ಕರ್ನಾಟಕ ಸರ್ಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಚಿಕ್ಕಿ ವಿತರಣೆಯನ್ನು ನಿಲ್ಲಿಸಿದೆ. ಚಿಕ್ಕಿಯಲ್ಲಿ ಹೆಚ್ಚಿನ ಸಕ್ಕರೆ ಮತ್ತು ಅನ್ಸ್ಯಾಚುರೇಟೆಡ್ ಕೊಬ್ಬಿನ ಅಂಶ ಪತ್ತೆಯಾಗಿದ್ದು, ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಈ ನಿರ್ಧಾರಕ ಕೈಗೊಳ್ಳಲಾಗಿದೆ. ಹೀಗಾಗಿ, ಮಕ್ಕಳಿಗೆ ಬದಲಾಗಿ ಮೊಟ್ಟೆ ಅಥವಾ ಬಾಳೆಹಣ್ಣು ನೀಡಲಾಗುತ್ತದೆ.

ಬೆಂಗಳೂರು, ಫೆಬ್ರವರಿ 18: ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಒಂದರಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಚಿಕ್ಕಿ ವಿತರಣೆ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಚಿಕ್ಕಿ ವಿತರಣೆಯಿಂದ ಮಕ್ಕಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಕರ್ನಾಟಕ ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ವಿಚಾರವಾಗಿ ಈಗಾಗಲೇ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
ಚಿಕ್ಕಿಯಲ್ಲಿ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆಯಾಗಿರುವ ಬಗ್ಗೆ ಮತ್ತು ವಿತರಣೆಯ ಸಮಸ್ಯೆಗಳ ಕುರಿತು ಧಾರವಾಡ ಮತ್ತು ಕಲಬುರಗಿಯಲ್ಲಿನ ಶಿಕ್ಷಣ ಇಲಾಖೆ ಅಪರ ಆಯುಕ್ತರು ಇಲಾಖೆಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಕ್ರಮ ಕೈಗೊಳ್ಳಲಾಗಿದೆ.
ಸಕ್ಕರೆ, ಹಾನಿಕಾರಕ ಕೊಬ್ಬು ಹೆಚ್ಚಿರುವುದು ಪತ್ತೆ
ಚಿಕ್ಕಿಯಲ್ಲಿ ಹೆಚ್ಚುವರಿ ಅನ್ಸ್ಯಾಚುರೇಟೆಡ್ ಫ್ಯಾಟ್ ಮತ್ತು ಹೆಚ್ಚಿನ ಸಕ್ಕರೆ ಅಂಶ ಇರುವುದರಿಂದ ಮಕ್ಕಳ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಧಾರವಾಡದ ಅಪರ ಆಯುಕ್ತರು ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಜತೆಗೆ, ಚಿಕ್ಕಿ ವಿತರಣೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಆಗ್ರಹಿಸಲಾಗಿತ್ತು. ಅಸಮರ್ಪಕ ಸಂಗ್ರಹಣೆ ಮತ್ತು ಅವಧಿ ಮೀರಿದ ಚಿಕ್ಕಿ ವಿತರಣೆಯ ಬಗ್ಗೆಯೂ ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿತ್ತಲ್ಲದೆ, ಸಂಭಾವ್ಯ ಆರೋಗ್ಯ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.
ಚಿಕ್ಕಿ ಬದಲಿಗೆ ಮೊಟ್ಟೆ ಅಥವಾ ಬಾಳೆಹಣ್ಣು
ಮಧ್ಯಾಹ್ನದ ಊಟ ಯೋಜನೆಯಡಿ ಶಾಲೆಗಳಲ್ಲಿ ಚಿಕ್ಕಿಗೆ ಬದಲಾಗಿ ಮೊಟ್ಟೆ ಅಥವಾ ಬಾಳೆಹಣ್ಣುಗಳನ್ನು ನೀಡಬೇಕೆಂದು ಇಲಾಖೆ ಆದೇಶಿಸಿದೆ.
2021 ರಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಮೊಟ್ಟೆಗಳಿಗೆ ಪರ್ಯಾಯವಾಗಿ ಬಾಳೆಹಣ್ಣಿನ ಬದಲಿಗೆ ಚಿಕ್ಕಿ ನೀಡಲು ಆರಂಭಿಸಲಾಗಿತ್ತು. ಮೊಟ್ಟೆ ತಿನ್ನದ ಶಾಲಾ ಮಕ್ಕಳಿಗಾಗಿ ಈ ಕ್ರಮ ಕೈಗೊಳ್ಳಲಾಗಿತ್ತು. 2021 ರ ಡಿಸೆಂಬರ್ ಅಂತ್ಯದಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಪ್ರಾರಂಭಿಸುವ ಮೊದಲು, ಚಿಕ್ಕಿಯ ಮಾದರಿಗಳನ್ನು ಕಳುಹಿಸುವಂತೆ ರಾಜ್ಯ ಸರ್ಕಾರ ಕರ್ನಾಟಕ ಹಾಲು ಒಕ್ಕೂಟವನ್ನು ಕೇಳಿತ್ತು.
ರಾಜ್ಯಾದ್ಯಂತ ಕನಿಷ್ಠ 8 ಲಕ್ಷ ಮಕ್ಕಳು ಮೊಟ್ಟೆಯ ಬದಲಿಗೆ ಚಿಕ್ಕಿಯನ್ನು ಆರಿಸಿಕೊಂಡಿದ್ದರು ಎಂದು ಕೆಲವು ಮೂಲಗಳು ತಿಳಿಸಿವೆ. ಆದರೆ, ಇನ್ನೊಂದು ಮೂಲದ ಪ್ರಕಾರ, ಕೇವಲ 2.27 ಲಕ್ಷ ಮಕ್ಕಳು ಮಾತ್ರ ಚಿಕ್ಕಿಯನ್ನು ಆಯ್ಕೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದೀಗ ಅವರಿಗೆ, ಬಾಳೆಹಣ್ಣು ಅಥವಾ ಮೊಟ್ಟೆಯ ನಡುವೆ ಯಾವುದಾದರೊಂದನ್ನು ಆಯ್ಕೆ ಮಾಡಲೇಬೇಕಿದೆ.