ಚಿತ್ರದುರ್ಗದಲ್ಲಿ ಮೌನ ಪ್ರತಿಭಟನೆ; ದರ್ಶನ್‌ ಸೇರಿ ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆಗೆ ಆಗ್ರಹ.

ಚಿತ್ರದುರ್ಗ: ರೇಣುಕಾ ಸ್ವಾಮಿ ಹತ್ಯೆ ಖಂಡಿಸಿ (Renuka Swamy Murder Case) ನಗರದಲ್ಲಿ ಬುಧವಾರ 10ಕ್ಕೂ ಹೆಚ್ಚು ಸಂಘಟನೆಗಳಿಂದ ಮೌನ ಪ್ರತಿಭಟನೆ ನಡೆಸಲಾಯಿತು. ಬಜರಂಗದಳ, ವಿಶ್ವ ಹಿಂದು ಪರಿಷತ್, ಕನ್ನಡಪರ ಸಂಘಟನೆ, ರೈತ ಸಂಘಟನೆಗಳ 200ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ನಟ ದರ್ಶನ್‌ ಸೇರಿ ಇತರ 13 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ನಗರದ ನೀಲಕಂಠೇಶ್ವರ ದೇಗುಲದಿಂದ ಡಿಸಿ ಕಚೇರಿವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್, ನಗರಸಭಾ ಅಧ್ಯಕ್ಷರು, ಸದಸ್ಯರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು. ಪ್ರತಿಭಟನೆಗೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿದೆ.

ಈ ವೇಳೆ ಮಾಜಿ ಶಾಸಕ ಎಸ್.ಬಸವರಾಜನ್ ಮಾತನಾಡಿ, ಈ ಪ್ರಕರಣದಲ್ಲಿ ರಾಜಕಾರಣಿಗಳು ಪ್ರಭಾವ ಬೀರುವ ಸಾಧ್ಯತೆ ಇದೆ. ಸರ್ಕಾರ ಅವರ ಪರವಾಗಿ ಇರಬಹದು ಎನಿಸುತ್ತದೆ. ಕಾಂಗ್ರೆಸ್ ಪರ ದರ್ಶನ್ ಪ್ರಚಾರ ಮಾಡಿದರು, ಅದಕ್ಕಾಗಿ ಸರ್ಕಾರ ಅಥವಾ ರಾಜಕಾರಣಿಗಳು ಅವರ ಪರ ನಿಲ್ಲಬಹುದು. ಅದಕ್ಕಾಗಿ ಈ ಪ್ರಕರಣವನ್ನು ಸಿಬಿಐಗೆ ನೀಡುವುದು ಸೂಕ್ತ ಎಂದು ಹೇಳಿದರು.

ದರ್ಶನ್‌ಗೆ ಇರುವುದು ಅಂಧ ಅಭಿಮಾನಿಗಳು. ಇಂತ ಕೃತ್ಯ ಮಾಡಿದರೂ ಬೆಂಬಲ ಕೊಡುತ್ತಾರೆ ಎಂದರೆ ಏನರ್ಥ? ಅಭಿಮಾನಿಗಳು ನಟನ ತಪ್ಪು ತಿದ್ದಬೇಕು. ತಪ್ಪನ್ನೇ ಸರಿ ಎಂದು ಹುಬ್ಬೇರಿಸಬೇಡಿ. ಅಭಿಮಾನಿಗಳು ಹುಬ್ಬೇರಿಸಿದ್ದಕ್ಕೆ ಹೀಗೆ ಕೊಲೆ ಆಗಿದೆ. ಸೆಲೆಬ್ರಿಟಿ ತಪ್ಪಿಸಿಕೊಳ್ಳಲು ಪೊಲೀಸರು ಬಿಡಬಹುದಿತ್ತು. ಆದರೆ ಪೊಲೀಸರು ಹಾಗೆ ಮಾಡದೆ ಅರೆಸ್ಟ್ ಮಾಡಿದ್ದಾರೆ. ಪ್ರಭಾವಿ ರಾಜಕಾರಣಿಗಳಿಂದ ಪ್ರಕರಣ ದಾರಿ ತಪ್ಪಿಸುವ ಕೆಲಸ ಮಾಡಬಹುದು. ಅದಕ್ಕೆ ಅವಕಾಶ ಕೊಡದೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

ದರ್ಶನ್ ನಿಜ ಜೀವನದಲ್ಲಿ ಹೀರೋ ಅಲ್ಲವೇ ಅಲ್ಲ

ಬಿಜೆಪಿ ಮಾಜಿ ಶಾಸಕ ತಿಪ್ಪಾರೆಡ್ಡಿ ಮಾತನಾಡಿ, ನಟ ದರ್ಶನ್ ತೆರೆ ಮೇಲೆ ಸ್ಟಾರ್ ಆಗಿದ್ದಾರೆ, ಆದರೆ ನಿಜ ಜೀವನದಲ್ಲಿ ಅವರು ಹೀರೋ ಅಲ್ಲವೇ ಅಲ್ಲ. ರೇಣುಕಾ ಸ್ವಾಮಿ ತಂದೆ-ತಾಯಿ ಗೋಳು ನೋಡೋಕೆ ಆಗಲ್ಲ. ಈ ಸರ್ಕಾರ ಬಂದಾಗಿನಿಂದ ಇಂತ ಘಟನೆಗಳು ನಡೆಯುತ್ತಿವೆ. A1 ಆಗಿದ್ದ ದರ್ಶನ್‌ನ A2 ಮಾಡಿದ್ದೇಕೆ? ಪ್ರಕರಣದಿಂದ ತಪ್ಪಿಸಲು ಹೀಗೆ ಮಾಡಿದ್ದಾರೆ. ಗೃಹ ಸಚಿವ ಪರಮೇಶ್ವರ್ ಮಾತ್ರ ಏನೂ ಆಗಿಲ್ಲ ಎನ್ನೋ ತರ ಮಾತಾಡುತ್ತಾರೆ. ಸರ್ಕಾರ ಇಂತ ಪ್ರಕರಣಗಳನ್ನು ಕೇರ್ ಲೆಸ್ ಮಾಡಬಹುದು. ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು. ಆರೋಪಿಗಳು ರಿಲೀಸ್ ಆಗಬಾರದು, ಬಿಡುಗಡೆಯಾದರೆ ನಾವು ದೊಡ್ಡ ಮಟ್ಟದ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Source : https://vistaranews.com/karnataka/renuka-swamy-murder-case-massive-protest-in-chitradurga-against-renuka-swamys-murder/672396.html

Leave a Reply

Your email address will not be published. Required fields are marked *