ಚಿತ್ರದುರ್ಗ ಮೇ. 20
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕಾರ್ಮಿಕರು ತಾವು ಗಳಿಸಿದ ಹಣವನ್ನು ದುಶ್ಚಟಗಳಿಗೆ ಖರ್ಚು ಮಾಡದೇ, ನಿಮ್ಮ ಕುಟುಂಬಗಳ ನಿರ್ವಹಣೆ ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಿದರೆ ನಿಮ್ಮ ಆರೋಗ್ಯ, ನಿಮ್ಮ ಕುಟುಂಬ ಚನ್ನಾಗಿ ಇರುತ್ತದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷರಾದ ತಾಜ್ಪೀರ್ ಕಾರ್ಮಿಕರಿಗೆ ತಿಳಿ ಹೇಳಿದರು.
ಕರ್ನಾಟಕ ರಾಜ್ಯ ನಿರ್ಮಾಣ ಕಾರ್ಮಿಕರ ಕೇಂದ್ರ ಒಕ್ಕೂಟ ಚಿತ್ರದುರ್ಗ ಜಿಲ್ಲಾ ಸಮಿತಿವತಿಯಿಂದ ಮಂಗಳವಾರ ಎಸ್.ಆರ್.ಬಿ.ಎಂ,ಎಸ್.ರೋಟರಿ ಭಾಲಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾರ್ಮಿಕರು ಕಷ್ಟಪಟ್ಟು ದುಡಿಮೆಯನ್ನು ಮಾಡುತ್ತಾರೆ ಆದರೆ ಅದನ್ನು ತಮ್ಮ ದುಶ್ಚಟಗಳಿಗೆ ಖರ್ಚು ಮಾಡುತ್ತಿದ್ದಾರೆ ಇದರಿಂದ ನಿಮ್ಮ ಆರೋಗ್ಯ ಹಾಗೂ ಕುಟುಂಬದ ನೆಮ್ಮದಿಯೂ ಸಹಾ ಹಾಳಾಗುತ್ತಿದೆ. ಇದರ ಬಗ್ಗೆ ಆಲೋಚನೆಯನ್ನು ಮಾಡಿ, ಇಂದಿನ ದಿನಮಾನದಲ್ಲಿ ಕಟ್ಟಡ ಕಾರ್ಮಿಕರಲ್ಲಿ ಪುರುಷರಷ್ಟೇ ಮಹಿಳೆಯರು ಸಹ ಸಮಾನವಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಕಟ್ಟಡ ಕಾರ್ಮಿಕರಲ್ಲಿ ವಿವಿಧ ರೀತಿಯ ಕಾರ್ಮಿಕರು ಬರಲಿದ್ದಾರೆ. ಎಲ್ಲರು ಸೇರಿ ಒಂದು ಕಟ್ಟಡವನ್ನು ನಿರ್ಮಾಣ ಮಾಡಲು ಸಾಧ್ಯವಿದೆ. ದೇಶದ ಅಭೀವೃದ್ದಿಯಲ್ಲಿ ಕಟ್ಟಡ ಕಾರ್ಮಿಕರ ಪಾತ್ರ ಹೆಚ್ಚಾಗಿದೆ ಎಂದರು. ಸರ್ಕಾರ ಕಟ್ಟಡ ಕಾರ್ಮಿಕರಿಗಾಗಿ ಹಲವಾರು ರೀತಿಯ ಯೋಜನೆಯನ್ನು ಜಾರಿ ಮಾಡಿದೆ ಅದೆರ ಸದುಪಯೋಗವನ್ನು ಪಡೆಯಬೇಕಿದೆ, ಕಾರ್ಮಿಕ ಇಲಾಖೆಯಲ್ಲಿ ಕಾರ್ಡ್ ಮಾಡಿಸುವುದರ ಮೂಲಕ ಇಲಾಖೆಯ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಮುಂಚೆ ಕಾರ್ಮಿಕರ ಕೆಲಸಕ್ಕೆ ಸಮಯ ಇರಲಿಲ್ಲಿ ಆದರೆ ಸಂವಿಧಾನ ಬಂದ ಮೇಲೆ 8 ಗಂಟೆ ಕೆಲಸ ಎಂದು ಸಮಯವನ್ನು ನಿಗಧಿ ಮಾಡಲಾಗಿದೆ. ಇದರಿಂದ ಕಾರ್ಮೀಕರಿಗೆ ಅನುಕೂಲವಾಗಲಿದೆ. ಕಾರ್ಮಿಕರಾದ ನೀವುಗಳು ನಿಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೂಡಿಸಿ ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದೆ ಅದರ ಸದುಪಯೋಗವನ್ನು ಪಡೆಯುವುದರ ಮೂಲಕ ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದು ಕಾರ್ಮಿಕರಿಗೆ ತಾಜ್ಪೀರ್ ಕರೆ ನೀಡಿದರು.
ಸಾಹಿತಿಗಳಾದ ಆನಂದ ಕುಮಾರ್ ಮಾತನಾಡಿ, ಕಾರ್ಮಿಕ ದಿನಾಚರಣೆ ಎಂದರೆ ಕಾರ್ಮಿಕರನ್ನು ಜಾಗೃತಿ ಮಾಡುವ ದಿನವಾಗಿದೆ, ನಮ್ಮಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿ ಇದೆ ಅದಕ್ಕಿಂತ ಅವರ ಕಷ್ಟಗಳು, ನೋವುಗಳು ಹೆಚ್ಚಾಗಿ ಇವೆ, ಕಾರ್ಮಿಕರು ತಾವು ಕಷ್ಟಪಟ್ಟು ಬೇರೆಯವರ ಬದುಕನ್ನು ಸುಗಮ ಗೊಳಿಸುತ್ತಿದ್ದಾರೆ. ನಿಮ್ಮಲ್ಲಿ ಜಾಗೃತಿಯ ಕೊರತೆ ಇದೆ, ಈ ದಿನಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಸರ್ಕಾರದಿಂದ ಸಿಗುವಂತ ವಿವಿಧ ರೀತಿಯ ಸೌಲಭ್ಯಗಳ ಮಾಹಿತಿ ಪಡೆದು ಅದನ್ನು ಯಾವ ರೀತಿ ಪಡೆಯಬೇಕು ಎಂದು ಸಂಘದ ಮೂಲಕ ತಿಳಿದುಕೊಂಡು ಪಡೆಯಿರಿ ಎಂದ ಅವರು, ಶಿಕ್ಷಣ ಇಲ್ಲದಿದ್ದರೆ ನಿಮ್ಮ ಬದುಕು ಶೂನ್ಯವಾಗುತ್ತದೆ, ಶಿಕ್ಷಣದಿಂದ ಮಾತ್ರ ಏಳ್ಗೆ ಸಾಧ್ಯವಿದೆ ಸರ್ಕಾರವೂ ಸಹಾ ಕಾರ್ಮಿಕರ ಕಷ್ಟಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ, ಇದರ ವಿರುದ್ದ ಸಂಘದ ಪದಾಧಿಕಾರಿಗಳು ಎಚ್ಚತ್ತುಕೊಂಡು ಕಾರ್ಮಿಕರಿಗೆ ಸರ್ಕಾರ ಸೌಲಭ್ಯಗಳನ್ನು ಕೊಡಿಸುವಲ್ಲಿ ಮುಂದಾಗಬೇಕಿದೆ ಎಂದರು.
ಕಾರ್ಮಿಕ ನಿರೀಕ್ಷಕ ಟಿ. ಭೀಮೇಶ್ ಮಾತನಾಡಿ, ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ಶಕ್ತಿ ಬಂದಂತಾಗಿದೆ. ನಿಜವಾದ ಕಟ್ಟಡ ಕಾರ್ಮಿಕರು ಗುರುತಿನ ಚೀಟಿಗಳನ್ನು ಮಾಡಿಸಿಕೊಂಡು ಇಲಾಖೆ ಯೊಂದಿಗೆ ಸಹಕರಿಸಿ ಕಾರ್ಮಿಕ ಇಲಾಖೆ ಕಾರ್ಮಿಕರಿಗೆ ಹಲವು ಸವಲತ್ತು ಗಳನ್ನು ಕೊಡುವ ಕಲ್ಯಾಣ ಇಲಾಖೆಯಾಗಿ ಮಾರ್ಪಟ್ಟಿದೆ. ಗುರುತಿನ ಚೀಟಿಗಳನ್ನು ನವೀಕರಣ ಗೊಳಿಸಿಕೊಳ್ಳುವುದನ್ನು ಮಾತ್ರ ಕಾರ್ಮಿಕರು ಮರೆಯಬಾರದು. ಕಾರ್ಮಿಕರ ಇಬ್ಬರು ಮಕ್ಕಳಿಗೆ ಪ್ರತಿ ವರ್ಷವೂ ಒಂದನೆ ತರಗತಿಯಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಮದುವೆಗೆ ಸಹಾಯ ಧನ, ಸ್ವಾಭಾವಿಕ ಮರಣ ಹೊಂದಿದರೆ ಪರಿಹಾರ, ಅಪಘಾತದಲ್ಲಿ ಕಾರ್ಮಿಕ ಮೃತಪಟ್ಟರೆ ಎಂಟು ಲಕ್ಷ ರೂ.ಗಳನ್ನು ನೀಡಲಾಗುವುದು. ವೈದ್ಯಕೀಯ ಸಹಾಯಧನ, ಅರವತ್ತು ವರ್ಷ ತುಂಬಿದವರಿಗೆ ಪಿಂಚಣಿ, ಹೆರಿಗೆ ಭತ್ಯೆ, ತಾಯಿ ಮಗು ಸಹಾಯ ಹಸ್ತ ಆರೈಕೆಗೆ ವರ್ಷಕ್ಕೆ ಆರು ಸಾವಿರ ರೂ.ಗಳನ್ನು ಕೊಡಲಾಗುವುದು. ಇಷ್ಟೆಲ್ಲಾ ಅನುಕೂಲಗಳನ್ನು ಪಡೆಯಬೇಕೆಂದು ಕಡ್ಡಾಯವಾಗಿ ಕಾರ್ಮಿಕರು ಗುರುತಿನ ಚೀಟಿಗಳನ್ನು ಇಟ್ಟುಕೊಂಡು ನವೀಕರಣ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಸೌಲಭ್ಯಗಳಿಂದ ವಂಚಿತರಾಗುತ್ತೀರ ಎಂದು ಎಚ್ಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್.ಸಿ. ಡಬ್ಲೂ.ಸಿ.ಯು.ನ ಜಿಲ್ಲಾಧ್ಯಕ್ಷರಾದ ಡಿ.ಮಲ್ಲೇಶ್ ವಹಿಸಿದ್ದರು. ಒಕ್ಕೂಟದ ಜಿಲ್ಲಾ ಸಂಚಾಲಕರಾದ ಗಣೇಶ್ ಕ್ರಷರ್ ಮಾಲೀಕರಾದ ಡಿ.ಆರ್.ಗುರುರಾಜ್, ಕೆ.ಎಸ್.ಸಿ. ಡಬ್ಲ್ಯೂ.ಸಿ.ಯು.ನ ರಾಜ್ಯಾಧ್ಯಕ್ಷರಾದ ಎನ್.ಪಿ.ಸ್ವಾಮಿ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಲೀಲಾವತಿ, ರಾಜ್ಯ ಸಹಕಾರ್ಯದರ್ಶಿ, ರಫೀ ಅಹಮ್ಮದ್, ಸೇರಿದಂತೆ ಜಿಲ್ಲಾ, ತಾಲ್ಲೂಕು,ಹೋಬಳಿ ಸಮಿತಿ. ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

