ನಿಮ್ಮ ಹೃದಯ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸುವ ಸೂಚನೆಗಳು.

ನಮ್ಮ ಇಡೀ ದೇಹದ ಚಲನೆ ನಿಂತಿರುವುದೇ ನಮ್ಮ ಹೃದಯದ ಬಡಿತದ ಮೇಲೆ. ನಾವು ಹುಟ್ಟಿದಾಗಿನಿಂದ ಸಾಯುವವರೆಗೂ ನಮ್ಮ ಹೃದಯ ತನ್ನ ಬಡಿತವನ್ನು ನಿಲ್ಲಿಸುವುದಿಲ್ಲ. ಈ ರೀತಿ ಹೃದಯ ತನ್ನ ಕಾರ್ಯ ಚಟುವಟಿಕೆಯನ್ನು ದಿನದ 24 ಗಂಟೆ ಮಾಡಬೇಕು ಎಂದರೆ ಅದಕ್ಕೆ ಪೂರಕವಾದ ವಾತಾವರಣ ನಮ್ಮ ದೇಹದಲ್ಲಿರಬೇಕು. ನಮ್ಮದೇ ಆದ ಕೆಟ್ಟ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಹೃದಯದ ಆರೋಗ್ಯಕ್ಕೆ ಮಾರಕ. ಇದು ಹೃದಯ ಬಡಿತವನ್ನು ಏರುಪೇರು ಮಾಡುತ್ತದೆ. ಕೆಲವೊಂದು ಚಿಹ್ನೆಗಳ ಪ್ರಕಾರ ನಮ್ಮ ಹೃದಯ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ತಿಳಿದುಕೊಳ್ಳಬಹುದು. ಅದೇ ತರಹ ಇನ್ನು ಕೆಲವು ಸೂಚನೆಗಳು ನಮ್ಮ ಹೃದಯದ ಆರೋಗ್ಯ ಚೆನ್ನಾಗಿದೆ ಎಂದು ತಿಳಿಸುತ್ತವೆ. ಇಲ್ಲಿ ಅವುಗಳ ಬಗ್ಗೆ ಮಾಹಿತಿ ಇದೆ.

ಉತ್ತಮ ಕೊಲೆಸ್ಟ್ರಾಲ್ ಮಟ್ಟ

ನೀವು ಆಗಾಗ ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸುತ್ತಿದ್ದರೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಮಿತಿಯಲ್ಲಿದ್ದರೆ, ನಿಮ್ಮ ಹೃದಯಕ್ಕೆ ಯಾವುದೇ ತೊಂದರೆ ಇಲ್ಲ ಎಂದರ್ಥ. ಏಕೆಂದರೆ ಕೊಲೆಸ್ಟ್ರಾಲ್ ನಮ್ಮ ದೇಹದಲ್ಲಿ ಹೆಚ್ಚಾದರೆ ಅದರಿಂದ ಹೃದಯ ಬಡಿತ ಏರುಪೇರಾಗುತ್ತದೆ ಮತ್ತು ಹೃದಯದ ಕಾರ್ಯ ಚಟುವಟಿಕೆಗೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಇದು ಹೃದಯದ ಕಾಯಿಲೆಗೂ ಕೂಡ ಕಾರಣವಾಗಬಹುದು.

ರಕ್ತದ ಒತ್ತಡ ಸರಿ ಇದ್ದರೆ

ನಿಮ್ಮ ರಕ್ತದ ಒತ್ತಡವನ್ನು ಕೂಡ ನೀವು ಆಗಾಗ ಪರೀಕ್ಷೆ ಮಾಡಿಸಿ ಕೊಳ್ಳುವುದು ಒಳ್ಳೆಯದು. ಸಹಜವಾದ ರಕ್ತದ ಒತ್ತಡ ನಿಮ್ಮ ಹೃದಯದ ಆರೋಗ್ಯವನ್ನು ಸೂಚಿಸುತ್ತದೆ. ರಕ್ತದ ಒತ್ತಡ ಹೆಚ್ಚು ಅಥವಾ ಕಡಿಮೆ ಆದರೆ ಅದರಿಂದ ಹೃದಯದ ಆರೋಗ್ಯಕ್ಕೆ ತೊಂದರೆ ಎನ್ನುತ್ತಾರೆ.

ಹೃದಯ ಬಡಿತ

ಒಂದು ನಿಮಿಷಕ್ಕೆ ನಿಮ್ಮ ಹೃದಯ ಎಷ್ಟು ಬಡಿದುಕೊಳ್ಳುತ್ತದೆ ಎನ್ನುವುದನ್ನು ಇದು ಸೂಚಿಸುತ್ತದೆ. ಹೃದಯ ಆರೋಗ್ಯವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿದುಕೊಳ್ಳಲು ಹೃದಯ ಬಡಿತದ ದರವನ್ನು ಪರೀಕ್ಷೆ ಮಾಡಬೇಕು. ಒಂದು ವೇಳೆ ನಿಮ್ಮ ಹಾರ್ಟ್ ಬೀಟ್ 60 ರಿಂದ 100 ಇದ್ದರೆ, ನಿಮ್ಮ ಹೃದಯದ ಆರೋಗ್ಯ ಚೆನ್ನಾಗಿದೆ ಎಂದರ್ಥ.

ಸುಸ್ತು, ಆಯಾಸ ಆಗದಿರುವುದು

ಇದು ನಿಮ್ಮ ದೇಹದ ಶಕ್ತಿಯ ಮಟ್ಟವನ್ನು ಸೂಚಿಸುತ್ತದೆ. ನಿಮಗೆ ಪದೇ ಪದೇ ಸುಸ್ತು, ಆಯಾಸ ಆಗುತ್ತಿದ್ದರೆ, ನಿಮ್ಮ ಹೃದಯ ಚೆನ್ನಾಗಿ ಕೆಲಸ ಮಾಡುತ್ತಿಲ್ಲ ಎಂದು ನೀವು ತಿಳಿದುಕೊಳ್ಳಬಹುದು. ರಾತ್ರಿಯ ಸಮಯ ದಲ್ಲಿ ಉತ್ತಮ ನಿದ್ರೆ ಮಾಡಿ ಬೆಳಗ್ಗೆ ಒಳ್ಳೆಯ ಶಕ್ತಿ ಹಾಗೂ ಚೈತನ್ಯದಿಂದ ಕೂಡಿದ್ದರೆ, ನಿಮ್ಮ ಹೃದಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ನೀವು ತಿಳಿದುಕೊಳ್ಳಬಹುದು.

ಚೆನ್ನಾಗಿ ವ್ಯಾಯಮ ಮಾಡುವುದು

ಕೆಲವರಿಗೆ ವ್ಯಾಯಾಮ ಮಾಡಲು ಕೂಡ ದೇಹ ದುರ್ಬಲವಾಗಿರುತ್ತದೆ. ವ್ಯಾಯಾಮ ಮಾಡಲು ಹೋದರೆ ಉಸಿರುಗಟ್ಟುವುದು, ಎದೆ ಹಿಡಿದುಕೊಂಡಂತೆ ಆಗುವುದು, ಸುಸ್ತು, ಆಯಾಸ ಎದುರಾಗುತ್ತದೆ. ನೀವು ಯಾವುದೇ ತೊಂದರೆ ಇಲ್ಲದೆ ಸರಾಗವಾಗಿ ವ್ಯಾಯಾಮ ಮಾಡಲು ಯಾವಾಗ ಮುಂದಾಗುತ್ತೀರಿ, ಆಗ ನಿಮ್ಮ ಹೃದಯ ಹಾಗೂ ಹೃದಯ ರಕ್ತನಾಳದ ಆರೋಗ್ಯ ಸರಿ ಇದೆ ಎಂದರ್ಥ.

ಚೆನ್ನಾಗಿ ಉಸಿರಾಡುವುದು

ಉಸಿರಾಟ ವ್ಯವಸ್ಥೆ ಕೂಡ ನಮ್ಮ ಹೃದಯದ ಆರೋಗ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಬಹುದು. ಸುಮ್ಮನೆ ಕುಳಿತಿದ್ದಾಗ ಅಥವಾ ಯಾವುದಾದರೂ ಕಾರ್ಯ ಚಟುವಟಿಕೆಯಲ್ಲಿ ತೊಡಗಿದ್ದಾಗ ನಾವು ಚೆನ್ನಾಗಿ ಉಸಿರಾಡುತ್ತಿದ್ದೇವೆ ಮತ್ತು ನಮ್ಮ ದೇಹದೊಳಗಿನ ಎಲ್ಲಾ ಅಂಗಾಂಗಗಳಿಗೆ ಸರಿಯಾಗಿ ಆಮ್ಲಜನಕ ಪೂರೈಕೆ ಆಗುತ್ತಿದೆ ಎಂದರೆ ನಮ್ಮ ಹೃದಯದ ಆರೋಗ್ಯ ಚೆನ್ನಾಗಿದೆ ಎಂದು ತಿಳಿದುಕೊಳ್ಳಬಹುದು.

ಉತ್ತಮ ದೈಹಿಕ ತೂಕ

ಹೃದಯದ ಆರೋಗ್ಯಕ್ಕೆ ದೇಹದ ತೂಕ ಕೂಡ ಬಹಳ ಮುಖ್ಯ. ದೇಹದ ತೂಕ ಹೆಚ್ಚಾದರೆ, ಅದು ಹೃದಯದ ಮೇಲೆ ಕೆಟ್ಟ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ಆರೋಗ್ಯ ತಜ್ಞರು ಬಾಡಿ ಮಾಸ್ ಇಂಡೆಕ್ಸ್ ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ಇದು 18.5 ರಿಂದ 24.9ರವರೆಗೆ ಇದ್ದರೆ, ಜೊತೆಗೆ ನಮ್ಮ ಜೀವನ ಶೈಲಿ ಚೆನ್ನಾಗಿದ್ದರೆ, ಹೃದಯ ಆರೋಗ್ಯಕರವಾಗಿದೆ ಎಂದರ್ಥ. ಹಾಗಾಗಿ ತೂಕ ನಿಯಂತ್ರಣ ಆರೋಗ್ಯಕರ ಹೃದಯದ ಮೇಲೆ ಬಹಳ ಉತ್ತಮ ಪ್ರಭಾವ ಬೀರಬಲ್ಲದು.

Source : https://vijaykarnataka.com/lifestyle/health/these-are-the-signs-which-indicates-our-heart-is-healthy-still/articleshow/116423694.cms?story=7

Leave a Reply

Your email address will not be published. Required fields are marked *