ಮುಖ್ಯ ಪರೀಕ್ಷೆಗೆ ಶಿಕ್ಷಣ ಇಲಾಖೆ ಖಡಕ್ ಹೊಸ ಮಾರ್ಗಸೂಚಿ ಬಿಡುಗಡೆ.
ಬೆಂಗಳೂರು, ಜನವರಿ 19: ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತೆ (Preparatory) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ರಾಜ್ಯ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದ್ದು, ಮುಖ್ಯ ಪರೀಕ್ಷೆಗೆ ಸಂಬಂಧಿಸಿದಂತೆ ಹೊಸ ಹಾಗೂ ಖಡಕ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಶಾಲೆಗಳ ಫಲಿತಾಂಶ ಹೆಚ್ಚಿಸುವ ಉದ್ದೇಶದಿಂದ ಕೆಲ ಶಾಲಾ ಮುಖ್ಯಶಿಕ್ಷಕರು ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ಪ್ರಶ್ನೆಪತ್ರಿಕೆಗಳನ್ನು ಹಂಚಿಕೆ ಮಾಡಿದ್ದರೆಂಬ ಆರೋಪಗಳು ಬೆಳಕಿಗೆ ಬಂದಿವೆ.
ಹೊಸ ಮಾರ್ಗಸೂಚಿಗಳಲ್ಲೇನಿದೆ?
- ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಮೊಬೈಲ್ ಫೋನ್ ತರಲು ಸಂಪೂರ್ಣ ನಿಷೇಧ.
- ಶಿಕ್ಷಕರಿಗೂ ಪರೀಕ್ಷಾ ಸಮಯದಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧ.
- 2ನೇ ಹಾಗೂ 3ನೇ ಪರೀಕ್ಷೆಗಳು ಆಯುಕ್ತರ ನೇತೃತ್ವದಲ್ಲಿ ನಡೆಯಲಿವೆ.
- ಪರೀಕ್ಷಾ ಜವಾಬ್ದಾರಿಯನ್ನು ಡಿಡಿಪಿಐ ಮತ್ತು ಬಿಇಒಗಳಿಗೆ ವಹಿಸಲಾಗಿದೆ.
- ಪ್ರಶ್ನೆಪತ್ರಿಕೆಗಳನ್ನು ಮುಖ್ಯೋಪಾಧ್ಯಾಯರೇ ಡೌನ್‌ಲೋಡ್ ಮಾಡಬೇಕು ಹಾಗೂ ಅದರ ಗೌಪ್ಯತೆ ಕಡ್ಡಾಯವಾಗಿ ಕಾಪಾಡಬೇಕು.
- ಪ್ರಾಂಶುಪಾಲರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.
- ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಅವ್ಯವಹಾರ ಕಂಡುಬಂದಲ್ಲಿ ತಕ್ಷಣವೇ ಆಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು.
ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ
ಈ ಹಿಂದೆ ಕರ್ನಾಟಕ ಪರೀಕ್ಷಾ ಮಂಡಳಿ ಮೌಲ್ಯ ನಿರ್ಣಯ ಮಂಡಳಿಯ ನೇತೃತ್ವದಲ್ಲಿ ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ, ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ 2 ಮತ್ತು 3ನೇ ಪರೀಕ್ಷೆಗಳ ಮೇಲ್ವಿಚಾರಣೆಯನ್ನು ಆಯುಕ್ತರ ನೇತೃತ್ವಕ್ಕೆ ವರ್ಗಾಯಿಸಲಾಗಿದೆ.
ಗಣಿತ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣ
ಕಳೆದ ವಾರ ನಡೆದ ರಾಜ್ಯಮಟ್ಟದ ಪೂರ್ವಭಾವಿ ಪರೀಕ್ಷೆಯಲ್ಲಿ ಜನವರಿ 6ರಂದು ನಡೆದ ಗಣಿತ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಶಿವಮೊಗ್ಗ ಹಾಗೂ ಕಲಬುರಗಿಯಲ್ಲಿ ಪ್ರಶ್ನೆಪತ್ರಿಕೆ ವೈರಲ್ ಆಗಿದ್ದು, ಪರೀಕ್ಷೆಗೆ ಸುಮಾರು ಮೂರು ಗಂಟೆಗಳ ಮುನ್ನವೇ ಪ್ರಶ್ನೆಪತ್ರಿಕೆಯ ಫೋಟೋ ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಸೋಷಿಯಲ್ ಮೀಡಿಯಾದಲ್ಲಿ ಮಾರಾಟ
ಪ್ರಶ್ನೆಪತ್ರಿಕೆ ಮಾರಾಟಕ್ಕಾಗಿ ಇನ್‌ಸ್ಟಾಗ್ರಾಂನಲ್ಲಿ ‘ಡೆಲ್ಟಾ ಹ್ಯಾಕರ್ 32’, ‘ಡೆಲ್ಟಾ ಹ್ಯಾಕರ್’ ಸೇರಿದಂತೆ 8ಕ್ಕೂ ಹೆಚ್ಚು ಖಾತೆಗಳನ್ನು ತೆರೆಯಲಾಗಿತ್ತು. ಟೆಲಿಗ್ರಾಂ ಹಾಗೂ ವಾಟ್ಸಪ್ ಗ್ರೂಪ್‌ಗಳಲ್ಲಿಯೂ ಮಾರಾಟ ನಡೆದಿರುವ ಮಾಹಿತಿ ಲಭ್ಯವಾಗಿದೆ.
ಆರೋಪಿಗಳ ಪತ್ತೆ
ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಖಾತೆಗಳ ಮಾಹಿತಿ ಆಧರಿಸಿ ರಾಮನಗರ, ಉಡುಪಿ, ಶಿವಮೊಗ್ಗ ಹಾಗೂ ತುಮಕೂರು ಸೇರಿ 10 ವಿದ್ಯಾರ್ಥಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದುವರೆಗೆ ಆರು ಶಿಕ್ಷಕರು ಮಾತ್ರ ಗುರುತಿಸಲ್ಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷಣ ವ್ಯವಸ್ಥೆಯ ಪಾರದರ್ಶಕತೆ ಹಾಗೂ ಪರೀಕ್ಷೆಗಳ ವಿಶ್ವಾಸಾರ್ಹತೆ ಕಾಪಾಡುವ ಉದ್ದೇಶದಿಂದ ಇಲಾಖೆ ಈ ಕ್ರಮಗಳನ್ನು ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲಾಗುವುದು ಎಂದು ತಿಳಿಸಿದೆ.
Views: 38