Health Tips: ಚಳಿಗಾಲ ಹೆಚ್ಚಾಗುತ್ತಿದ್ದಂತೆ ಮಕ್ಕಳ ಆರೋಗ್ಯದ ಮೇಲೆ ವಿಶೇಷ ಗಮನ ಹರಿಸುವುದು ಅತ್ಯಂತ ಅಗತ್ಯ. ಈ ಸಮಯದಲ್ಲಿ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ನೆಗಡಿ, ಕೆಮ್ಮು, ಜ್ವರದಂತಹ ಸೋಂಕುಗಳು ಮಕ್ಕಳನ್ನು ಬೇಗ ತೊಂದರೆಗೆ ಒಳಪಡಿಸುತ್ತವೆ. ವಿಶೇಷವಾಗಿ ಅಂಗನವಾಡಿ, ಎಲ್‌ಕೆಜಿ, ಯುಕೆಜಿ ಹಾಗೂ ಶಾಲೆಗಳಿಗೆ ಹೋಗುವ ಮಕ್ಕಳಲ್ಲಿ ಇವು ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತವೆ.
ಚಳಿಗಾಲದಲ್ಲಿ ಮಕ್ಕಳ ಆರೋಗ್ಯ ರಕ್ಷಣೆಗೆ ಪ್ರಮುಖವಾದುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಪ್ರತಿವರ್ಷ ಫ್ಲೂ ಲಸಿಕೆ ಹಾಕಿಸುವುದರಿಂದ ಮಕ್ಕಳ ದೇಹದ ಪ್ರತಿರೋಧ ಶಕ್ತಿ ಹೆಚ್ಚಾಗಿ, ಸೋಂಕು ಬಂದರೂ ಅದರ ತೀವ್ರತೆ ಕಡಿಮೆಯಾಗುತ್ತದೆ. ಜೊತೆಗೆ ಪೌಷ್ಟಿಕ ಆಹಾರವನ್ನು ಮಕ್ಕಳ ದಿನಚರಿಯಲ್ಲಿ ಕಡ್ಡಾಯವಾಗಿ ಸೇರಿಸಬೇಕು.
ವಿಟಮಿನ್ಸ್ ಮತ್ತು ಪೋಷಕಾಂಶಗಳಿರುವ ಆಹಾರಗಳು ಮಕ್ಕಳ ಆರೋಗ್ಯಕ್ಕೆ ಬಹಳ ಮುಖ್ಯ. ಜಂಕ್ ಫುಡ್ ಮತ್ತು ಪ್ಯಾಕ್ ಮಾಡಿದ ತಿನಿಸುಗಳು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಕುಂದಿಸುವುದರಿಂದ ಅವುಗಳಿಂದ ದೂರವಿರಿಸುವುದು ಉತ್ತಮ. ಸಿರಿಧಾನ್ಯಗಳು, ಚಳಿಗಾಲದ ಹಣ್ಣುಗಳು, ಮೊಳಕೆಯಿಟ್ಟ ಕಾಳುಗಳು, ಮೀನು ಹಾಗೂ ಬೇಯಿಸಿದ ಮೊಟ್ಟೆಗಳು ಮಕ್ಕಳಿಗೆ ಶಕ್ತಿ ನೀಡುವ ಆಹಾರಗಳಾಗಿವೆ.
ಚಳಿ ಹೆಚ್ಚಾಗಿರುವ ದಿನಗಳಲ್ಲಿ ಮಕ್ಕಳಿಗೆ ಸ್ವಲ್ಪ ಸಮಯ ಬಿಸಿಲು ತಾಗುವಂತೆ ನೋಡಿಕೊಳ್ಳಬೇಕು. ಬೆಳಗ್ಗೆ ಕೈಕಾಲುಗಳನ್ನು ಬಿಸಿ ನೀರಿನಲ್ಲಿ ತೊಳೆಯಿಸುವುದು ಒಳ್ಳೆಯದು. ಮಕ್ಕಳಿಗೆ ಸಾಕಷ್ಟು ನೀರು ಕುಡಿಯುವ ಅಭ್ಯಾಸ ಬೆಳೆಸಬೇಕು. ಮಲಗಿಕೊಂಡು ಆಹಾರ ಸೇವಿಸಲು ಬಿಡಬಾರದು, ಇದರಿಂದ ಜೀರ್ಣಕ್ರಿಯೆಗೆ ತೊಂದರೆ ಉಂಟಾಗಬಹುದು.
ನೆಗಡಿ ಅಥವಾ ಕೆಮ್ಮು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ. ನಿರ್ಲಕ್ಷ್ಯ ಮಾಡಿದರೆ ಅದು ಕಫವಾಗಿ ಗಂಭೀರ ಸಮಸ್ಯೆಗೆ ಕಾರಣವಾಗಬಹುದು. ಚಳಿಗಾಲದಲ್ಲಿ ಸಣ್ಣ ಎಚ್ಚರಿಕೆಗಳು ಮತ್ತು ಸರಿಯಾದ ಆರೈಕೆ ಮಕ್ಕಳನ್ನು ಆರೋಗ್ಯಕರವಾಗಿ ಇಡುವಲ್ಲಿ ದೊಡ್ಡ ಪಾತ್ರವಹಿಸುತ್ತವೆ.