ದೇವಸ್ಥಾನಕ್ಕಿಂತ ಶಾಲೆಗಳು ಹೆಚ್ಚಾಗಬೇಕು: ಸದೃಢ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಆಧಾರ – ಬಿಇಒ ತಿಪ್ಪೇಸ್ವಾಮಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 01

ದೇವಸ್ಥಾನ, ಮಠಗಳಿಗಿಂತ ಹೆಚ್ಚಾಗಿ ಶಾಲೆಗಳು ತೆರೆದಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ಹೇಳಿದರು.

ವದ್ದಿಗೆರೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ವರ್ಷಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು. ಒಂದು ಕಾಲದಲ್ಲಿ ಶಿಕ್ಷಣ ಕೇಂದ್ರಗಳಾಗಿದ್ದ ದೇವಸ್ಥಾನ, ಮಠ ಮಾನ್ಯಗಳು ಪ್ರಸ್ತುತ ದಿನಗಳಲ್ಲಿ ಶಾಲೆಗಳಾಗಿ ಮಾರ್ಪಟ್ಟಿವೆ ದೇವಸ್ಥಾನ, ಮಠಗಳಿಗಿಂತ ಹೆಚ್ಚಾಗಿ ಶಾಲೆಗಳು ತೆರೆದಾಗ ಸದೃಢ ಸಮಾಜ ನಿರ್ಮಾಣ ಸಾಧ್ಯ. ವದ್ದಿಕೆರೆ ಸಿದ್ದೇಶ್ವರಸ್ವಾಮಿ ದೇವಸ್ಥಾನ ಇಡಿ ರಾಜ್ಯದಲ್ಲಿಯೇ ಪ್ರಸಿದ್ದ ಕ್ಷೇತ್ರವಾಗಿದೆ. ಹೊರ ರಾಜ್ಯಗಳಿಂದಲೂ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಗ್ರಾಮಸ್ಥರು ಸಹಕರಿಸಿದರೆ ಇಲ್ಲಿ ನೂತನವಾಗಿ ಶಾಲೆಯನ್ನು ಪ್ರಾರಂಭಿಸಬಹುದು ಎಂದು ತಿಳಿಸಿದರು.

ಹೊಸ ವರ್ಷದ ಅಂಗವಾಗಿ ಎಂ.ಗಿರಿಸುವರ್ಣಮ್ಮ, ಓಂಕಾರಮೂರ್ತಿ ಇವರುಗಳು ಸರ್ಕಾರಿ ಶಾಲೆಗೆ ಬಿಳಿ ಮತ್ತು ಹಸಿರು ಬೋರ್ಡ್‍ಗಳು, ಪ್ಲೇವುಡ್, ಕ್ರೀಡಾ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಸರ್ಕಾರಿ ಶಾಲೆಯ ಮಕ್ಕಳು ಉನ್ನತ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾಗಿರುವುದರಿಂದ ಪ್ರತಿ ವರ್ಷ ಇಬ್ಬರು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತೇವೆ. ವಿದ್ಯೆಗಿಂತ ದೊಡ್ಡ ಸಂಪತ್ತು ಯಾವುದು ಇಲ್ಲ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಕಾಂತರಾಜ್ ಮಾತನಾಡಿ ಇಲ್ಲಿ ದೇವಸ್ಥಾನ ಜಾಗ ಮತ್ತು ಸರ್ಕಾರಿ ಜಮೀನಿದ್ದು, ಮಕ್ಕಳ ಶಿಕ್ಷಣಕ್ಕೆ ಉಪಯೋಗವಾಗುವಂತ ಸ್ಥಳ ಗುರುತಿಸಿದರೆ ನೂತನ ಶಾಲಾ ನಿರ್ಮಾಣ ಮಾಡಲಾಗುವುದೆಂದರು. ನ್ಯಾಯವಾದಿ ಪ್ರತಾಪ್‍ಜೋಗಿ ಮಾತನಾಡುತ್ತ ಪ್ರಸ್ತುತ ದಿನಗಳಲ್ಲಿ ವದ್ದಿಕೆರೆಯ ಯುವಕರು, ಹಿರಿಯರು, ಎಸ್.ಡಿ.ಎಂ.ಸಿ. ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಸಿದ್ದೇಶ್ವರಸ್ವಾಮಿ ದೇವಸ್ಥಾನ ಸಮಿತಿಯವರು ಒಂದಾಗಿ ನೂತನ ಶಾಲಾ ಕಟ್ಟಡ ನಿರ್ಮಾಣ ಮಾಡಲು ಸಮ್ಮತಿಸಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಲಿದೆ ಎಂದರು.

ಎಸ್.ಡಿ.ಎಂ.ಸಿ. ಅಧ್ಯಕ್ಷ ಕರಿಬಸಪ್ಪ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಸಿದ್ದೇಶ್, ಸಿದ್ದಪ್ಪ, ನಿರಂಜನ್, ಸಿದ್ದೇಶ್ವರಸ್ವಾಮಿ ದೇವಸ್ಥಾನ ಸಮಿತಿಯ ಮಹೇಶ್, ರವೀಂದ್ರನಾಥ್, ಚಂದ್ರಣ್ಣ, ಸಿದ್ದಪ್ಪ, ಚಂದ್ರಪ್ಪ, ಅಶೋಕ್, ಗ್ರಾಮದ ಮುಖಂಡರುಗಳಾದ ಸಿದ್ದು, ಗಿರೀಶ್, ಸಿದ್ದಲಿಂಗ, ಗೋಪಿನಾಥ್, ಸಿದ್ದಾರ್ಥ, ಚೇತನ್, ಲಕ್ಷ್ಮಿದೇವಿ, ಮಂಜುಳ ಮುಖ್ಯೋಪಾಧ್ಯಾಯ ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು. ಅಶ್ವಿನಿ ವಂದಿಸಿದರು. ತಿಮ್ಮಣ್ಣ ನಿರೂಪಿಸಿದರು.

Views: 35

Leave a Reply

Your email address will not be published. Required fields are marked *