ಕಡೂರು: ಇಂದು ಜನರಲ್ಲಿ ವೈಜ್ಞಾನಿಕ ಮನೋಭಾವದ ಕೊರತೆ ಇದೆ. ವಿಜ್ಞಾನ ತಂತ್ರಜ್ಞಾನ ಉತ್ತುಂಗಕ್ಕೆ ಹೋಗಿದ್ದರೂ, ನಮ್ಮ ಜನ ಮೌಢ್ಯತೆಯ ದಾಸರಾಗಿದ್ದಾರೆ” ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಶ್ರೀ ಎಚ್.ಎಸ್.ಟಿ.ಸ್ವಾಮಿ ಅಭಿಪ್ರಾಯಪಟ್ಟರು.

ಅವರು ಕಡೂರಿನ ಪೊಲೀಸ್ ತರಬೇತಿ ಶಾಲೆಯಲ್ಲಿ ಪ್ರಶಿಕ್ಷಣಾರ್ಥಿಗಳಿಗೆ “ಖಗೋಳ ವಿಸ್ಮಯ ಹಾಗೂ ವೈಚಾರಿಕ ಚಿಂತನೆ” ಕುರಿತು ಪ್ರಾತ್ಯಕ್ಷಿಕೆ ಉಪನ್ಯಾಸ ನೀಡುತ್ತಿದ್ದರು. ಮುಂದುವರೆದು ಮಾತನಾಡಿ, “ಅಂಧಶ್ರದ್ಧೆಯನ್ನು ಬಿಟ್ಟು ವೈಚಾರಿಕತೆಯ ಬದುಕು ಕಟ್ಟಿಕೊಳ್ಳಿ, ಆಕಾಶಕಾಯಗಳು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿವೆ. ಅವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು. ಯಾವ ಆಕಾಶಕಾಯಗಳೂ ನಮ್ಮ ಮೇಲೆ ಪ್ರಭಾವ ಬೀರುವುದಿಲ್ಲ. ಅಂಧಶ್ರದ್ಧೆ, ಮೌಢ್ಯತೆಯನ್ನು ಹೋಗಲಾಡಿಸಿ, ವಿಜ್ಞಾನದ ಅರಿವು ಮೂಡಿಸಿಕೊಳ್ಳಿ.
ವಿಜ್ಞಾನ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ವಿಜ್ಞಾನವನ್ನು ಬಿಟ್ಟು ನಾವು ಬದುಕಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವವನ್ನು ಮೈಗೂಡಿಸಿಕೊಂಡು ಬದುಕುವುದು ಇಂದಿನ ದಿನಗಳಲ್ಲಿ ಅನಿವಾರ್ಯ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷರೂ, ಆರ್ಥಿಕ ಚಿಂತಕರೂ, ಸಾಹಿತಿಗಳೂ ಆದ ಡಾ.ಜಿ. ಎನ್. ಮಲ್ಲಿಕಾರ್ಜುನಪ್ಪನವರು, “ಇಂದಿನ ಪ್ರಸ್ತುತ ವ್ಯವಸ್ಥೆಗೆ ವಿಜ್ಞಾನ ಅನಿವಾರ್ಯ. ವಿಜ್ಞಾನದ ಮೂಲಕ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪೊಲೀಸ್ ತರಬೇತಿ ಶಾಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಪಿ.ಪಾಪಣ್ಣ ಮಾತನಾಡಿ, “ನಾವು ಯಾವುದೇ ಕ್ಷೇತ್ರದಲ್ಲಿದ್ದರೂ ವೃತ್ತಿ ಜೀವನದಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ಅವಕಾಶವಿದೆ.
ವೈಚಾರಿಕ ಚಿಂತನೆಯ ದಾರಿಯಲ್ಲಿ ನಾವೆಲ್ಲರೂ ಸಾಗೋಣ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ 500 ಕ್ಕೂ ಹೆಚ್ಚು ಪೊಲೀಸ್ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
Views: 10