ರೆಪೊ ದರದಲ್ಲಿ ಯಾವುದೇ ಬದಲಾವಣೆಯಾಗದಿರುವ ಲಾಭವನ್ನು ಬ್ಯಾಂಕ್‌ಗಳಿಂದ ಸಾಲ ಪಡೆಯುವ ಗ್ರಾಹಕರು ಮತ್ತು ಈಗಾಗಲೇ ಸಾಲ ಪಡೆದಿರುವ ಗ್ರಾಹಕರು ಪಡೆಯುತ್ತಾರೆ.

ಬೆಂಗಳೂರು : ಬ್ಯಾಂಕ್‌ಗಳು ಬಡ್ಡಿ ದರ ಹೆಚ್ಚಾಗುತ್ತದೆ ಎನ್ನುವ ಆತಂಕದಲ್ಲಿದ್ದ ಗ್ರಾಹಕರು ಈಗ ನಿರಾಳವಾಗಿದ್ದಾರೆ. 43ನೇ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ (ಎಂಪಿಸಿ ಸಭೆ) ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸತತ ಎರಡನೇ ಬಾರಿಗೆ ರೆಪೊ ದರ ಹಳೆಯ ಮಟ್ಟದಲ್ಲಿಯೇ ಉಳಿಸಿಕೊಂಡಿದೆ.
ಒಂದು ವರ್ಷದಲ್ಲಿ ಎರಡೂವರೆ ಪ್ರತಿಶತದಷ್ಟು ರೆಪೊ ದರ ಹೆಚ್ಚಳ :
ವಿತ್ತೀಯ ನೀತಿ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ರೆಪೊ ದರವನ್ನು 6.5 ಪ್ರತಿಶತದಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ಹೇಳಿದರು. ಏರುತ್ತಿರುವ ಹಣದುಬ್ಬರ ದರವನ್ನು ನಿಯಂತ್ರಿಸುವ ಸಲುವಾಗಿ, RBI ಮೇ 2022 ರಿಂದ ರೆಪೊ ದರವನ್ನು ಎರಡೂವರೆ ಪ್ರತಿಶತದಷ್ಟು ಹೆಚ್ಚಿಸಿತ್ತು. ಕಳೆದ ವರ್ಷ ಶೇ.4ರಷ್ಟಿದ್ದ ರೆಪೊ ದರ ಈ ಬಾರಿ ಶೇ.6.5ಕ್ಕೆ ಏರಿಕೆಯಾಗಿದೆ.
ಯಾರಿಗೆ ಪರಿಹಾರ ಸಿಗಲಿದೆ? :
ರೆಪೊ ದರದಲ್ಲಿ ಯಾವುದೇ ಬದಲಾವಣೆಯಾಗದಿರುವ ಲಾಭವನ್ನು ಬ್ಯಾಂಕ್‌ಗಳಿಂದ ಸಾಲ ಪಡೆಯುವ ಗ್ರಾಹಕರು ಮತ್ತು ಈಗಾಗಲೇ ಸಾಲ ಪಡೆದಿರುವ ಗ್ರಾಹಕರು ಪಡೆಯುತ್ತಾರೆ. ಪ್ರಸ್ತುತ, ಯಾವುದೇ ರೀತಿಯ ಸಾಲದ ಮೇಲೆ ಬ್ಯಾಂಕ್‌ಗಳು ಬಡ್ಡಿದರವನ್ನು ಹೆಚ್ಚಿಸುವುದಿಲ್ಲ. ಒಂದು ವೇಳೆ ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿದರೆ ಅದರ ಪರಿಣಾಮ ಗ್ರಾಹಕರಿಗೆ ನೀಡುವ ಸಾಲದ ಮೇಲೆ ಬೀರುತ್ತದೆ.
ಷೇರುಪೇಟೆಯ ಸ್ಥಿತಿ :
ಗುರುವಾರ ಬೆಳಗ್ಗೆ ಷೇರುಪೇಟೆ ಕೊಂಚ ಕುಸಿತದೊಂದಿಗೆ ಆರಂಭವಾಯಿತು. ಆದರೆ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಆರ್‌ಬಿಐ ಪ್ರಕಟಿಸಿದ ನಂತರ ಷೇರುಪೇಟೆಯಲ್ಲಿ ಚೇತರಿಕೆ ಕಂಡು ಬಂದಿದೆ. ಬೆಳಗ್ಗೆ 10.20ರ ಸುಮಾರಿಗೆ ಸೆನ್ಸೆಕ್ಸ್ 162.52 ಅಂಕಗಳ ಏರಿಕೆಯೊಂದಿಗೆ 63,305.48 ಅಂಕಗಳ ಮಟ್ಟದಲ್ಲೂ, ನಿಫ್ಟಿ 46.40 ಅಂಕಗಳ ಏರಿಕೆಯೊಂದಿಗೆ 18,772.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ರೆಪೋ ದರ ಎಂದರೇನು? :
ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ದರವನ್ನು ರೆಪೊ ದರ ಎಂದು ಕರೆಯಲಾಗುತ್ತದೆ. ರೆಪೊ ದರವನ್ನು ಹೆಚ್ಚಿಸುವುದರಿಂದ ಬ್ಯಾಂಕ್‌ಗಳು ಆರ್‌ಬಿಐನಿಂದ ದುಬಾರಿ ದರದಲ್ಲಿ ಸಾಲ ಪಡೆಯುತ್ತವೆ. ಇದು ಗೃಹ ಸಾಲ, ಕಾರು ಸಾಲ ಮತ್ತು ವೈಯಕ್ತಿಕ ಸಾಲ ಇತ್ಯಾದಿಗಳ ಬಡ್ಡಿ ದರವನ್ನು ಹೆಚ್ಚಿಸುತ್ತದೆ, ಇದು ನಿಮ್ಮ EMI ಮೇಲೆ ನೇರ ಪರಿಣಾಮ ಬೀರುತ್ತದೆ.
Source : https://zeenews.india.com/kannada/business/rbi-good-news-to-customers-unchanged-repo-rate-139206