CBSEಯಲ್ಲಿ ಮಹತ್ವದ ಬದಲಾವಣೆ – ವರ್ಷಕ್ಕೆ 2 ಬಾರಿ 10ನೇ ತರಗತಿ ಪರೀಕ್ಷೆ ನಡೆಸಲು ನಿರ್ಧಾರ.

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 2026ರಿಂದ ವರ್ಷಕ್ಕೆ ಎರಡು ಬಾರಿ 10ನೇ ತರಗತಿ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ.

ಮಾಹಿತಿಗಳ ಪ್ರಕಾರ, ಫೆಬ್ರವರಿಯಲ್ಲಿ ನಡೆಯಲಿರುವ ಮೊದಲ ಹಂತದ ಪರೀಕ್ಷೆಯು 10ನೇ ತರಗತಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿರುತ್ತದೆ. ಮೇ ತಿಂಗಳಲ್ಲಿ ನಿಗದಿಯಾಗಿರುವ ಎರಡನೇ ಹಂತದ ಪರೀಕ್ಷೆ ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಬಯಸುವ ವಿದ್ಯಾರ್ಥಿಗಳಿಗೆ ಐಚ್ಛಿಕವಾಗಿರುತ್ತದೆ. ಶೈಕ್ಷಣಿಕ ಅವಧಿಯಲ್ಲಿ ಆಂತರಿಕ ಮೌಲ್ಯಮಾಪನವನ್ನು ಒಮ್ಮೆ ಮಾತ್ರ ನಡೆಸಲಾಗುತ್ತದೆ ಎಂದು ಸಿಬಿಎಸ್‌ಇ ತಿಳಿಸಿದೆ.

ಈ ಕುರಿತು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ಮಾತನಾಡಿ, ಮೊದಲ ಹಂತ ಫೆಬ್ರವರಿಯಲ್ಲಿ ಮತ್ತು ಎರಡನೇ ಹಂತ ಮೇ ತಿಂಗಳಲ್ಲಿ ನಡೆಯಲಿದೆ. ಎರಡು ಹಂತಗಳ ಫಲಿತಾಂಶಗಳನ್ನು ಕ್ರಮವಾಗಿ ಏಪ್ರಿಲ್ ಮತ್ತು ಜೂನ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಮೊದಲ ಹಂತಕ್ಕೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ. ಆದರೆ ಎರಡನೇ ಹಂತವು ಐಚ್ಛಿಕವಾಗಿರುತ್ತದೆ. ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಮತ್ತು ಇನ್ನೂ ಭಾಷೆಗಳಲ್ಲಿ ಯಾವುದೇ ಮೂರು ವಿಷಯಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು.ಕಳೆದ ತಿಂಗಳು, ಈ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಒತ್ತಡರಹಿತ ಕಲಿಕೆಯ ವಾತಾವರಣವನ್ನು ಸೃಷ್ಟಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಬಹುದಾಗಿದೆ. ಈ ನಿರ್ಧಾರ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಹೆಜ್ಜೆಯಾಗಿದೆ ಎಂದರು.

Leave a Reply

Your email address will not be published. Required fields are marked *