Telegram Stories: ಟೆಲಿಗ್ರಾಮ್​ನಲ್ಲಿ ಸ್ಟೋರೀಸ್ ವೈಶಿಷ್ಟ್ಯ ಆರಂಭ; ಜುಲೈನಿಂದ ಲಭ್ಯ

ಜನಪ್ರಿಯ ಮೆಸೇಜಿಂಗ್ ಆಯಪ್ ಟೆಲಿಗ್ರಾಂ ಸ್ಟೋರೀಸ್ ವೈಶಿಷ್ಟ್ಯವನ್ನು ಆರಂಭಿಸಿದೆ. ಸ್ಟೋರೀಸ್ ಫೀಚರ್ ಜುಲೈನಿಂದ ಬಳಕೆದಾರರಿಗೆ ಲಭ್ಯವಾಗಲಿದೆ.

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ತ್ವರಿತ ಸಂದೇಶ ಕಳುಹಿಸುವ ಆಯಪ್​ ಟೆಲಿಗ್ರಾಮ್​ ಹೊಸ ‘ಸ್ಟೋರೀಸ್’ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ.

ಟೆಲಿಗ್ರಾಮ್ ‘ಸ್ಟೋರೀಸ್’ ವೈಶಿಷ್ಟ್ಯ ಜುಲೈ ಆರಂಭದಿಂದ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಟೆಲಿಗ್ರಾಮ್ ಸಂಸ್ಥಾಪಕ ಮತ್ತು ಸಿಇಒ ಪಾವೆಲ್ ಡುರೊವ್ ಮಂಗಳವಾರ ಹೇಳಿದ್ದಾರೆ.

“ಟೆಲಿಗ್ರಾಮ್‌ನಲ್ಲಿ ಸ್ಟೋರಿಗಳನ್ನು ಅಳವಡಿಸಲು ಕಳೆದ ಕೆಲವಾರು ವರ್ಷಗಳಿಂದ ನಮ್ಮ ಬಳಕೆದಾರರು ನಮ್ಮನ್ನು ಆಗ್ರಹಿಸುತ್ತಿದ್ದಾರೆ. ಹೊಸ ವೈಶಿಷ್ಟ್ಯಗಳ ಕುರಿತಾಗಿ ನಮಗೆ ಬರುವ ಮನವಿಗಳ ಬಗ್ಗೆ ಅರ್ಧದಷ್ಟು ಮನವಿಗಳು ಸ್ಟೋರೀಸ್​ಗೆ ಸಂಬಂಧಿಸಿವೆ” ಎಂದು ಡುರೊವ್ ತನ್ನ ಟೆಲಿಗ್ರಾಮ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಮ್ಮ ಸ್ಟೋರಿಗಳನ್ನು ಯಾರೆಲ್ಲ ನೋಡಬಹುದು ಎಂಬ ಬಗ್ಗೆ ಬಳಕೆದಾರರು ಅತ್ಯಂತ ನಿಖರ ಮತ್ತು ಸೂಕ್ಷ್ಮವಾಗಿ ನಿಯಂತ್ರಿಸಬಹುದು. ಪ್ರತಿಯೊಬ್ಬರು, ತಮ್ಮ ಕಾಂಟ್ಯಾಕ್ಟ್​ಗಳು ಮಾತ್ರ (ಕೆಲವರನ್ನು ಹೊರತುಪಡಿಸಿ), ಕೆಲ ಆಯ್ದ ಕಾಂಟ್ಯಾಕ್ಟ್​ಗಳು ಅಥವಾ ಕ್ಲೋಸ್ ಫ್ರೆಂಡ್​ಗಳ ಲಿಸ್ಟ್​ ಹೀಗೆ ಇದರಲ್ಲಿ ಯಾರು ತಮ್ಮ ಸ್ಟೋರಿ ನೋಡಬಹುದು ಎಂಬುದನ್ನು ಬಳಕೆದಾರರು ಆಯ್ಕೆ ಮಾಡಿ ಸೆಟ್ ಮಾಡಬಹುದು. ಬಳಕೆದಾರರು ಯಾವುದೇ ಸಂಪರ್ಕದಿಂದ ಪೋಸ್ಟ್ ಮಾಡಿದ ಸ್ಟೋರಿಗಳನ್ನು ಮುಖ್ಯ ಪರದೆಯ ಬದಲಿಗೆ ಸಂಪರ್ಕಗಳ ವಿಭಾಗದಲ್ಲಿ ‘ಹಿಡನ್’ ಪಟ್ಟಿಗೆ ಸರಿಸುವ ಮೂಲಕ ಮರೆಮಾಡಲು ಸಾಧ್ಯವಾಗುತ್ತದೆ.

ಫೋಟೋ ಮತ್ತು ವಿಡಿಯೋ – ಎಡಿಟಿಂಗ್ ಪರಿಕರಗಳನ್ನು ಬಳಸುವುದರ ಜೊತೆಗೆ ಬಳಕೆದಾರರು ಹೆಚ್ಚಿನ ಕಾಂಟೆಕ್ಸ್ಟ್​ ಅಥವಾ ಲಿಂಕ್‌ಗಳನ್ನು ಸೇರಿಸಲು ಮತ್ತು ಇತರ ಜನರನ್ನು ಟ್ಯಾಗ್ ಮಾಡಲು ಮತ್ತು ತಮ್ಮ ಸ್ಟೋರಿಗಳಿಗೆ ಶೀರ್ಷಿಕೆಗಳನ್ನು ಒದಗಿಸಲು ಸಾಧ್ಯವಾಗಲಿದೆ. “ಟೆಲಿಗ್ರಾಮ್‌ನ ವಿಡಿಯೋ ಮೆಸೇಜಿಂಗ್ ಯಶಸ್ಸಿನ ಆಧಾರದ ಮೇಲೆ ನಾವು ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳಿಂದ ತೆಗೆದ ಫೋಟೋಗಳು ಮತ್ತು ವೀಡಿಯೊಗಳನ್ನು ಏಕಕಾಲದಲ್ಲಿ ಪೋಸ್ಟ್ ಮಾಡುವ ಆಯ್ಕೆಯನ್ನು ಸೇರಿಸುತ್ತಿದ್ದೇವೆ” ಎಂದು ಡುರೊವ್ ಹೇಳಿದರು.

ಸ್ಟೋರಿ ಎಷ್ಟೊತ್ತಿನ ವರೆಗೆ ಕಾಣಿಸಿಕೊಳ್ಳಬಹುದು ಎಂಬುದನ್ನ ಆಯ್ಕೆ ಮಾಡಬಹುದು: ಇದಲ್ಲದೆ 6, 12, 24 ಅಥವಾ 48 ಗಂಟೆ ಹೀಗೆ ಎಷ್ಟು ಅವಧಿಯವರೆಗೆ ಸ್ಟೋರಿ ಕಾಣಿಸಬಹುದು ಎಂಬುದನ್ನು ಬಳಕೆದಾರರು ಆಯ್ಕೆ ಮಾಡಬಹುದು. ಅಲ್ಲದೆ ಬಳಕೆದಾರರು ಪ್ರತಿಯೊಂದಕ್ಕೂ ವೈಯಕ್ತಿಕ ಗೌಪ್ಯತೆ ಸೆಟ್ಟಿಂಗ್‌ಗಳೊಂದಿಗೆ ಪ್ರೊಫೈಲ್ ಪುಟದಲ್ಲಿ ಸ್ಟೋರಿಗಳನ್ನು ಶಾಶ್ವತವಾಗಿ ಪ್ರದರ್ಶಿಸಲು ಕೂಡ ಸಾಧ್ಯವಿದೆ. “ಚಾನೆಲ್‌ಗಳ ಕುರಿತು ಹೇಳುವುದಾದರೆ, ಅವರು ಹೆಚ್ಚಿನ ಮಾನ್ಯತೆ ಮತ್ತು ಚಂದಾದಾರರಿಂದ ಪ್ರಯೋಜನ ಪಡೆಯಲಿದ್ದಾರೆ.

ಒಂದು ಬಾರಿ ನಾವು ಚಾನಲ್‌ಗಳಿಂದ ಸ್ಟೋರಿಗಳಿಗೆ ಮೆಸೇಜ್​ಗಳನ್ನು ಮರುಪೋಸ್ಟ್ ಮಾಡುವ ವೈಶಿಷ್ಟ್ಯವನ್ನು ಸಾಮರ್ಥ್ಯವನ್ನು ಪ್ರಾರಂಭಿಸಿದರೆ ಟೆಲಿಗ್ರಾಮ್‌ನಲ್ಲಿ ವೈರಲ್ ಆಗುವುದು ತುಂಬಾ ಸುಲಭವಾಗುತ್ತದೆ” ಎಂದು ಡುರೊವ್ ಮಾಹಿತಿ ನೀಡಿದರು.

ಟೆಲಿಗ್ರಾಮ್ ತ್ವರಿತ ಸಂದೇಶ ಕಳುಹಿಸುವ ಸಾಧನವಾಗಿದ್ದು, ನಿಮ್ಮ ಫೋನ್ ನಂಬರನ್ನು ಶೇರ್ ಮಾಡದೆಯೇ ನಿಮ್ಮ ಸಂಪರ್ಕಗಳಿಗೆ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಅವಕಾಶ ನೀಡುವ ಆಯಪ್ ಇದಾಗಿದೆ. ಇದು MTProto ಎಂದು ಕರೆಯಲ್ಪಡುವ ಸಂವಹನ ಪ್ರೋಟೋಕಾಲ್ ಮೂಲಕ ಇದು ಕೆಲಸ ಮಾಡುತ್ತದೆ. ಟೆಲಿಗ್ರಾಮ್ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಆಗಿರುವುದರಿಂದ ಇದರಲ್ಲಿ ನಡೆಯುವ ಚಾಟ್​ ಬೇರೆ ಯಾರಿಗೂ ಗೊತ್ತಾಗುವುದಿಲ್ಲ.

Source : https://m.dailyhunt.in/news/india/kannada/etvbhar9348944527258-epaper-etvbhkn/telegram+stories+teligraam+nalli+storis+vaishishtya+aarambha+julainindha+labhya-newsid-n513178980?listname=newspaperLanding&topic=scienceandtechnology&index=0&topicIndex=7&mode=pwa&action=click

Leave a Reply

Your email address will not be published. Required fields are marked *