ಸಿದ್ದರಾಮಯ್ಯ 16 ನೇ ಬಜೆಟ್ ಗೆ ಕ್ಷಣಗಣನೆ- ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ ಆಗುತ್ತಾ ಆಯವ್ಯಯ?

ಹೈಲೈಟ್ಸ್‌:

  • 16 ನೇ ದಾಖಲೆ ಬಜೆಟ್ ಮಂಡನೆ ಮಾಡಲಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಅವರು ವಿಧಾನಸೌಧಕ್ಕೆ ಆಗಮಿಸಲಿದ್ದಾರೆ.
  • ಈ ಬಾರಿ ಕಾಲು ನೋವು ಇರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕುಳಿತುಕೊಂಡೇ ಬಜೆಟ್ ಮಂಡನೆ ಮಾಡಲಿದ್ದಾರೆ.
  • . ಬಜೆಟ್ ಮಂಡನೆಗೂ ಮುನ್ನ ಅವರು ಸಂಪುಟ ಸಭೆಯನ್ನು ನಡೆಸಿ ಅನುಮತಿ ಪಡೆದುಕೊಳ್ಳಲಿದ್ದಾರೆ.

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ತಮ್ಮ 16 ನೇ ದಾಖಲೆ ಬಜೆಟ್ ಮಂಡನೆ ಮಾಡಲಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಅವರು ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಬಜೆಟ್ ಮಂಡನೆಗೂ ಮುನ್ನ ಅವರು ಸಂಪುಟ ಸಭೆಯನ್ನು ನಡೆಸಿ ಅನುಮತಿ ಪಡೆದುಕೊಳ್ಳಲಿದ್ದಾರೆ. ಮಣಿಗಂಟು ನೋವಿನ ಕಾರಣದಿಂದಾಗಿ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್ ನ್ನು ಕುಳಿತುಕೊಂಡು ಓದುವ ಸಾಧ್ಯತೆ ಹೆಚ್ಚಿದೆ.

ಕಳೆದ ವರ್ಷ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ ಗಾತ್ರ 3.71 ಲಕ್ಷ ಕೋಟಿಯಾಗಿತ್ತು. ಸಿದ್ದರಾಮಯ್ಯ 16 ನೇ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಸಾಕಷ್ಟು ಕುತೂಹಲವೂ ಇದೆ. ಬಜೆಟ್ ಎಂಬುದು ಬರಿ ಹಾಳೆಗಳ ಮೇಲಿನ ಲೆಕ್ಕವಲ್ಲ, ರಾಜ್ಯದ ಏಳುಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ ಎನ್ನುವುದು ನನ್ನ ನಂಬಿಕೆ ಎಂದು ಸಿದ್ದರಾಮಯ್ಯ ಹೇಳಿರುವುದರಿಂದ ಈ ಬಾರಿ ಏನು ಕೊಡುಗೆ ಎಂಬ ಕುತೂಹಲವೂ ಕೆರಳಿಸಿದೆ.

16 ನೇ ಬಜೆಟ್ ಬಗ್ಗೆ ಸಿಎಂ ಏನಂದ್ರು?

ಕಳೆದ ಕೆಲವು ದಿನಗಳಿಂದ ನಮ್ಮ ಸಂಪುಟದ ಸಚಿವರು, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು, ರೈತ, ಶೋಷಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಧರ್ಮಗಳ ಗುರುಗಳೊಂದಿಗೆ ಸಭೆ ನಡೆಸಿ, ಪಕ್ಷಾತೀತವಾಗಿ ಸಮಾಜದ ಎಲ್ಲಾ ಜಾತಿ, ಜನಾಂಗ, ವರ್ಗದ ಜನರ ಆಶೋತ್ತರಗಳನ್ನು ಆಲಿಸಿ, ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಪ್ರಯತ್ನವನ್ನು ಈ ಬಜೆಟ್ ಮೂಲಕ ಮಾಡಿದ್ದೇನೆ.

ಬಜೆಟ್ ಎಂಬುದು ಬರಿ ಹಾಳೆಗಳ ಮೇಲಿನ ಲೆಕ್ಕವಲ್ಲ, ರಾಜ್ಯದ ಏಳುಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ ಎನ್ನುವುದು ನನ್ನ ನಂಬಿಕೆ. ನಾಡಿನ ಪ್ರತಿಯೊಬ್ಬ ಪ್ರಜೆಯನ್ನು ಸರ್ಕಾರದ ಯಾವುದಾದರೊಂದು ಯೋಜನೆಯ ಫಲಾನುಭವಿಯನ್ನಾಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಬಜೆಟ್ ಮೂಲಕ ಮಾಡಿದ್ದೇನೆ ಎನ್ನುವ ಭರವಸೆ ನನಗಿದೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.

ಕಳೆದ ಬಜೆಟ್ ಹೈಲೈಟ್ಸ್ ಏನೇನು?

*ನಮ್ಮ ಮೆಟ್ರೋ ಹಂತ -3 ಕ್ಕೆ 15,611 ಕೋಟಿ ಘೋಷಣೆ
*ಬೆಂಗಳೂರಿನ 28 ಪ್ರಮುಖ ಜಂಕ್ಷನ್‌ ಗಳಲ್ಲಿ ಸಂಚಾರ ಸಿಗ್ನಲ್ ಅಳವಡಿಕೆ
*27,000 ಕೋಟಿ ವೆಚ್ಚದ ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ಘೋಷಣೆ
*ಸ್ವಚ್ಛ ಮತ್ತು ಸುಂದರ ಬೆಂಗಳೂರು ನಿರ್ಮಾಣಕ್ಕೆ ಆದ್ಯತೆ, ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡಲು ಕ್ರಮ

*ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ 5000 ಕೋಟಿ ಮೀಸಲು

*ವಕ್ಫ್ ಆಸ್ತಿಗಳ ಅಭಿವೃದ್ದಿಗೆ 100 ಕೋಟಿ ಹಂಚಿಕೆ

*280 ಕೋಟಿ ವೆಚ್ಚದಲ್ಲಿ ಏಳು ಹೊಸ ತಾಲ್ಲೂಕು ಆಸ್ಪತ್ರೆಗಳ ನಿರ್ಮಾಣ

*ಎಸ್ ಸಿ/ ಎಸ್‌ ಟಿ ಸಮುದಾಯದ ಕಲ್ಯಾಣಕ್ಕಾಗಿ 39.121 ಕೋಟಿ ಹಂಚಿಕೆ

ಬಜೆಟ್ ನಲ್ಲಿ ಬಂದಿತ್ತು ರಾಜ್ ಕುಮಾರ್ ಅಭಿನಯ ಹಾಡು!

15 ನೇ ಬಜೆಟ್‌ ನಲ್ಲಿ ಸಿದ್ದರಾಮಯ್ಯ ಅವರು ವರನಟ ಡಾ. ರಾಜ್ ಕುಮಾರ್ ಅವರ ಹಾಡನ್ನು ಉಲ್ಲೇಖ ಮಾಡುವ ಮೂಲಕ ಗಮನ ಸೆಳೆದಿದ್ದರು. ಆಗದು ಎಂದು, ಕೈಗಾಗದು ಎಂದು ಕೈಕಟ್ಟಿ ಕುಳಿತರೆ, ಸಾಗದು ಕೆಲಸವು ಮುಂದೆ. ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದು ಎಂ ಹಾಡನ್ನು ಉಲ್ಲೇಖ ಮಾಡಿದ್ದರು. ಜೊತೆಗೆ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾದ ಡೈಲಾಗ್ ಒಂದು ತೋಟದಲ್ಲಿ ನೂರು ಹೂವು ಅರಳಲಿ, ಎಲ್ಲಾ ಕೂಡಿ ಆಡುವಂಥ ಗಾಳಿ ಬೀಸಲಿ ಎಂಬುವುದನ್ನು ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿದ್ದರು.

2024- 25 ನೇ ತೆರಿಗೆ ಸಂಗ್ರಹ ವಿವರ

ಮೋಟಾರು ವಾಹನ ತೆರಿಗೆ – 13000 ಕೋಟಿ
ನೋಂದಣಿ ಮತ್ತು ಮುದ್ರಾಂಕ – 26,000 ಕೋಟಿ
ರಾಜ್ಯ ಅಬಕಾರಿ – 38,525 ಕೋಟಿ
ಇತರೆ – 2368 ಕೋಟಿ
ವಾಣಿಜ್ಯ – 110000 ಕೋಟಿ

ಸುದೀರ್ಘ ಅವಧಿ ಬಜೆಟ್ ಮಂಡನೆ ಮಾಡಿದ್ದ ಸಿದ್ದು

ಕಳೆದ ವರ್ಷ 3 ಗಂಟೆಗೂ ಹೆಚ್ಚು ಕಾಲ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ದರು. ಬೆಳಗ್ಗೆ 10.15 ಕ್ಕೆ ಪ್ರಾರಂಭವಾಗಿ, ಮಧ್ಯಾಹ್ನ 1.30 ಕ್ಕೆ ಕೊನೆಗೊಂಡಿತ್ತು. ಈ ಬಾರಿ ಕಾಲು ನೋವು ಇರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕುಳಿತುಕೊಂಡೇ ಬಜೆಟ್ ಮಂಡನೆ ಮಾಡಲಿದ್ದಾರೆ.

Source : https://vijaykarnataka.com/news/karnataka/karnataka-budget-2025-countdown-to-siddaramaiahs-16th-budget-will-the-budget-become-a-guide-to-shaping-the-future-of-kannadigas/articleshow/118773926.cms

Leave a Reply

Your email address will not be published. Required fields are marked *