ಚಿತ್ರದುರ್ಗ ನ, 14
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಪಟ್ಟಣ, ನಗರ ವಾಸಿಗಳ ಜನರಲ್ಲಿ ಕಂಡುಬರುತ್ತಿದ್ದ ಸಕ್ಕರೆ, ರಕ್ತದೊತ್ತಡ ಸೇರಿ ವಿವಿಧ ಕಾಯಿಲೆಗಳು ಹಳ್ಳಿ ಜನರನ್ನು ಪ್ರವೇಶಿಸಿದೆ ಎಂದು ಎಂದು ಪಿಡಬ್ಲ್ಯುಡಿ ನಿವೃತ್ತ ಮುಖ್ಯ ಕಾರ್ಯದರ್ಶಿ ಕೃಷ್ಣಾರೆಡ್ಡಿ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಡಬನಕಟ್ಟೆ ಸಮೀಪದ ಹರ್ಷ ಫಾರ್ಮ್ ಆವರಣದಲ್ಲಿ ಕೋಟ್ಲ ಎಜುಕೇಷನಲ್ ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಿದ್ದ ಮೆಗಾ ಆರೋಗ್ಯ ಉಚಿತ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಟ್ಟಣ, ನಗರವಾಸಿಗಳು ಸಹಜವಾಗಿ ಹಳ್ಳಿ ಜನರು ಆರೋಗ್ಯವಾಗಿರುತ್ತಾರೆಂದು ಭಾವಿಸಿರುತ್ತೇವೆ. ಅದರಲ್ಲೂ ಸಕ್ಕರೆ, ರಕ್ತಹೀನತೆ, ರಕ್ತದೊತ್ತಡ, ದುರ್ಬಲ ಮಾಂಸಖಂಡ ಹೀಗೆ ವಿವಿಧ ರೋಗಗಳು ಹಳ್ಳಿ ಜನರನ್ನು ಕಾಡುವುದಿಲ್ಲವೆಂಬ ನಂಬಿಕೆಯೇ ಹೆಚ್ಚು. ಕಾರಣ ಅವರು ಸೊಪ್ಪು, ತರಕಾರಿ ಜೊತೆಗೆ ಶ್ರಮಜೀವನ ನಡೆಸುತ್ತಾರೆ. ಆದ್ದರಿಂದ ಅವರ ಬದುಕು ರೋಗಮುಕ್ತವಾಗಿರುತ್ತದೆ ಎಂಬ ವಿಶ್ವಾಸ ಇದೆ. ಆದರೆ. ಅದು ಸುಳ್ಳು. ಈಚೆಗೆ ಹಳ್ಳಿಗರು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸಣ್ಣ ರೋಗಗಳ ಕುರಿತು ನಿರ್ಲಕ್ಷ್ಯ, ಜೊತೆಗೆ ಅಶಿಸ್ತು ಜೀವನವೂ ಹಳ್ಳಿ ಪ್ರವೇಶಿಸಿದೆ. ಟಿವಿ, ಮೊಬೈಲ್, ಮದ್ಯ, ಧೂಮಪಾನ ದಾಸರಾಗಿರುವುದು. ಶ್ರಮವಹಿಸಿ ಕೆಲಸ ಮಾಡಲು ಇಷ್ಟಪಡದಿರುವುದು, ಸೊಪ್ಪು-ತರಕಾರಿ ಬದಲು ಫಾಸ್ಟ್‍ಫುಡ್ ಸೇವನೆ ಹೆಚ್ಚಾಗಿರುವುದು ರೋಗ ಪ್ರವೇಶಕ್ಕೆ ಕಾರಣವಾಗಿದೆ ಎಂದರು.
ಪೂರ್ವಿಕರ ಆಹಾರ-ಜೀವನ ಪದ್ಧತಿ ಮರೆತಿರುವುದೇ ಇದಕ್ಕೆಲ್ಲ ಕಾರಣ. ಹಳ್ಳಿಗಳಲ್ಲೂ ಕ್ಲಿನಿಕ್‍ಗಳು ಆರಂಭವಾಗುತ್ತಿರುವುದು ರೋಗಿಗಳ ಜನಸಂಖ್ಯೆ ಹೆಚ್ಚಾಗುತ್ತಿರುವುದರ ಸಂಕೇತ. ಆದ್ದರಿಂದ ನಾವೆಲ್ಲರೂ ಶಿಸ್ತುಜೀವನ, ಗುಣಮಟ್ಟದ ಆಹಾರ ಸೇವನೆಯತ್ತ ಗಮನಹರಿಸಬೇಕು. ಮುಖ್ಯವಾಗಿ ಸ್ಥಳೀಯವಾಗಿ ಸಿಗುವ ಸೊಪ್ಪು-ತರಕಾರಿ-ಕಾಳು ತಾಜಾ ಆಹಾರವನ್ನು ಶುದ್ಧೀಗೊಳಿಸಿ ಸೇವನೆ ಮಾಡಬೇಕು ಎಂದು ತಿಳಿಸಿದರು.
ಸಣ್ಣದಾಗಿ ಕಾಣಿಸಿಕೊಳ್ಳುವ ಕಾಯಿಲೆ ಕುರಿತು ನಿರ್ಲಕ್ಷ್ಯ ವಹಿಸಿದೆ ಸ್ಥಳೀಯ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಬೇಕು. ಯಾವುದೇ ರೀತಿ ಮೌಢ್ಯತೆಗೆ ಒಳಗಾಗಬಾರದು. ದುಡಿಮೆ ಎಷ್ಟೂ ಮುಖ್ಯವೋ ಆರೋಗ್ಯಕ್ಕೂ ಅಷ್ಟೇ ಪ್ರಾಮುಖ್ಯತೆ ನೀಡಬೇಕು. ಇಲ್ಲದಿದ್ದರೇ ಹಣ ಗಳಿಸಿಟ್ಟು ಅದನ್ನು ಅನುಭವಿಸಲು ಸಾಧ್ಯವಾಗದ ದುಸ್ಥಿತಿಗೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಲ್ಲೆಡೆಯೂ ಶುದ್ಧನೀರಿನ ಘಟಕಗಳು ಆರಂಭವಾಗಿವೆ. ಜೊತೆಗೆ ನೀರಾವರಿ ಪ್ರದೇಶ ಹೆಚ್ಚಾಗುತ್ತಿದೆ. ಕೃಷಿಕರು ಮೊದಲು ತಮ್ಮ ಕುಟುಂಬಕ್ಕೆ ಆಗುವಷ್ಟು ಪೌಷ್ಠಿಕಾಂಶವುಳ್ಳ ಬೆಳೆ ಬೆಳೆದುಕೊಳ್ಳಬೇಕು. ರೈತರು, ಕೃಷಿ ಕಾರ್ಮಿಕರು ಆರೋಗ್ಯವಾಗಿದ್ದರೇ ಮಾತ್ರ ಸಮೃದ್ಧ ನಾಡು ನಿರ್ಮಾಣ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಸಂಘ-ಸಂಸ್ಥೆಗಳು ಮಾಡಬೇಕೆಂದು ತಿಳಿಸಿದರು.
ಎಲ್ಲೆಡೆಯೂ ಕೋಟ್ಯಂತರ ರೂ. ವೆಚ್ಚ ಮಾಡಿ ಧಾರ್ಮಿಕ ಕೇಂದ್ರಗಳನ್ನು ನಿರ್ಮಾಣ ಮನಃಶಾಂತಿಗಾಗಿ ಮುಖ್ಯವಾಗಿದ್ದರೂ, ಅದರ ಜೊತೆಗೆ ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ ನೀಡಬೇಕು ದರು. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ವ್ಯವಸ್ಥೆ ಗಟ್ಟಿಗೊಳಿಸಲು ಸರ್ಕಾರ ಕೋಟ್ಯಂತರ ರೂ. ವ್ಯಯಿಸುತ್ತಿದೆ. ಅದು ಸದುಪಯೋಗ ಆಗಬೇಕಿದೆ. ಅಧಿಕಾರಿಗಳು, ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದರು.
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಡಾ.ಎಸ್.ಮನುರೆಡ್ಡಿ, ಡಾ.ಶ್ರೀವಿದ್ಯಾ, ಡಾ.ವೃಷಬ್, ಡಾ.ಹರ್ಷಿತಾ, ಡಾ.ಎಸ್.ಗೀತಾ, ಡಾ.ಜಯಪ್ರಕಾಶ್, ಡಾ.ಶಾಶನ್ ಜೆ.ರೆಡ್ಡಿ, ಡಾ.ಕಿಷೋರ್ ಇವರೆಲ್ಲರೂ ನೂರಾರು ಜನರ ಆರೋಗ್ಯ ತಪಾಸಣೆ ನಡೆಸಿದರು.
ಸಿಟಿ ಕ್ಲಬ್ ಅಧ್ಯಕ್ಷ ಎನ್.ಎಲ್.ವೆಂಕಟೇಶರೆಡ್ಡಿ, ಕುರುಬ ಸಂಘದ ತಾಲ್ಲೂಕಾಧ್ಯಕ್ಷ ಓಂಕಾರಪ್ಪ, ಗೌರವಾಧ್ಯಕ್ಷ ಡಿ.ಆರ್.ಲೋಕೇಶ್ವರಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೆಂಕಟಶಿವರೆಡ್ಡಿ, ಜನಾರ್ಧನ್ ಇತರರಿದ್ದರು.
Views: 14