“Skin Care”: ಮಳೆಗಾಲದಲ್ಲಿ ಚರ್ಮದ ಆರೋಗ್ಯ

Health Tips:ಬೆವರಿನ ಬವಣೆ ತಪ್ಪಿತು ಎಂಬ ನಿರಾಳತೆ ಮಳೆಗಾಲದುದ್ದಕ್ಕೆ ಮನಗಾಣುವೆವು. ಚರ್ಮದ ಕೊಳೆ ತೊಳೆಯುವ ಮೂಲ ಉದ್ದೇಶವೇ ಬೆವರಿನದು. ವಾಸ್ತವವಾಗಿ ಈ ಬೆವರಿನ ಪ್ರಮಾಣ ಇಳಿಕೆ. ಹೀಗಾಗಿ ಚರ್ಮದಲ್ಲಿ ಮಲಿನಾಂಶ ಶೇಖರ. ತುರಿಕೆ, ಕಜ್ಜಿ ಆರಂಭ. ಕೊನೆಗೆ ಮಳೆಗಾಲದ ಹಣ್ಣಿನ ರಾಜ ಮಾವು, ಹಲಸಿನ ಮೇಲೆ ದೋಷಾರೋಪಣೆ.

ಅವು ನಂಜು, ಹೆಚ್ಚು ತಿಂದರೆ ಚರ್ಮದಲ್ಲಿ ಬೊಕ್ಕೆ, ಕುರು, ಕಜ್ಜಿ , ದದ್ದು ಮತ್ತು ಕೆಸರು ಹುಣ್ಣು ಎಂಬ ಅಭಿಪ್ರಾಯ ನಮಗಿದೆ.

ಇಳೆಯ ಮಳೆ ತಂಪು ತರುವುದು. ಬೆವರು ಇಳಿದು ಹದ ಚಳಿ ಇದ್ದೀತು. ಆಗ ಧರಿಸುವ ಬಿಗಿ ಉಡುಪು, ವಿಶೇಷತಃ ಕೃತಕ ನೂಲಿನ ದಿರಸು ಕೂಡ ತ್ವಚೆಗೆ ತ್ರಾಸದಾಯಕ. ಒಣಗದ ಬಟ್ಟೆ ಧರಿಸುವ ದೆಸೆಯಿಂದಲೂ ಇಂತಹ ಕಿರಿಕಿರಿಯ ಕಾಯಿಲೆಗಳಿಗೆ ಆಸ್ಪದ. ನೆನಪಿಡಿ. ಹಗುರ ಮತ್ತು ಚೆನ್ನಾಗಿ ಒಣಗಿದ ಹತ್ತಿಬಟ್ಟೆಯ ಸಹವಾಸ, ಕೂಸಾಗಲಿ, ಹಿರಿ ಹರೆಯದವರಿಗಾಗಲಿ ಖಂಡಿತ ಅತ್ಯಗತ್ಯ. ಕಂಕುಳು, ತೊಡೆ ಸಂದು, ಗುಪ್ತಾಂಗಗಳು, ಮಹಿಳೆಯರ ಎದೆಗಟ್ಟಿನ ಕೆಳಗಿದೆ ಚರ್ಮ ತುರಿಕೆ, ಬಣ್ಣಗೆಡುವ ಮತ್ತು ಹಿರಿ, ಕಿರಿ ಗುಳ್ಳೆಗಳೇಳುವ ಅವಕಾಶ. ಹಾಗಾಗಿ ಅಂತಹ ಆಯಕಟ್ಟಿನ ಭಾಗಗಳಿಗೆ ಹೆಚ್ಚು ಕಾಳಜಿ ಇರಲಿ.

ತಂಪು ಗಾಳಿ ತಡೆಯಲು, ತೇವಾಂಶ ದೂರವಿಡಲು ಕಿಟಿಕಿ, ಬಾಗಿಲು ಮುಚ್ಚಿರುವ ಮನೆಗಳು ಹೊಸ ತೊಂದರೆಗೆ ಇಂಬೀಯುತ್ತವೆ. ಒಳಗೆ ಇರುವ ಬೂಷ್ಟು, ಶಿಲೀಂಧ್ರಗಳು ಗಾಳಿಯಲ್ಲಿ ಹೆಚ್ಚುತ್ತವೆ. ಮೂಗಿನೊಳಗೆ ತೂರಿದರೆ ನೆಗಡಿ, ಸೀನು. ಚರ್ಮದಡಿ ತಂಗಿದರೆ ಗಾದರಿ ಗುಳ್ಳೆಗಿದೆ ಅವಕಾಶ. ಹಳ್ಳಿಯ ಹೆಂಚಿನ ಮನೆಗಳಲ್ಲಿ ಇರಲಿ, ತಾರಸಿ ಕಟ್ಟಡವಿರಲಿ, ಇಂತಹ ಬವಣೆ ತಪ್ಪಿದ್ದಲ್ಲ. ಅಗ್ಗಿಷ್ಠಿಕೆ, ಅಂದರೆ ಮಣ್ಣ ಬಾನಿಯ ಕೆಂಡಕ್ಕೆ ಹಸಿ ಸೊಪ್ಪು ಹಾಕಿ ಹೊಗೆ ಬರಿಸುವ ವಿಧಾನ. ಲಕ್ಕಿಗಿಡದ ಎರಡು ಮೂರು ಪ್ರಭೇದಗಳಿವೆ. ಅದರ ಎಲೆ ಹಾಕಿದರೆ ಕೊಠಡಿ, ಹಸು ಕೊಟ್ಟಿಗೆ ತುಂಬ ಹೊಗೆ. ಸೊಳ್ಳೆ, ಪರೋಜೀವಿಗಳ ಬೆಳೆಗೆ ಕಡಿವಾಣ. ಕಹಿ ಬೇವಿನೆಲೆ, ಲೋಳೆಸರದ ಘನೀಕೃತ ಕೆಂಪು ಗಟ್ಟಿ ಮುಸಾಂಬರ, ಅರಶಿನ, ಸಾಸಿವೆ, ಲೋಭಾನ, ಧೂಪದ ಹೊಗೆಯಿಂದಲೂ ವಾತಾವರಣದ ಸೂಕ್ಷ್ಮಜೀವಿಗಳ ನಿರ್ಮೂಲನೆ ಸಾಧ್ಯ. ಸೊಳ್ಳೆ, ದೊಡ್ಡ ಕಚ್ಚುವ ನೊಣ ದಂಡು ಮನೆಯೊಳಗೆ ಬರುವ ಹೊತ್ತು ಮುಸ್ಸಂಜೆ. ಅಂತಹ ಸಮಯದಲ್ಲಿ ಧೂಪನ ವಿಧಿಯಿಂದ ಉಪಕಾರಗಳಿವೆ.

ಸೊಳ್ಳೆ ಕಚ್ಚಿದ ಹಸುಗೂಸಿಗಂತೂ ಕೆಂಪನೆ ಗುಳ್ಳೆ ಗಾದರಿ ಸಹಜ. ಪರದೆ ಹಾಕಿ ಕೂಸಿನ ಆರೋಗ್ಯ ಕಾಪಾಡಿರಿ. ಕಕ್ಕೆ ಮರ(ರಾಲಿ ಹೆಸರು ರಾಲಿ, ತುಳುವರ ಕೊಂದೆ) ಕರಿಯ ಒಣ ಕಾಯಿಗಿದೆ ಬಂದರ್ ಲಾಠೀ ಎಂಬ ಹಿಂದಿ ಹೆಸರು. ಕೋತಿ ಬಾಲದಂತೆ ಮರದ ತುಂಬ ಜೋತಾಡುವ ಈ ಮರದ ಕಾಯಿ ಸುಟ್ಟಾಗ ಹೊಗೆ ಬರುತ್ತದೆ. ಅಂತಹ ಹೊಗೆಯಿಂದ ಜಿರಳೆಗಳನ್ನು ಓಡಿಸಲಾದೀತು. ಕಾಲುಬೆರಳುಗಳ ಸಂದಿಯ ಕೆಸರು ಹುಣ್ಣು ತೊಂದರೆ ಮಳೆಗಾಲದುದ್ದಕ್ಕೆ ಕಾಡುವ ಕಾಟ. ಅರಶಿನದ ಜತೆ ಬಿಸಿ ಕೊಬ್ಬರಿ ಎಣ್ಣೆ ಹಚ್ಚಿರಿ. ಉರಿ, ನೋವು, ಕಿರಿ ಕಿರಿ ತಪ್ಪೀತು. ಹೊಗೆ ಕೊಡಲು ಆಸ್ಪದವಿದೆ. ಚರ್ಮದ ತೇವಾಂಶಕ್ಕೆ ಕಡಿವಾಣ. ಗಾಯ ಮಾಯಲು ಅವಕಾಶ.

ಚೆನ್ನಾಗಿ ದ್ರವಾಂಶ ಭರಿತ ಆಹಾರವಿರಲಿ. ತಪ್ಪದೆ ವಾರಕ್ಕೆರಡು ಬಾರಿಯಂತೂ ಅರಶಿನಸಹಿತ ಬಿಸಿ ಮಾಡಿದ ತೆಂಗಿನೆಣ್ಣೆ, ಎಳ್ಳೆಣ್ಣೆಗೆ ಮೈಮಾಲೀಶು ತಪ್ಪಿಸದಿರಿ. ಹದ ಬಿಸಿನೀರಿನ ಜಳಕದ ಭಾಗ್ಯ ನಿಮ್ಮದಾಗಲಿ. ಹೊಲದ ದುಡಿಮೆಯ ವೇಳೆ ಮೈಕೈಯ ಕೆಸರು, ಒದ್ದೆ ಮುದ್ದೆಯ ದಿರಸು ಸಹಜ. ಆದರೆ ಕೆಲಸದ ಪಾಳಿಯ ಅನಂತರ ಅಭ್ಯಂಗ, ಸ್ನಾನದ ಉಪಚಾರಕ್ಕೆ ಶರಣು ಹೋಗಿರಿ. ಒಣ ಬಟ್ಟೆ ಧರಿಸಿ ಉಂಡು, ಬೆಚ್ಚನೆ ನೆಲವೋ ಚಾಪೆಯೋ ಹೊದಿಕೆಯೋ ಸೇರಿಕೊಳ್ಳಿರಿ. ತೇವಾಂಶದ ಗಾಳಿಗೊಡ್ಡುವಿಕೆ ಚರ್ಮಾರೋಗ್ಯಕ್ಕೆ ಬಾಧಕ.

Views: 6

Leave a Reply

Your email address will not be published. Required fields are marked *