ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 15
ಚದುರಿದ ಭೋವಿ ಜನಾಂಗವನ್ನು ಒಗ್ಗೂಡಿಸುವಲ್ಲಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ಶ್ರಮ ಅಪಾರವಾದದ್ದು ಎಂದು ಶಾಸಕ ಡಾ. ಎಂ ಚಂದ್ರಪ್ಪ ಶ್ಲಾಘಿಸಿದರು.
ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ಸಿದ್ಧರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಸಂಘಟನೆ ಮತ್ತು ಏಳಿಗೆಗಾಗಿ ಶ್ರೀಗಳು ಪಟ್ಟ ಶ್ರಮದ ಫಲವಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭೋವಿ ಸಂಘಟನೆಯನ್ನು ಕಟ್ಟಲು ಸಾಧ್ಯವಾಗಿದೆ ಎಂದು ತಿಳಿಸಿ2027 ಜನವರಿ 14ರಂದು ರಾಜ್ಯ ಮಟ್ಟದ ಬೃಹತ್ ಸಿದ್ದರಾಮೇಶ್ವರ ಜಯಂತಿಯನ್ನು ಹೊಳಲ್ಕೆರೆಯಲ್ಲಿ ನಡೆಸಲಾಗುವುದು ರಾಜ್ಯದ ಎಲ್ಲಾ ಮುಖಂಡರನ್ನು ಈ ಸಮಾವೇಶದಲ್ಲಿ ಸೇರಿಸಲಾಗುತ್ತದೆ ಎಂದು ಹೆಳಿದರು.
ಭೋವಿ ಗುರುರುಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ ಸಿದ್ಧರಾಮೇಶ್ವರರು ವಚನ ಚಳವಳಿಯ ಬಹುದೊಡ್ಡ ಶಕ್ತಿ. ಕಲ್ಯಾಣದಲ್ಲಿ ಶರಣರ ಮೇಲೆ ನಡೆದ ರಕ್ತಸಿಕ್ತ ಹಿಂಸೆಯ ನಂತರದಲ್ಲಿ ವಚನ ಸಾಹಿತ್ಯ ಮತ್ತು ಚಳವಳಿಯ ಚಲನಶೀಲತೆಯನ್ನು ಕಾಪಾಡಿದ್ದು ಸಿದ್ಧರಾಮೇಶ್ವರರು ಸಿದ್ಧರಾಮೇಶ್ವರರು ಶೈವ ಪರಂಪರೆಯಲಿದ್ದಾಗ ‘ಸ್ಥಾವರದಲಿ ನಿಷ್ಠೆ, ಭೂತಂಗಳಲಿ ಅನುಕಂಪೆ, ತಾನೇ ಪರಬೊಮ್ಮ’ ಎಂಬ ಅಪರೂಪದ ತಾತ್ವಿಕ ನಿಲುವಿನವರಾಗಿದ್ದರು. ಮುಂದೆ ಪ್ರಭುವಿನ ಪ್ರಭಾವದಿಂದ ಬಸವಕಲ್ಯಾಣಕ್ಕೆ ಆಗಮಿಸಿ ಶರಣತತ್ವದ ಕಬ್ಬಿನ ರಸವುಂಡ ಆನೆಯಂತಾಗುತ್ತಾರೆ, ಅವರಿಂದ ವಚನ ಸಾಹಿತ್ಯ ಸಮೃದ್ಧವಾಗುತ್ತದೆ. ಇಂದು ನಮ್ಮ ಕುಲಬಾಂಧವರೆಲ್ಲ ಸಿದ್ಧರಾಮೇಶ್ವರರನ್ನು ನಮ್ಮ ಕುಲಗುರುಗಳಾಗಿ ಆರಾಧಿಸುತ್ತಿದ್ದಾರೆ. ಆರಾಧನೆ ಕೇವಲ ಕುರುಡು ಆಚರಣೆಯಾಗಬಾರದು ಎಂಬ ಅಪೇಕ್ಷೆಯೊಂದಿಗೆ, ನಮ್ಮ ಗುರುಪೀಠದಿಂದ ಸಾಂಸ್ಕೃತಿಕವಾಗಿ ಸಿದ್ಧರಾಮೇಶ್ವರರ ಮೌಲ್ಯಗಳ ಪ್ರಚಾರವನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿದರು.
ಕುಂಚಟಿಗ ಗುರುಪೀಠದ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ ಸೀಮೆಯ ಮೀರಿದ ನಿಸ್ಸಿಮನು ಸಿದ್ದರಾಮಯ್ಯ ಎಂದು ಚನ್ನಬಸವಣ್ಣ ವರ್ಣಿಸುತ್ತಾನೆ. ಒಬ್ಬ ವ್ಯಕ್ತಿಯ ನಿಜವಾದ ಸಾಧನೆಯೆಂದರೆ, ತಾನು ನಿರ್ಮಿಸಿಕೊಂಡ ಎಲ್ಲೆಗಳನ್ನು ತಾನೇ ದಾಟಿ ಮುನ್ನಡೆಯುವುದು. ನಿಜ, ಸಿದ್ಧರಾಮೇಶ್ವರರು ಕಾಯಕ ವರ್ಗದವರ ಅಸ್ಮಿತೆ. ಬದುಕಿನ ಪರಿವರ್ತನೆಗೆ ದರ್ಪಣ ಸಿದ್ಧರಾಮರ ಜೀವನ. ಮೌಡ್ಯ ಸಂಪ್ರದಾಯಗಳಿಂದ ಮೌಲ್ಯ ಸಂಪ್ರದಾಯಗಳಿಗೆ ಹಾಡಿದವರು. ಜಲಕ್ರಾಂತಿ ಮೂಲಕ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದವರು. ಸ್ತ್ರೀ ಸಮಾನತೆಗೆ ಧ್ವನಿ ಎತ್ತಿದವರು. ವಚನ ಸಂರಕ್ಷಣೆಯಲ್ಲಿ ಅಗ್ರಜ. ಸಮಾಜದ ವಿಮರ್ಶೆಗೆ ಸಂಬಂಧಿಸಿದ ಇವರ ವಚನಗಳಲ್ಲಿ ಎರಡು ರೀತಿಯ ವೈಶಿಷ್ಟ್ಯ ಇದೆ. ಅವೆಂದರೆ ಮೌಡ್ಯದ ತಿರಸ್ಕಾರ ಹಾಗೂ ಬದುಕಿನ ಸತ್ಯದರ್ಶನ. ಪವಾಡ ಪರುಷ ಸಿದ್ಧರಾಮರು ಭಾವನಾತ್ಮಕವಾಗಿ ಹತ್ತಿರವಾದರೆ ವಚನಕಾರ ಸಿದ್ಧರಾಮರು ಜ್ಞಾನ ವಿಜ್ಞಾನಿಗಳ ಜಗತ್ತಿನಲ್ಲಿ ಸರ್ವಕಾಲಕ್ಕೂ ಸಲ್ಲುತ್ತಾರೆ ಎಂದರು.
ಕೊರಟಗೆರೆಯ ಮಹಾಲಿಂಗ ಸ್ವಾಮೀಜಿ ಮಾತನಾಡಿ ಸಿದ್ಧರಾಮರ ಬದುಕನ್ನು ಎರಡು ಘಟ್ಟಗಳಾಗಿ ವಿಂಗಡಿಸ ಬಹುದು. ಮೊದಲನೆಯದು ಜನಸಾಮಾನ್ಯರ ಹಾಗೂ ಕವಿಗಳ ದೃಷ್ಟಿಕೋನದ ಪವಾಡಪುರುಷ. ಎರಡನೇಯದು ಜ್ಞಾನಿಗಳ, ವಿಜ್ಞಾನಿಗಳ, ವಿಮರ್ಶಕರ, ಚಿಕಿತ್ಸಕರ, ಪ್ರಗತಿಪರರ ದೃಷ್ಟಿ ಕೋನದ ವಚನಕಾರ ಪರಿವರ್ತನ ಪುರುಷ ಎಂದರು. ಮೇದಾರ ಗುರುಪೀಠದ ಕೇತೇಶ್ವರ ಸ್ವಾಮೀಜಿ ಮಾತನಾಡಿ ಪವಾಡಪುರುಷರು ಕರ್ಮಯೋಗಿ ಸಿದ್ಧರಾಮರು. ಗಂಧರ್ವ ದೇವತೆಗಳಾದ ಆರ್ವಶಿರ ಊರ್ವಶಿರ ಎಂಬವರು ವಿಮೋಚನೆಗಾಗಿ ಮುದ್ದಲ ಗೌಡ ಪಾಪ ಸುಗ್ಗಲದೇವಿಯಾಗಿ ಜನ್ಮ ತಾಳುತ್ತಾರೆ. ಇವರ ಪಾಪವನ್ನು ಕಳೆಯಲು ಸ್ವತಃ ಪರಶಿವ ಇವರ ಗರ್ಭದಲ್ಲಿ ಸಿದ್ದರಾಮನಾಗಿ ಜನಿಸುತ್ತಾನೆ. ಜಂಗಮ ಸ್ವರೂಪಿ ಮಲ್ಲಯ್ಯ ದರ್ಶನಕ್ಕಾಗಿ ಶ್ರೀಶೈಲಕ್ಕೆ ಪ್ರಯಾಣಿಸಿದ ಬಾಲಕ ಸಿದ್ಧರಾಮ ದರ್ಶನ ಸಿಗದೇ ಇದ್ದಾಗ ಪ್ರಾಣಾರ್ಪಣೆಗೆ ಹೊರಡುತ್ತಾನೆ. ಆಗ ಸಾಕ್ಷಾತ್ ಶ್ರೀಶೈಲ ಮಲ್ಲಿಕಾರ್ಜುನ ಬಂದು ಕೈಲಾಸಕ್ಕೆ ಕರೆದುಕೊಂಡು ಹೋದ ಎನ್ನುವ ನಂಬಿಕೆ ಕವಿ ರಾಘವಾಂಕನದು. ಆತನನ ದೃಷ್ಟಿಯಲ್ಲಿ ನಾಥ ಪರಂಪರೆಯ ಅಗ್ರಜರಾಗಿ ಸಿದ್ದರಾಮ ಕಾಣಿಸುತ್ತಾರೆ ಎಂದರು.
ಬಂಜಾರ ಗುರುಪೀಠದ ನಂದಮಸಂದ ಸೇವಾಲಾಲ್ ಶ್ರೀಗಳು ಮಾತನಾಡಿ ವೈಚಾರಿಕತೆಯ ಪರಿವರ್ತನಾ ಪುರುಷ ಸಿದ್ಧರಾಮರು. ಶ್ರೀ ಪ್ರಭುದೇವರು ಚರಜಂಗಮರಾಗಿ ಸಂಚರಿಸಿ ಸೊನ್ನಲಾಪುರಕ್ಕೆ ಬರುವರು. ಪ್ರಭುದೇವರು ಕರ್ಮಯೋಗಿ ಸಿದ್ದರಾಮರಿಗೆ ಚನ್ನಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆ ಕೊಡಿಸಿ ಶಿವಯೋಗಿ ಸಿದ್ದರಾಮರನ್ನಾಗಿ ಪರಿವರ್ತನೆ ಮಾಡುತ್ತಾರೆ.
ಈ ಸಂದರ್ಭದಲ್ಲಿ ಔಅಅII ರಾಜ್ಯಾಧ್ಯಕ್ಷ ಹೆಚ್ ಆನಂದಪ್ಪ, ಬಂಡೆ ರುದ್ರಪ್ಪ, ಕಾಳಘಟ್ಟ ಹನುಮಂತಪ್ಪ, ಡಿ ಸಿ ಮೋಹನ, ಪೇಂಟ್ ತಿಮ್ಮಣ್ಣ, ಹೆಚ್. ಲಕ್ಷ್ಮಣ್, ಗೌನಹಳ್ಳಿ ಗೋವಿಂದಪ್ಪ, ಇಒ ರವಿಕುಮಾರ, ಪಿಡಿಎ ಆನಂದ, ಚಂದ್ರಶೇಖರ ಉಪಸ್ಥಿತರಿದ್ದರು. ಬಾಕ್ಸ್ ಸಿದ್ದರಾಮೇಶ್ವರ ಜಯಂತಿ ನಿಮಿತ್ತ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರಿಗೆ ಭೋವಿ ಸಮಾಜದ ಮುಖಂಡರಿಂದ 1.5 ಕೋಟಿಯ ಬಿಎಮ್‍ಡಬ್ಯೂ ಎಕ್ಸ7 ಕಾರನ್ನು ಉಡುಗೊರೆಯಾಗಿ ನೀಡಿದರು.
Views: 37