ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಡಿ.21:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SDM) ಸಿರಿಗೆರೆ ಯೋಜನಾ ಕಚೇರಿ ವತಿಯಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಭಾನುವಾರ ನಗರದ ನಿಜಲಿಂಗಪ್ಪ ಸ್ಮಾರಕ ಭವನದಲ್ಲಿ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ನಿರ್ದೇಶಕರಾದ ಕಮಲಾಕ್ಷ ಅವರು ಉದ್ಘಾಟಿಸಿ ಮಾತನಾಡಿ, ಜ್ಞಾನವಿಕಾಸ ಯೋಜನೆಯ ಮೂಲಕ ಮಹಿಳೆಯರ ಸಬಲೀಕರಣ ಹಾಗೂ ಕುಟುಂಬದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಮಹಿಳೆಯರು ಮಾಹಿತಿ ಮತ್ತು ಜ್ಞಾನವನ್ನು ಪಡೆದುಕೊಂಡರೆ ಸಮಾಜದಲ್ಲಿ ಧನಾತ್ಮಕ ಬದಲಾವಣೆ ಸಾಧ್ಯವೆಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಜ್ಞಾನವಿಕಾಸ ಯೋಜನಾಧಿಕಾರಿ ರತ್ನ ಅವರು ನೀಡಿದ್ದು, ಯೋಜನೆಯ ಉದ್ದೇಶಗಳು, ವಿವಿಧ ಚಟುವಟಿಕೆಗಳು ಹಾಗೂ ಮಹಿಳೆಯರಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ವಿವರಿಸಿದರು.

ಯೋಜನಾಧಿಕಾರಿ ರವಿಚಂದ್ರ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀಮತಿ ಗೀತಾಂಜಲಿ ಹಾಗೂ ಹುರಳಿ ಬಸವರಾಜ್ ಅವರು, ಆಧುನಿಕ ಶಿಕ್ಷಣದಲ್ಲಿ ಹೆತ್ತವರ ಪಾತ್ರ ಕುರಿತು ಮಹಿಳೆಯರಿಗೆ ಉಪಯುಕ್ತ ಮಾಹಿತಿಯನ್ನು ಒಳಗೊಂಡ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಗೀತಾಮ್ಮ ವಹಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ನಿರ್ಮಲ, ಲೀಲಾವತಿ, ಮೇಲ್ವಿಚಾರಕ ಮೋಹನ್, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸಾಕಮ್ಮ, ಸೇವಾ ಪ್ರತಿನಿಧಿಗಳು ಹಾಗೂ ಕೇಂದ್ರದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ರಂಗೋಲಿ, ಪುಷ್ಪಗೊಚ್ಚ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಹಿಳೆಯರ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಉತ್ಸಾಹಭರಿತವಾಗಿ ನಡೆಯಿತು.