Kamala Harris Party Office Attacked : ಅಮೆರಿಕದಲ್ಲಿ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಗುಂಡಿನ ದಾಳಿ ನಡೆಸುವ ಘಟನೆಗಳೂ ಹೆಚ್ಚಾಗುತ್ತಿವೆ. ತಡರಾತ್ರಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಪಕ್ಷದ ಕಚೇರಿ ಮೇಲೆ ಅಪರಿಚಿತರು ಗುಂಡು ಹಾರಿಸಿದ್ದಾರೆ.
ನ್ಯೂಯಾರ್ಕ್: ನವೆಂಬರ್‌ನಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಅಹಿತಕರ ಘಟನಾವಳಿಗಳು ತೀವ್ರವಾಗುತ್ತಿವೆ. ತಡರಾತ್ರಿ ಕಮಲಾ ಹ್ಯಾರಿಸ್ ಪಕ್ಷದ ಕಚೇರಿ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ.
ಅರಿಜೋನಾದ ಡೆಮಾಕ್ರಟಿಕ್ ಪಕ್ಷದ ಪ್ರಚಾರ ಕಚೇರಿ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದರು. ತಕ್ಷಣ ಕಚೇರಿಯಲ್ಲಿದ್ದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ. ಕಟ್ಟಡದ ಕಿಟಕಿಗಳಿಂದ ಗುಂಡು ಹಾರಿಸಲಾಗಿದೆ. ಮಧ್ಯರಾತ್ರಿ ಕಚೇರಿಯಲ್ಲಿ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2 ಬಾರಿ ಟ್ರಂಪ್ ಹತ್ಯೆ ಯತ್ನ: ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ವಿರುದ್ಧ ಎರಡು ಬಾರಿ ಗುಂಡಿನ ದಾಳಿ ನಡೆಸಲಾಗಿತ್ತು. ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ಗಾಲ್ಫ್ ಆಡುತ್ತಿದ್ದಾಗ ವ್ಯಕ್ತಿಯೋರ್ವ, ಟ್ರಂಪ್ ಹತ್ಯೆಗೆ ಯತ್ನಿಸಿದ್ದ. ಆರೋಪಿ ಫೆನ್ಸಿಂಗ್‌ನಿಂದ ಬಂದೂಕು ಹಿಡಿದು ಬರುತ್ತಿರುವುದನ್ನು ಕಂಡ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ಇದಕ್ಕೂ ಎರಡು ತಿಂಗಳ ಹಿಂದೆ ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಗುಂಡು ಟ್ರಂಪ್ ಅವರ ಬಲ ಕಿವಿಗೆ ತಗುಲಿತ್ತು.
ಚುನಾವಣಾ ಕಣದಲ್ಲಿ ಕಮಲಾ ಹ್ಯಾರಿಸ್ ಮುಂದೆ: ಮತ್ತೊಂದೆಡೆ, ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಏಷ್ಯನ್-ಅಮೆರಿಕನ್ ಮತದಾರರಲ್ಲಿ ಶೇ 38ರಷ್ಟು ಅಂಕಗಳೊಂದಿಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗಿಂತ ಮುಂದಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಗಳು ತಿಳಿಸಿವೆ.
ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ NORC ನಡೆಸಿದ ಸಮೀಕ್ಷೆಯ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗಿದೆ. ಇದರ ಪ್ರಕಾರ, ಏಷ್ಯನ್-ಅಮೆರಿಕನ್ ಮತದಾರರಲ್ಲಿ ಶೇ 66ರಷ್ಟು ಜನರು ಹ್ಯಾರಿಸ್ ಅವರನ್ನು ಬೆಂಬಲಿಸಿದರೆ, ಶೇ 28ರಷ್ಟು ಜನರು ಟ್ರಂಪ್ ಅವರಿಗೆ ಬೆಂಬಲ ನೀಡಿದ್ದಾರೆ. ಬೈಡನ್ ಅಭ್ಯರ್ಥಿಯಾಗಿದ್ದಾಗ ನಡೆಸಿದ ಸಮೀಕ್ಷೆಯಲ್ಲಿ ಶೇ.46ರಷ್ಟು ಮಂದಿ ಬೈಡನ್‌ಗೆ ಬೆಂಬಲ ನೀಡಿದ್ದು, ಶೇ.31ರಷ್ಟು ಮಂದಿ ಟ್ರಂಪ್ ಪರವಾಗಿದ್ದರು.