ಸ್ಮೃತಿ ಮಂಧಾನಾ ಮದುವೆ ಮುಂದೂಡಿಕೆ: ಸಮಾರಂಭದ ನಡುವೆ ತಂದೆಗೆ ಹೃದಯಾಘಾತ.

ಮುಂಬೈ: ಟೀಂ ಇಂಡಿಯಾದ (Team India) ಪ್ರಮುಖ ಆಟಗಾರ್ತಿ ಸ್ಮೃತಿ ಮಂಧಾನಾ (Smriti Mandhana) ಅವರ ವಿವಾಹ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಮಂಧಾನಾ ಅವರ ಹುಟ್ಟೂರು ಸಾಂಗ್ಲಿಯಲ್ಲಿ ಇಂದು ಮದುವೆ ಸಮಾರಂಭ ಆಯೋಜನೆಗೊಂಡಿತ್ತು. ಮದುವೆ ಕಾರ್ಯಕ್ರಮ ನಡೆಯುತ್ತಿದ್ದಾಗ ಸ್ಮೃತಿ ಮಂಧಾನಾ ಅವರ ತಂದೆ ಶ್ರೀನಿವಾಸ್‌ (Shrinivas) ಅವರಿಗೆ ಲಘು ಹೃದಯಾಘಾತ (Heart Attack) ಸಂಭವಿಸಿದೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ತಮ್ಮ ಫಾರ್ಮ್ ಹೌಸ್​ನಲ್ಲಿ ಜರುಗಲಿದ್ದ ಮದುವೆಯ ಕಾರ್ಯಕ್ರಮವನ್ನು ಮುಂದೂಡಲು ಸ್ಮೃತಿ ನಿರ್ಧರಿಸಿದರು.

‘ಇವತ್ತು ಬೆಳಗ್ಗೆ ಅವರು (ಶ್ರೀನಿವಾಸ್ ಮಂಧಾನ) ತಿಂಡಿ ತಿನ್ನುತ್ತಿರುವಾಗ ಆರೋಗ್ಯದಲ್ಲಿ ಏರುಪೇರಾಗತೊಡಗಿತು. ಅವರು ಚೇತರಿಸಿಕೊಳ್ಳಬಹುದು ಎಂದು ಸ್ವಲ್ಪ ಹೊತ್ತು ಕಾದೆವು. ಆದರೆ, ಆರೋಗ್ಯ ಮತ್ತಷ್ಟು ಬಿಗಡಾಯಿಸಲು ತೊಡಗಿತು. ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಕೂಡಲೇ ಆಂಬುಲೆನ್ಸ್ ಕರೆದು ಅವರನ್ನು ಆಸ್ಪತ್ರೆಗೆ ಸಾಗಿಸಿದೆವು’ ಎಂದು ಸ್ಮೃತಿ ಮಂಧಾನ ಅವರ ಮ್ಯಾನೇಜರ್ ತುಹಿನ್ ಮಿಶ್ರಾ ಭಾನುವಾರ ಮಧ್ಯಾಹ್ನ ತಿಳಿಸಿದ್ದಾರೆ.

‘ಇಂಥ ಸಂದರ್ಭದಲ್ಲಿ ಮದುವೆಯಾಗುವುದು ಸ್ಮೃತಿ ಮಂಧಾನ ಅವರಿಗೆ ಇಷ್ಟ ಇರಲಿಲ್ಲ. ಹೀಗಾಗಿ, ಮದುವೆ ಕಾರ್ಯಕ್ರಮವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲು ನಿರ್ಧರಿಸಿದ್ದಾರೆ’ ಎಂದು ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.

ಸ್ಮೃತಿ ಮಂಧಾನಾ ಮತ್ತು ಸಂಗೀತ ಸಂಯೋಜಕ, ಚಲನಚಿತ್ರ ನಿರ್ಮಾಪಕ ಪಲಾಶ್ ಮುಚ್ಚಲ್ ಅವರ ವಿವಾಹ ಕಾರ್ಯಕ್ರಮ ಭರ್ಜರಿಯಾಗಿ ನಡೆದಿತ್ತು. ಇವರ ವಿವಾಹ ಸಂಭ್ರಮದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಅರಿಶಿನ ಶಾಸ್ತ್ರದ ವಿಡಿಯೋಗಳಿಂದ ಹಿಡಿದು ವಧು ಮತ್ತು ವರನ ತಂಡಗಳ ನಡುವಿನ ಸ್ನೇಹಪರ ಕ್ರಿಕೆಟ್ ಪಂದ್ಯದವರೆಗೆ, ಮದುವೆಗೆ ಮುನ್ನ ಹಲವು ಮನಮೋಹಕ ಕ್ಷಣಗಳು ಅನಾವರಣಗೊಂಡಿವೆ. ಹೊಸದಾಗಿ ಬಿಡುಗಡೆಯಾಗಿರುವ ವಿಡಿಯೋದಲ್ಲಿ, ಸ್ಮೃತಿ ಮತ್ತು ಪಲಾಶ್ ಇಬ್ಬರೂ ಅತ್ಯಂತ ಸುಂದರವಾಗಿ, ಸಂಪೂರ್ಣವಾಗಿ ಕೊರಿಯೋಗ್ರಾಫ್ ಮಾಡಿದ ನೃತ್ಯವನ್ನು ಪ್ರದರ್ಶಿಸಿದ್ದಾರೆ.

ಈ ಮೊದಲು, ಅರಿಶಿನ ಶಾಸ್ತ್ರದಲ್ಲಿ ಸ್ಮೃತಿ ಮತ್ತು ಪಲಾಶ್ ಇಬ್ಬರೂ ಖುಷಿಯಿಂದ ನೃತ್ಯ ಮಾಡಿದ್ದು, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಸಹ ಸಾಥ್ ನೀಡಿ, ವಧುವಿನ ತಂಡವಾಗಿ ಹೆಜ್ಜೆ ಹಾಕಿರುವ ದೃಶ್ಯಗಳು ಹೆಚ್ಚು ವೈರಲ್ ಆಗಿವೆ.

Views: 38

Leave a Reply

Your email address will not be published. Required fields are marked *