ಅಮೆರಿಕದಲ್ಲಿ‌ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ

ನಟ, ನಿರ್ದೇಶಕ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿಗೆ ಇದೀಗ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ದೊರೆತಿದೆ.

‘ಕಾಂತಾರ’ ಸಿನಿಮಾದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಗುರುತಿಸಿಕೊಂಡಿದ್ದಾರೆ. ಕಾಂತಾರ ಚಿತ್ರದ ಸಕ್ಸಸ್​ ಬಳಿಕ ಈಗಾಗಲೇ ಸಾಕಷ್ಟು ಪ್ರಶಸ್ತಿಗಳನ್ನ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ರಿಷಬ್ ಶೆಟ್ಟಿ ಅವರು ಪತ್ನಿ ಪ್ರಗತಿ ಶೆಟ್ಟಿ ಜೊತೆ ಅಮೆರಿಕದ ವಾಷಿಂಗ್ಟನ್​ನ ಸಿಯಾಟಲ್​ಗೆ ಭೇಟಿ ನೀಡಿದ್ದರು‌. ಈ ವೇಳೆ, ಅಲ್ಲಿನ ಪ್ರತಿಷ್ಠಿತ ಪ್ಯಾರಾಮೌಂಟ್ ಥಿಯೇಟರ್​ನಲ್ಲಿ ನಟ ರಿಷಬ್ ಅವರಿಗೆ “ವಿಶ್ವ ಶ್ರೇಷ್ಠ ಕನ್ನಡಿಗ 2023” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಹೌದು, ಅಲ್ಲಿನ ಸಹ್ಯಾದ್ರಿ ಕನ್ನಡ ಸಂಘ ಹಾಗೂ ವಾಷಿಂಗ್ಟನ್ ರಾಜ್ಯದ ಕನ್ನಡಿಗರಾದ ಮನು ಗೌರವ್ ಮತ್ತು ತಂಡದವರು ರಿಷಬ್ ಶೆಟ್ಟಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸೆನೆಟರ್ ಡಾ.ದೆರೀಕ್ ಟ್ರಸ್ಫರ್ಡ್ ಸಹ ಉಪಸ್ಥಿತರಿದ್ದರು. ಅಮೆರಿಕ ಹಾಗೂ ವಾಷಿಂಗ್ಟನ್ ನಗರಕ್ಕೆ ಕನ್ನಡಿಗರು ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಿದ ಟ್ರಸ್ಫರ್ಡ್, ರಿಷಬ್ ಶೆಟ್ಟಿ ಅವರ “ಕಾಂತಾರ” ಸಿನಿಮಾವನ್ನು ಯುನಿವರ್ಸಲ್‌ ಸಿನಿಮಾ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಅಮೆರಿಕದ ಇಡೀ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದ ರಿಷಬ್ ಶೆಟ್ಟಿ, “ವಾಷಿಂಗ್ಟನ್​ನ ಸಿಯಾಟಲ್ ನಗರದ ಪ್ಯಾರಾಮೌಂಟ್ ಥಿಯೇಟರ್​ಗೆ 95 ವರ್ಷಗಳ ಇತಿಹಾಸವಿದೆ‌. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ಸಾಕಷ್ಟು ಗಣ್ಯರು ಈ ಸ್ಥಳದಲ್ಲಿ ಭಾಷಣ ಮಾಡಿದ್ದಾರೆ‌. ಅನೇಕ ಹೆಸರಾಂತ ಕಲಾವಿದರ ಕಾರ್ಯಕ್ರಮಗಳು ಇಲ್ಲಿ ನಡೆದಿದೆ‌.

ಇಂತಹ ಇತಿಹಾಸವಿರುವ ಪ್ಯಾರಾಮೌಂಟ್ ಥಿಯೇಟರ್​ನಲ್ಲಿ “ವಿಶ್ವ ಶ್ರೇಷ್ಠ ಕನ್ನಡಿಗ 2023″ ಗೌರವ ಪಡೆದಿರುವುದಕ್ಕೆ ಸಂತಸವಾಯಿತು” ಎಂದರು. ಇದಕ್ಕೂ ಮುನ್ನ ಸುಮಾರು ಐದು ಕೆಜಿ ತೂಕವಿರುವ ಚಿನ್ನದ ಲೇಪನ ಹೊಂದಿರುವ ಟ್ರೋಫಿ ನೀಡಲಾಯಿತು. 1,800 ಕ್ಕೂ ಅಧಿಕ ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇನ್ನು ಈ ಹಿಂದೆ ಅಂದ್ರೆ ಮಾರ್ಚ್​ 17 ರಂದು ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಭಾಗಿಯಾಗಿದ್ದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ವಿಶ್ವದ ಹಲವು ದೇಶದ ಪ್ರತಿನಿಧಿಗಳ ಮುಂದೆ ಕನ್ನಡದಲ್ಲೇ ನಮ್ಮ ಪರಿಸರ ಮತ್ತು ಅರಣ್ಯದಂಚಿನಲ್ಲಿರೋ ಜನರ ಸಮಸ್ಯೆಗಳ ಬಗ್ಗೆ ಮಾತನಾಡುವ ಮೂಲಕ ಭಾಷಾ ಅಭಿಮಾನ ಮೆರೆದಿದ್ದರು. ಈ ಮೂಲಕ ಕನ್ನಡದಲ್ಲಿ ಭಾಷಣ ಮಾಡಿದ ಮೊದಲ ಕನ್ನಡಿಗ ಎಂಬ ಕೀರ್ತಿಗೂ ಪಾತ್ರರಾಗಿದ್ದರು.

ಇನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಕಾಂತಾರ ಸಿನಿಮಾವು ಮನುಷ್ಯ ಮತ್ತು ಪ್ರಕೃತಿ ಸಂಘರ್ಷಗಳನ್ನು ಒಳಗೊಂಡಿದೆ. ಹಾಗೆಯೇ, ಜಾನಪದ ಮೂಲ ಕಥೆಯಾಗಿದೆ. ಸಿನಿಮಾದಲ್ಲಿ ಕಿಶೋರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಕೂಡ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ನೀಡಿದ್ದಾರೆ. ಒಟ್ಟಾರೆ ನಾಡಿನ ಸಂಸ್ಕೃತಿ, ಆಚರಣೆ, ಆಚಾರ ಹಾಗೂ ವಿಚಾರವನ್ನು ಸಿನಿಮಾ ಮೂಲಕ ತೋರಿಸಿರುವ ರಿಷಬ್‌ ಶೆಟ್ಟಿ, ಕನ್ನಡಿಗರಷ್ಟೇ ಅಲ್ಲ ಇಡೀ ದೇಶವೇ ಹೆಮ್ಮೆ ಪಡುವಂತೆ ಆಗಿದೆ.

Source : https://m.dailyhunt.in/news/india/kannada/etvbhar9348944527258-epaper-etvbhkn/amerikadalli+vishva+shreshtha+kannadiga+2023+prashasti+padedha+rishab+shetti-newsid-n513455508?listname=newspaperLanding&topic=homenews&index=5&topicIndex=0&mode=pwa&action=click

Leave a Reply

Your email address will not be published. Required fields are marked *