ಜೈಪುರ: ರಾಜಸ್ಥಾನದ ಪಾಲಿ ಜಿಲ್ಲೆಯ ಜೋಗಂಡಿ ರೈಲ್ವೇ ಸೇತುವೆಯಲ್ಲಿ ನವ ವಿವಾಹಿತ ಜೋಡಿ ಫೋಟೋ ಶೂಟ್ ಮಾಡುತ್ತಿದ್ದಾಗ ರೈಲು ಬಂದಿದ್ದು ಇದನ್ನು ನೋಡಿ ಪತಿ- ಪತ್ನಿ ಸೇತುವೆಯಿಂದಲೇ 90 ಅಡಿ ಆಳದ ಕಂದಕಕ್ಕೆ ಹಾರಿದ ಘಟನೆ ನಡೆದಿದ್ದು ಇದರ ವಿಡಿಯೋ ವೈರಲ್ ಆಗಿದೆ. ಅಪಘಾತದಲ್ಲಿ ಇಬ್ಬರೂ ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ರಾಹುಲ್ ಮೇವಾಡಾ (22) ಮತ್ತು ಅವರ ಪತ್ನಿ ಜಾಹ್ನವಿ (20) ಮದುವೆಯಾದ ಬಳಿಕ ಗೋರಂಘಾಟ್ ಗೆ ಭೇಟಿ ನೀಡಲು ಬಂದಿದ್ದರು. ಜೋಗಮಂಡಿ ಸೇತುವೆಯ ಮೀಟರ್ ಗೇಜ್ ರೈಲ್ವೇ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸೇತುವೆ ಮಧ್ಯದಲ್ಲಿ ನಿಂತು ಫೋಟೊ ಶೂಟ್ ಮಾಡ ತೊಡಗಿದ್ದರು. ಇದೇ ವೇಳೆ, ಮಾರ್ವಾರ್ ಪ್ಯಾಸೆಂಜರ್ ರೈಲು ಕಮ್ಮಿಘಾಟ್ ರೈಲ್ವೆ ನಿಲ್ದಾಣದಿಂದ ಬಂದಿತ್ತು. ರೈಲು ನಿಧಾನಕ್ಕೆ ಬರುತ್ತಿದ್ದರೂ ದಂಪತಿ ಭಯಗೊಂಡು ಸೇತುವೆಯಿಂದ ಕೆಳಗೆ ಹಾರಿದ್ದರು.
ಇಬ್ಬರು ಸಂಬಂಧಿಕರು ರೈಲ್ವೇ ಸೇತುವೆಯ ಬಳಿ ನಿಂತು ಫೋಟೊ ತೆಗೆಯುತ್ತಿದ್ದರೆ, ಹಠಾತ್ ರೈಲು ಬಂದಾಗ ಏನು ಮಾಡುವುದೆಂದು ತೋಚಲಿಲ್ಲ. ಸಂಬಂಧಿಕರು ಬೊಬ್ಬೆ ಹೊಡೆಯ ತೊಡಗಿದ್ದರೆ, ದಂಪತಿ ನೇರವಾಗಿ ಸೇತುವೆಯಿಂದ ಹೊರಕ್ಕೆ ಜಿಗಿದಿದ್ದಾರೆ. ಇದು ಸಂಬಂಧಿಕರ ಮೊಬೈಲಿನಲ್ಲಿ ಸೆರೆಯಾಗಿದ್ದು ವೀಡಿಯೊ ಜಾಲತಾಣದಲ್ಲಿ ವೈರಲ್ ಆಗಿದೆ.
ರೈಲು ನಿಲ್ಲುತ್ತಿದ್ದಂತೆ ಚಾಲಕ ಮತ್ತು ಗಾರ್ಡ್ ಸೇತುವೆಯಿಂದ ಇಳಿದು, ಗಂಭೀರ ಗಾಯಗೊಂಡ ದಂಪತಿಯನ್ನು ಎತ್ತಿ ಫುಲಾಡ್ ರೈಲ್ವೇ ನಿಲ್ದಾಣಕ್ಕೆ ಕರೆದೊಯ್ದರು. ಅಲ್ಲಿಂದ ಆಂಬ್ಯುಲೆನ್ಸ್ ಸಹಾಯದಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.