Champions Trophy 2025: 2025 ರಲ್ಲಿ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಸಂಬಂಧಿಸಿದಂತೆ ಇದುವರೆಗೆ ಉಂಟಾಗಿದ್ದ ಗೊಂದಲಗಳಿಗೆ ಇಂದು ಐಸಿಸಿ ತೆರೆ ಎಳೆದಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಒಂದು ಷರತ್ತಿಗೆ ಒಪ್ಪಿಗೆ ಸೂಚಿಸಿರುವ ಐಸಿಸಿ, ಚಾಂಪಿಯನ್ಸ್ ಟ್ರೋಫಿಯನ್ನ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ತೀರ್ಮಾನಿಸಿದೆ.

2025 ರಲ್ಲಿ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಸಂಬಂಧಿಸಿದಂತೆ ಇದುವರೆಗೆ ಉಂಟಾಗಿದ್ದ ಗೊಂದಲಗಳಿಗೆ ಇಂದು ಐಸಿಸಿ ತೆರೆ ಎಳೆದಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಒಂದು ಷರತ್ತಿಗೆ ಒಪ್ಪಿಗೆ ಸೂಚಿಸಿರುವ ಐಸಿಸಿ, ಚಾಂಪಿಯನ್ಸ್ ಟ್ರೋಫಿಯನ್ನ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ತೀರ್ಮಾನಿಸಿದೆ. ಪಂದ್ಯಾವಳಿಯ ಆಯೋಜನೆಯ ಬಗ್ಗೆ ಐಸಿಸಿ ಮತ್ತು ಪಿಸಿಬಿ ನಡುವೆ ಒಪ್ಪಂದ ನಡೆದಿದೆ. ಆ ಒಪ್ಪಂದದ ಪ್ರಕಾರ, 2026 ರಲ್ಲಿ ಭಾರತದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್ ಆಡಲು ಪಾಕಿಸ್ತಾನ ತಂಡ ಭಾರತಕ್ಕೆ ಬರುವುದಿಲ್ಲ. ಅಂದರೆ ಇದೀಗ ಟೀಂ ಇಂಡಿಯಾದ ಪಂದ್ಯಗಳನ್ನು ಹೇಗೆ ಬೇರೆಡೆ ಆಯೋಜಿಸಲಾಗುತ್ತಿದೆಯೋ ಹಾಗೆಯೇ ಪಾಕಿಸ್ತಾನದ ಪಂದ್ಯಗಳನ್ನು ಸಹ ಬೇರಡೆ ಆಯೋಜಿಸಬೇಕಾಗುತ್ತದೆ.
ವರದಿಗಳ ಪ್ರಕಾರ, ಐಸಿಸಿ ಸಭೆಯಲ್ಲಿ ಹೈಬ್ರಿಡ್ ಮಾದರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಪ್ಪಿಗೆ ಸೂಚಿಸಿದೆ. ಆ ಪ್ರಕಾರ, ಟೀಂ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಒಂದು ವೇಳೆ ಟೀಂ ಇಂಡಿಯಾ ಫೈನಲ್ ತಲುಪಿದರೆ ಆ ಪಂದ್ಯ ಕೂಡ ದುಬೈನಲ್ಲಿ ನಡೆಯಲಿದೆ. ಅರ್ಥಾತ್, ಭಾರತ-ಪಾಕಿಸ್ತಾನ ಫೈನಲ್ ನಡೆದರೆ ಆತಿಥೇಯ ದೇಶ ದುಬೈಗೆ ಪ್ರಯಾಣ ಬೆಳೆಸಬೇಕಾಗುತ್ತದೆ.
ಇತ್ತ ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಒಂದು ಷರತ್ತನ್ನು ಐಸಿಸಿ ಮುಂದಿಟಿದೆ. ಐಸಿಸಿ ಕೂಡ ಆ ಷರತ್ತಿಗೆ ಒಪ್ಪಿಗೆ ಸೂಚಿಸಿದೆ ಎನ್ನಲಾಗುತ್ತಿದೆ. ಆ ಷರತ್ತಿನ ಪ್ರಕಾರ, 2026ರಲ್ಲಿ ಭಾರತ ಹಾಗೂ ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಶ್ರೀಲಂಕಾದ ಕೊಲಂಬೊದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಹಾಗೆಯೇ ಟೀಂ ಇಂಡಿಯಾದ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸುವ ಅವಕಾಶ ಕಳೆದುಕೊಂಡ ಪಿಸಿಬಿಗೆ ಯಾವುದೇ ಪರಿಹಾರ ನೀಡಲು ಐಸಿಸಿ ನಿರಾಕರಿಸಿದೆ. ಆದರೆ, 2027ರ ನಂತರ ನಡೆಯಲ್ಲಿರುವ ಐಸಿಸಿ ಮಹಿಳಾ ಟ್ರೋಫಿಯ ಆತಿಥ್ಯವನ್ನು ನೀಡುವುದಾಗಿ ಐಸಿಸಿ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
https://twitter.com/vikrantgupta73/status/1867560297801588743
ಕೊನೆಗೂ ತಲೆಬಾಗಿದ ಪಿಸಿಬಿ
ವಾಸ್ತವವಾಗಿ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿ ಇದುವರೆಗೆ ಪ್ರಕಟವಾಗದಿರಲು ಭಾರತ ಹಾಗೂ ಪಾಕಿಸ್ತಾನ ನಡುವಿನ ಹಗ್ಗಜಗ್ಗಾಟವೇ ಪ್ರಮುಖ ಕಾರಣವಾಗಿತ್ತು. ಒಂದೆಡೆ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭಾರತ ಸರ್ಕಾರ ಒಪ್ಪಿಗೆ ನೀಡದಿದ್ದರೆ, ಇನ್ನೊಂದೆಡೆ ಪಿಸಿಬಿ ಕೂಡ ಹೈಬ್ರಿಡ್ ಮಾದರಿಗೆ ನಾವು ಸಿದ್ದವಿಲ್ಲ ಎಂದು ಮೊಂಡುತನ ಪ್ರದರ್ಶಿಸಿತ್ತು. ಆದರೀಗ ಪಿಸಿಬಿ, ಅಂತಿಮವಾಗಿ ಐಸಿಸಿ ಮತ್ತು ಬಿಸಿಸಿಐ ಎದುರು ತನ್ನ ಸೋಲನ್ನು ಒಪ್ಪಿಕೊಂಡಿದೆ. ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ನಡೆಸಲು ಪಿಸಿಬಿ ಒಪ್ಪಿಗೆ ಸೂಚಿಸಿರುವುದರಿಂದ ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ಸಹ ಶೀಘ್ರದಲ್ಲೇ ಪ್ರಕಟಿಸಬಹುದು. ಫೆಬ್ರವರಿ ಅಂತ್ಯದಲ್ಲಿ ಪಂದ್ಯಾವಳಿ ಪ್ರಾರಂಭವಾಗುವ ಸಾಧ್ಯತೆಗಳಿವೆ.
ಸದ್ಯದ ಮಾಹಿತಿ ಪ್ರಕಾರ, 2025 ರ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸಲಿದ್ದು, ಆ 8 ತಂಡಗಳನ್ನು ತಲಾ 4 ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲ್ಲಿವೆ. ಸೆಮೀಸ್ನಲ್ಲಿ ಗೆದ್ದ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲ್ಲಿದೆ.