ಟಿಕ್‌ಟಾಕ್‌ ಚಾಲೆಂಜ್ ಸ್ವೀಕರಿಸಿ ಡಿಯೋಡ್ರೆಂಟ್ ಮೂಸಿದ 11 ವರ್ಷದ ಬಾಲಕಿ ಸಾವು.

ಇಂಟರ್‌ನೆಟ್‌ನಲ್ಲಿ ಅಪಾಯಕಾರಿ ಚಾಲೆಂಜ್ ಸ್ವೀಕರಿಸಿ ಡಿಯೋಡ್ರೆಂಟ್ ಮೂಸಿದ ಬಾಲಕಿಯೊಬ್ಬಳು ಸಾವನ್ನಪ್ಪಿದ ಆಘಾತಕಾರಿ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಕ್ರೋಮಿಂಗ್ ಎಂಬ ಹೆಸರಿನ ಅಪಾಯಕಾರಿ ಇಂಟರ್‌ನೆಟ್‌ ಸವಾಲಿನಲ್ಲಿ ಭಾಗವಹಿಸಿದ  ನಂತರ ಬಾಲಕಿ ಜೀವ ಕಳೆದುಕೊಂಡಿದ್ದಾಳೆ ಎಂದು ವರದಿಯಾಗಿದೆ. ಈಕೆ ಟಿಕ್‌ಟಾಕರ್ ಆಗಿದ್ದು, ಕೇವಲ 11 ವರ್ಷ ವಯಸ್ಸಾಗಿತ್ತು. ಬ್ರೆಜಿಲ್‌ನ ಪೆರ್ನಾಂಬುಕೊದ ಬೊಮ್ ಜಾರ್ಡಿಮ್ ನಿವಾಸಿ ಬ್ರೆಂಡಾ ಸೋಫಿಯಾ ಮೆಲೊ ಡಿ ಸಂತಾನ ಸಾವನ್ನಪ್ಪಿದ ಬಾಲಕಿ ಮಾರ್ಚ್‌ 9 ರಂದು ಈಕೆ ಸಾವನ್ನಪ್ಪಿದ್ದಾಳೆ. ಈಕೆಯ ಕೃತ್ಯವನ್ನು ವೈರಲ್ ಸೋಶಿಯಲ್ ಮೀಡಿಯಾ ಟ್ರೆಂಡ್ ಎಂದು ಹೇಳಲಾಗುತ್ತಿದೆ.

ಚಾಲೆಂಜ್‌ನ ಭಾಗವಾಗಿ ನಿರಂತರ ಡಿಯೋಡ್ರೆಂಟ್ ಮೂಸಿದ ಬಾಲಕಿ

ಬಾಲಕಿ ಬ್ರೆಂಡಾ ಟಿಕ್‌ಟಾಕ್‌ನಲ್ಲಿ ನಡೆಯುತ್ತಿರುವ ಈ ಚಾಲೆಂಜ್‌ನಲ್ಲಿ ನಿರಂತರವಾಗಿ ಭಾಗವಹಿಸಿದ ನಂತರ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ. ಈ ಚಾಲೆಂಜ್‌ನ ಭಾಗವಾಗಿ ಬಾಲಕಿ ನಿರಂತರವಾಗಿ ಈ ಡಿಯೋಡ್ರೆಂಟ್‌ನ ವಾಸನೆಯನ್ನು ಮೂಸಿದ್ದಾಳೆ. ಇದರ ಪರಿಣಾಮ ಆಕೆಗೆ ಆರೋಗ್ಯ ಸಮಸ್ಯೆ ಉಂಟಾಗಿ ನಂತರ ಹೃದಯಾಘಾತವಾಗಿದೆ. ಕೂಡಲೇ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು 40 ನಿಮಿಷಗಳ ಕಾಲ ಆಕೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದರೂ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ. 

ಮೃತ ಬಾಲಕಿ ಬ್ರೆಂಡಾ  EREF 19 ಡಿ ಜುಲ್ಹೋದಲ್ಲಿ ವಿದ್ಯಾರ್ಥಿನಿಯಾಗಿದ್ದಳು.  ಬ್ರೆಂಡಾ ಸೋಫಿಯಾ ಮೆಲೊ ಡಿ ಸಂತಾನ ಅವರ ನಿಧನಕ್ಕೆ ನಾನು ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ. ಅಪಾರ ನೋವಿನ ಈ ಕ್ಷಣದಲ್ಲಿ, ಎಲ್ಲಾ ಕುಟುಂಬ, ಸ್ನೇಹಿತರು ಮತ್ತು ಶಾಲಾ ಸಮುದಾಯದೊಂದಿಗೆ ನಾವು ಸಹಾನುಭೂತಿ ಹೊಂದಿದ್ದೇವೆ, ಈ ತುಂಬಲಾಗದ ನಷ್ಟವನ್ನು ತಡೆಯಲು ದೇವರು ಅವರಿಗೆ ಶಕ್ತಿ ಮತ್ತು ಸಾಂತ್ವನ ನೀಡಲಿ. ದೇವರು ತನ್ನ ಅನಂತ ಕರುಣೆಯಿಂದ ನಿಮ್ಮನ್ನು ಸ್ವೀಕರಿಸಲಿ ಎಂದು ಅಲ್ಲಿನ  ಮೇಯರ್ ಪ್ರೆಫೀಟೊ ಜಂಜಾವೊ ಅವರು ಬಾಲಕಿಯ ಸಾವಿಗೆ ಶೋಕ ವ್ಯಕ್ತಪಡಿಸಿದ್ದಾರೆ. 

ಏರೋಸಾಲ್ ಡಿಯೋಡರೆಂಟ್ ಅನ್ನು ಮೌಖಿಕವಾಗಿ ಉಸಿರಾಡಿದ್ದರಿಂದ ಆಕೆಯ ಸಾವು ಸಂಭವಿಸಿದೆ ಎಂದು ಅಲ್ಲಿನ ಅಧಿಕಾರಿಗಳು ವರದಿ ಮಾಡಿದ್ದಾರೆ. ಈ ಘಟನೆಯಿಂದಾಗಿ ಯುವ ಸಮೂಹ ಇಂಟರ್‌ನೆಟ್‌ನಲ್ಲಿ ಬರುವ ಅಪಾಯಕಾರಿ ಚಾಲೆಂಜ್‌ಗಳನ್ನು ಸ್ವೀಕರಿಸಿ ಜೀವಕ್ಕೆ ಅಪಾಯ ತಂದುಕೊಳ್ಳುವಂತಹ ಸವಾಲುಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. 

Source : https://kannada.asianetnews.com/health-life/girl-dies-after-participating-inhaling-deodorant-challenge-st27w6

Leave a Reply

Your email address will not be published. Required fields are marked *