗಳನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಎರಡೂ ಬ್ಯಾಂಕ್‌ಗಳು ಯಾವುದೇ ರೀತಿಯ ಠೇವಣಿಗಳನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ ಗ್ರಾಹಕರಿಗೆ ಠೇವಣಿ ನೀಡುವುದು ಕೂಡಾ  ಸಾಧ್ಯವಾಗುವುದಿಲ್ಲ.

ಈ ಬ್ಯಾಂಕ್ ಗಳಲ್ಲಿ ಹಣ ಜಮಾ ಮಾಡಿದವರ ಗತಿಯೇನು? : 
ಎರಡೂ ಸಹಕಾರಿ ಬ್ಯಾಂಕ್‌ಗಳ ಬಂಡವಾಳ ಮತ್ತು ಗಳಿಕೆಯ ಸಾಮರ್ಥ್ಯದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರೀಯ ಬ್ಯಾಂಕ್ ಈ ಕ್ರಮವನ್ನು ಕೈಗೊಂಡಿದೆ. ರಿಸರ್ವ್ ಬ್ಯಾಂಕ್ ಮಹಾರಾಷ್ಟ್ರದ ಸಹಕಾರಿ ಕಮಿಷನರ್ ಮತ್ತು ರಿಜಿಸ್ಟ್ರಾರ್ ಆಫ್ ಕೋಆಪರೇಟಿವ್ ಸೊಸೈಟಿಗಳಿಗೆ ಬ್ಯಾಂಕ್ ಅನ್ನು  ಮುಚ್ಚಲು ಮತ್ತು ಬ್ಯಾಂಕ್‌ಗೆ ಲಿಕ್ವಿಡೇಟರ್ ಅನ್ನು ನೇಮಿಸಲು ಆದೇಶವನ್ನು ನೀಡುವಂತೆ ಹೇಳಿದೆ. ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಯಿಂದ ಐದು ಲಕ್ಷ ರೂಪಾಯಿಗಳ ಮಿತಿಯವರೆಗಿನ ತನ್ನ ಠೇವಣಿಯ ಠೇವಣಿ ವಿಮಾ ಕ್ಲೈಮ್ ಮೊತ್ತವನ್ನು ಸ್ವೀಕರಿಸಲು ಪ್ರತಿಯೊಬ್ಬ ಠೇವಣಿದಾರರು ಅರ್ಹರಾಗಿರುತ್ತಾರೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

ಬ್ಯಾಂಕ್ ನೀಡಿರುವ ಮಾಹಿತಿಯ ಪ್ರಕಾರ, 97.60% ಠೇವಣಿದಾರರು ತಮ್ಮ ಠೇವಣಿಗಳ ಸಂಪೂರ್ಣ ಮೊತ್ತವನ್ನು ಡಿಐಸಿಜಿಸಿಯಿಂದ ಸ್ವೀಕರಿಸಲು ಅರ್ಹರಾಗಿರುತ್ತಾರೆ. ಮಲ್ಕಾಪುರ ಅರ್ಬನ್ ಕೋಆಪರೇಟಿವ್ ಬ್ಯಾಂಕ್‌ಗೆ ಬ್ಯಾಂಕಿಂಗ್ ವ್ಯವಹಾರ ನಡೆಸಲು ಅವಕಾಶ ನೀಡಿದರೆ ಅದು ಸಾರ್ವಜನಿಕ ಹಿತಾಸಕ್ತಿ ಮೇಲೆ ಪರಿಣಾಮ ಬೀರುತ್ತದೆ ಎಂದು ಆರ್‌ಬಿಐ ಹೇಳಿದೆ. ಮುಂಬರುವ ದಿನಗಳಲ್ಲಿ, ಪ್ರಸ್ತುತ ಆರ್ಥಿಕ ಸ್ಥಿತಿಯೊಂದಿಗೆ ಬ್ಯಾಂಕ್ ತನ್ನ ಠೇವಣಿದಾರರಿಗೆ ಸಂಪೂರ್ಣ ಪಾವತಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

Source : https://zeenews.india.com/kannada/business/rbi-cancels-license-of-shushruti-souharda-sahakara-bank-niyamita-bank-latest-news-143804

Leave a Reply

Your email address will not be published. Required fields are marked *