ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ಮಾ. 12
ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ)ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ವರ್ಗಾಯಿಸುವ ಪ್ರಸ್ತಾವನೆ ಯನ್ನು ಹಿಂಪಡೆಯುವಂತೆ ಹಾಗೂ ಇತರೆ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಸಂಘದ ಜಿಲ್ಲಾ ಘಟಕ ಗುರುವಾರ ಚಿತ್ರದುರ್ಗ ನಗರದಲ್ಲಿ ಮೌನ ಪ್ರತಿಭಟನೆ ನಡೆಸಿತು.

ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಬಿ. ಆರ್. ಮಲ್ಲೇಶ್ ಮಾತನಾಡಿ ರಾಜ್ಯದಲ್ಲಿ 1317 ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಹಾಗೂ 829 ಅನುದಾನಿತ ಪದವಿ ಪೂರ್ವ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇ ಶಕರು ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಆಡಳಿತಾತ್ಮಕ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಗುಣಮಟ್ಟದ ಶಿಕ್ಷಣ,ಪರಿಣಾಮಕಾರಿ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ.ಕರ್ನಾಟಕ ರಾಜ್ಯದ ಸಿಇಟಿ ಅರ್ಹತಾ ಪರೀಕ್ಷೆಗಳ ಆಯೋಜನೆ ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ. ಒಂದು ವೇಳೆ ಇಲಾಖೆಯ ಆಡಳಿತ, ಶೈಕ್ಷಣಿಕ,ಮಾನ್ಯತೆ, ನವೀಕರಣ, ಮೂಲಭೂತ ಸೌಕರ್ಯ ಒದಗಿಸುವ ಅಧಿಕಾರವನ್ನು ಜಿಲ್ಲಾ ಪಂಚಾಯತ್ ಸಿಇಒಗೆ ನೀಡಿದರೆ ಇಲಾಖೆಯ ಅಸ್ಮಿತೆಗೆ ಧಕ್ಕೆ ಆಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ರಾಜೇಶ್ ಪಿ.ಎಂ.ಜಿ ಮಾತನಾಡಿ ಕಳೆದ ಮೂರು ವರ್ಷಗಳಿಂದ ಉತ್ತರ ಪತ್ರಿಕೆ ಮೌಲ್ಯಮಾಪನ ಭತ್ಯೆ,ಪರೀಕ್ಷಾ ಸಂಭಾವನೆ ಪರಿಷ್ಕರಿಸಿಲ್ಲ. ಅಲ್ಲದೇ ಕಳೆದ ವರ್ಷದ ಬಾಕಿ ಇರುವ ಸಂಭಾವನೆಯನ್ನು ಖಾಸಗಿ ಹಾಗೂ ಅತಿಥಿ ಉಪನ್ಯಾಸಕರಿಗೆ ಈವರೆಗೂ ವಿತರಿಸಿಲ್ಲ ಎಂದರು.
ಜಿಲ್ಲಾ ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಕಾಂತರಾಜು ಮಾತನಾಡಿ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಹುದ್ದೆಗಳನ್ನು ತುಂಬದೆ ಇದ್ದರೆ ಆ ಕಾಲೇಜುಗಳಿಗೆ ಯಾವೊಬ್ಬ ವಿದ್ಯಾರ್ಥಿ ಪ್ರವೇಶಾತಿ ಹೊಂದದೆ ಆ ಕಾಲೇಜನ್ನು ಮುಚ್ಚಬೇಕಾಗುತ್ತದೆ.ಆದ್ದರಿಂದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ,ಪ್ರಾಂಶುಪಾಲರ ವರ್ಗಾವಣೆ ಹಾಗೂ ಪದೋನ್ನತಿ ಬಡ್ತಿ ಹೊಂದಿದ ಪ್ರಾಂಶುಪಾಲರ ಸ್ಥಳ ನಿಯುಕ್ತಿ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆಯನ್ನು ಪರಿಗಣಿಸದೆ ಎಲ್ಲಾ ಖಾಲಿ ಹುದ್ದೆಗಳನ್ನು ಯಾವುದೇ ನಿರ್ಬಂಧವಿಲ್ಲದೆ ಆಯ್ಕೆ ಮಾಡಲು ಮುಕ್ತ ಅವಕಾಶ ನೀಡಿದಾಗ ಮಾತ್ರ ಸರ್ಕಾರಿ ಕಾಲೇಜುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ನೌಕರರ ಸಂಘದ ಜಂಟಿ ಕಾರ್ಯದರ್ಶಿ ಹಾಗೂ ನಿರ್ದೇಶಕರಾದ ಎ.ನಾಗರಾಜ್ ಮಾತನಾಡಿ ನಮ್ಮ ನ್ಯಾಯಯುತ ಎಲ್ಲಾ ಬೇಡಿಕೆಗಳು ಈಡೇರದಿದ್ದರೆ 2026ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ-1 ರ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬಹಿಷ್ಕರಿಸಿ ರಾಜ್ಯದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು,ಬೋಧಕೇತರ ಸಿಬ್ಬಂದಿ ವರ್ಗದವರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿ ಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊಸದುರ್ಗ ತಾಲ್ಲೂಕು ಸಂಘದ ಕಾರ್ಯದರ್ಶಿ ಆರ್.ಮೂರ್ತಪ್ಪ ಮಾತನಾಡಿ ಕಾರ್ಯಭಾರ ಕೊರತೆ ಇರುವ ಅನುದಾನಿತ ಕಾಲೇಜುಗಳ ಉಪನ್ಯಾಸಕರನ್ನು ಸೇವೆಯಿಂದ ವಿಮುಕ್ತಿಗೊಳಿಸುವ ಆದೇಶವನ್ನು ಹಿಂಪಡೆದು ಸಮೀಪದ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯಭಾರ ನೀಡುವ ಕುರಿತು ಸಲ್ಲಿಸಲಾದ ಪ್ರಸ್ತಾವನೆಗೆ ಈ ಕೂಡಲೇ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಮೌನ ಪ್ರತಿಭಟನೆಯಲ್ಲಿ ಪ್ರಾಂಶುಪಾಲರಾದ ಸಣ್ಣಪಾಲಯ್ಯ, ಬಿ.ಕೃಷ್ಣಪ್ಪ, ಟಿ.ದುರುಗಪ್ಪ, ಎಸ್.ದೇವೆಂದ್ರಪ್ಪ. ಡಿ.ಎಸ್.ವೇದಮೂರ್ತಿ.ಕೆ.ನಾಗರಾಜಪ್ಪ,ಉಪನ್ಯಾಸಕರಾದಸಿ.ಕಲ್ಲಪ್ಪ,ರಾಜಭಕ್ಷಿ, ಹೆಚ್.ಎಸ್.ವಸಂತಕುಮಾರ್, ಪಿ.ಎ.ಶಿವಕುಮಾರ್,ಕಾಮಾಕ್ಷಿ,ಯಶೋಧ,ಪರೀದ್ಪರ್ವಿನ್,ಬಿ.ಸುರೇಶ.ಹೆಚ್.ಶ್ರೀನಿವಾಸ ಎನ್.ಟಿ. ನಾಗರಾಜ್, ಎಸ್.ಮಂಜುನಾಥ,ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ,ಟಿ.ಪೆನ್ನಯ್ಯ ಸೇರಿದಂತೆ ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.
ನಗರದ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
