ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಜ. 2:
ಈ ವರ್ಷ ನಡೆಯಲಿರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಈ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿದ್ದ ಸೈಯದ್ ಆಫಾಖ್ ಆಹಮ್ಮದ ಅವರು, ಸ್ಥಳೀಯ ಅಭ್ಯರ್ಥಿಯನ್ನು ಕಡೆಗಣಿಸಿ ಹೊರ ಜಿಲ್ಲೆಯ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಹೈಕಮಾಂಡ್‌ಗೆ ಪುನರ್ ಪರಿಶೀಲನೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ತಾವು ಈ ಕ್ಷೇತ್ರಕ್ಕೆ ಅಧಿಕೃತವಾಗಿ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರೂ ಪಕ್ಷ ತನ್ನನ್ನು ಪರಿಗಣಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ವರ್ಷದಿಂದ ಐದು ಜಿಲ್ಲೆಗಳಲ್ಲಿ ಸಂಚರಿಸಿ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದೇನೆ ಹಾಗೂ ಪದವೀಧರರನ್ನು ನೋಂದಣಿ ಮಾಡಿಸುವ ಮೂಲಕ ಮತದಾರರಾಗಿ ರೂಪಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ನಾನು, ನಿಷ್ಠಾವಂತ ಕಾರ್ಯಕರ್ತನಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು ಶ್ರಮಿಸಿದ್ದೇನೆ. ಆದರೂ ನನ್ನ ಸೇವೆಯನ್ನು ಕಡೆಗಣಿಸಿ ಬೇರೆ ಅಭ್ಯರ್ಥಿಯನ್ನು ಆಯ್ಕೆ ಮಾಡಿರುವುದು ನೋವು ತಂದಿದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ಹೈಕಮಾಂಡ್ ಮತ್ತೊಮ್ಮೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯನ್ನು ಪುನರ್ ಪರಿಶೀಲಿಸಿ, ತನ್ನನ್ನು ಪರಿಗಣಿಸುವಂತೆ ಸೈಯದ್ ಆಫಾಖ್ ಆಹಮ್ಮದ ಅವರು ಮನವಿ ಮಾಡಿದ್ದಾರೆ.
Views: 105