ಸ್ವದೇಶಿ ಮೇಳ ಸಮಾರೋಪ : ದೇಶಿ ಆಹಾರ–ಸ್ವಾವಲಂಬನೆಗೆ ಒತ್ತು, ಆರೋಗ್ಯ–ಆರ್ಥಿಕತೆ ಕಾಪಾಡುವ ಸಲಹೆ

ಚಿತ್ರದುರ್ಗ ನ. 18

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಇಂದಿನ ನಮ್ಮ ಆಹಾರ, ಜೀವನಶೈಲಿ ಕಾರಣಕ್ಕೆ ದೇಹ, ಮನಸ್ಸಿನ ಆರೋಗ್ಯ ಕೆಡುತ್ತಿದೆ. ಇನ್ನಾದರೂ ದೇಶಿ ಆಹಾರ, ರಾಸಾಯನಿಕ ಮುಕ್ತ ಆಹಾರ ಸೇವನೆ ಮಾಡುವ ಮೂಲಕ ನಮ್ಮ ಆರೋಗ್ಯ, ದೇಶದ ಆರ್ಥಿಕತೆ ಎರಡನ್ನೂ ಕಾಪಾಡಿಕೊಳ್ಳುವ ಕೆಲಸ ಮಾಡಬೇಕು ಎಂದು ಕಣಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.


ನಗರದ ಜಗದ್ಗುರು ಜಯದೇವ ಕ್ರೀಡಾಂಗಣದಲ್ಲಿ ಸ್ವದೇಶಿ ಜಾಗರಣ ಮಂಚ್ ಆಯೋಜಿಸಿದ್ದ ಸ್ವದೇಶಿ ಮೇಳದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಆರ್ಶೀವಚನ ಮಾಡಿ ಮಾತನಾಡಿದ ಶೀಗಳು, ಅಧ್ಯಾತ್ಮ ಸಂಸ್ಕೃತಿ, ಪರಂಪರೆ, ಸಾಹಿತ್ಯ, ಆಗಮ, ಉಪನಿಷತ್ತು, ಕಲೆ ಇತ್ಯಾದಿಗಳಿಂದ ಭಾರತ ವಿಶ್ವಗುರುವಾಗಿದೆ. ಸ್ವದೇಶಿ ಮೇಳದ ಪರಿಣಾಮ ರೈತರು, ಉತ್ಪಾಧಕರಿಂದ ನೇರವಾಗಿ ಗ್ರಾಹಕರ ಸಂವಹನ ಸಾಧ್ಯವಾಗಿದೆ. ಸಾಕಷ್ಟು ಜನರಿಗೆ ಲಾಭ ಆಗಿದೆ. ಇದು ಮುಂದುವರೆಯಬೇಕು ಎಂದು ತಿಳಿಸಿದರು. 


ಇಂದಿನ ನಮ್ಮ ಆಹಾರ, ಜೀವನಶೈಲಿ ಕಾರಣಕ್ಕೆ ದೇಹ, ಮನಸ್ಸಿನ ಆರೋಗ್ಯ ಕೆಡುತ್ತಿದೆ. ಭೀಕರವಾದ ಕೋವಿಡ್ ಕರಾಳ ಛಾಯೆಯನ್ನು ಮರೆತು ಹೋಗಿದ್ದೇವೆ. ಇನ್ನಾದರೂ ದೇಶಿ ಆಹಾರ, ರಾಸಾಯನಿಕ ಮುಕ್ತ ಆಹಾರ ಸೇವನೆ ನಾಡುವ ಮೂಲಕ ನಮ್ಮ ಆರೋಗ್ಯ, ದೇಶದ ಆರ್ಥಿಕತೆ ಎರಡನ್ನೂ ಕಾಪಾಡಿಕೊಳ್ಳುವ ಕೆಲಸ ಮಾಡಬೇಕು ಎಂದು ಶ್ರೀಗಳು ಸಲಹೆ ನೀಡಿದರು. 


ಆರೆಸ್ಸೆಸ್ಟ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ| ಜಯಪ್ರಕಾಶ್ ಮಾತನಾಡಿ, ಭಾರತ ಸ್ವತಂತ್ರವಾಗಿದೆ. ಆದರೆ, ಸ್ವಾವಲಂಬಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸ್ವದೇಶಿ ವಸ್ತುಗಳ ಬಳಕೆ ಅತಿ ಮುಖ್ಯ ದೇಶದ ಆರ್ಥಿಕತೆಗೆ ಪೂರಕವಾಗಿ ಸ್ವದೇಶಿ ಅಗತ್ಯವಾಗಿದೆ. ರಾಷ್ಟ್ರವ್ಯಾಪಿ ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಾಗಬೇಕಿದೆ. ಇದರಿಂದ ದೇಶದ ಉದ್ದಿಮೆದಾರರು, ರೈತರು, ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ದೇಶದ ಆರ್ಥಿಕತೆ ಬೆಳವಣಿಗೆಯಾಗಲಿದೆ ಎಂದರು. 
ಇಂದು ಕುಟುಂಬ ಹಾಗೂ ವ್ಯಕ್ತಿಯ ಆರೋಗ್ಯಕ್ಕೆ ಒತ್ತು ನೀಡಬೇಕು. ಆರೋಗ್ಯದ ಕಾರಣಕ್ಕೆ ಸ್ವದೇಶಿ ಬಳಕೆ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಸಾಕಷ್ಟು ಜಾಗೃತಿ ಆಗಿದ್ದು, ರಾಜ್ಯದಲ್ಲಿಸುಮಾರು 1.5 ಲಕ್ಷ ತಾರಸಿ ತೋಟ ನಿರ್ಮಾಣವಾಗಿವೆ. ನಮ್ಮ ಆರೋಗ್ಯದ ಕಾಳಜಿಗೆ ತಾರಸಿ ತೋಟಗಳು ಬಹಳ ಉಪಯುಕ್ತ ಎಂದು ಸಲಹೆ ನೀಡಿದರು. 


ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಹೇಳಿಕೊಡಬೇಕು. ಮನೆ ಮುಂದೆ ರಂಗವಲ್ಲಿ ಹಾಕುವುದು, ಅತಿಥಿಗಳ ಸತ್ಕಾರ, ಹಿರಿಯರಿಗೆ ಗೌರವ ನೀಡುವುದು ನಮ್ಮ ಪರಂಪರೆಯಾಗಿತ್ತು. ಆದರೆ, ಇಂದು ಎಲ್ಲವೂ ಕಣ್ಣರಡೆಯಾಗುತ್ತಿದ್ದು ನಮ್ಮ ಪರಂಪರೆಯನ್ನು ಮರೆಯಬಾರದು.  ಪರಿಸರ ಸಂರಕ್ಷಣೆಯನ್ನು ಮಕ್ಕಳಿಗೆ ಎಳವೆಯಲ್ಲಣೆ ಹೇಳಿಕೊಡಬೇಕು ಎಂದರು. ಸಾಕಷ್ಟು ಜನ ಪದವಿ ಪಡೆದವರು ಸರ್ಕಾರಿ ಕೆಲಸಕ್ಕೆ ಕಾಯುತ್ತ ಕುಳಿತುಕೊಳ್ಳುತ್ತಾರೆ. ಆದರೆ, ನಮ್ಮ ದೇಶದಲ್ಲಿ ಕೃಷಿ ಶೇ.44 ರಷ್ಟು ಉದ್ಯೋಗ ಒದಗಿಸಿದೆ. ಕೈಗಾರಿಕೆ ಶೇ.33 ರಷ್ಟು ಉದ್ಯೋಗ ನೀಡಿದೆ ಎನ್ನುವುದನ್ನು ಮರೆತಿದ್ದೇವೆ. ಯುವಕರು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಜಯಪ್ರಕಾಶ್ ತಿಳಿಸಿದರು. 


ಹೊಳಲ್ಕೆರೆ ಶಾಸಕ ಡಾ ಎಂ.ಚಂದ್ರಪ್ಪ ಮಾತನಾಡಿ, ಸ್ವದೇಶಿ ವಸ್ತುಗಳ ಬಳಕೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಮೇಳ ಆಯೋಜನೆಯಾಗಿದ್ದು, ಸಾಕಷ್ಟು ಜನರಿಗೆ ಉಪಯೋಗ ಆಗಿದೆ ಎಂದರು. ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳನ್ನು ಶಿಕ್ಷಿತರಾಗಿ ಮಾಡಿದರೆ ಸಾಲದು, ಸಂಸ್ಕಾರವಂತರನ್ನಾಗಿ ಮಾಡಬೇಕು. ಸರ್ಕಾರಿ ಕೆಲಸದ ವ್ಯಾಮೋಹ ಬಿಟ್ಟು ಸ್ವಂತ ಉದ್ಯೋಗ ಮಾಡಿ ಸಾಕಷ್ಟು ಜನರಿಗೆ ಉದ್ಯೋಗ ಕೊಡುವ ಪ್ರಯತ್ನ ಯುವ ಪೀಳಿಗೆಯಿಂದ ಆಗಲಿ ಎಂದರು. 


ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದ ಎಂಎಲ್ಸಿ ಕೆ.ಎಸ್.ನವೀನ್ ಮಾತನಾಡಿ ಸ್ವದೇಶಿ ಮೇಳ ನಡೆದು ಬಂದ ದಾರಿ ಹಾಗೂ ಇಲ್ಲಿ ಆದ ಅನುಭವಗಳನ್ನು ಸಭೆಯಲ್ಲಿ ಹಂಚಿಕೊಂಡು ಐದು ದಿನದ ಈ ಮೇಳದಲ್ಲಿ ಸುಮಾರು 5 ಕೋಟಿ ರೂ.ಯಷ್ಟು ವ್ಯವಹಾರವಾಗಿದೆ ಸುಮಾರು 2 ರಿಂದ 3 ಲಕ್ಷ ಜನರು ವೀಕ್ಷಣೆಯನ್ನು ಮಾಡಿದ್ದಾರೆ, ಇಲ್ಲಿ ದೇಶಿಯ ಗೋವುಗಳನ್ನು ಪ್ರದರ್ಶನಕ್ಕೆ ಇಡುವುದರ ಮೂಲಕ ಜನತೆಗೆ ಇದರ ಪರಿಚಯವನ್ನು ಮಾಡಿಸಲಾಗಿದೆ. ಇದ್ದಲ್ಲದೆ ಸಣ್ಣ ಕೈಗಾರಿಕೆ, ನೇಕಾರರಿಂದ ನೇರವಾಗಿ ಗ್ರಾಹಕರಿಗೆ ವಸ್ತುಗಳನ್ನು ತಲುಪುವಂತೆ ಮಾಡಲಾಗಿದೆ ಇಲ್ಲಿ ಮಧ್ಯವರ್ತಿಗಳಿಗೆ ಅವಕಾಶವನ್ನು ನೀಡಿಲ್ಲ ಎಂದರು.

ಮುರುಘಾ ಮಠದ ಡಾ ಬಸವಕುಮಾರ ಸ್ವಾಮೀಜಿ, ಸಂಸದರಾದ ಗೋವಿಂದ ಎಂ.ಕಾರಜೋಳ ಸ್ವದೇಶಿ ಆಪರ ಜಿಲ್ಲಾಧಿಕಾರಿಗಳಾದ ಕುಮಾರಸ್ವಾಮಿ, ಜಾಗರಣಾ ಮಂಚ ಜಗದೀಶ್, ಸಂಘಟಕರಾದ ಜಿ.ಎಂ.ಅನಿತ್ ಕುಮಾರ್, ಸೌಭಾಗ್ಯ ಬಸವರಾಜನ್, ಹನುಮಂತೇಗೌಡ, ರವೀಂದ್ರ, ಮಹಾಂತೇಶ್, ಕೆ.ಟಿ.ಕುಮಾರಸ್ವಾಮಿ ಮತ್ತಿತರರಿದರು. ಪ್ರಜ್ವಲ್ ಪ್ರಾರ್ಥಿಸಿದರೆ ಅನಿತ್‍ಕುಮಾರ್ ಸ್ವಾಗತಿಸಿದರು,ಸಂಪತ್‍ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸೌಭಾಗ್ಯ ಬಸವರಾಜನ್ ವಂದಿಸಿದರು. 

Views: 17

Leave a Reply

Your email address will not be published. Required fields are marked *