ಮದುವೆಗೆ ಬರಬೇಕಿದ್ದ ಪಾದ್ರಿ ಬಾರದೇ ಇದ್ದಾಗ ಚಾಟ್ಜಿಪಿಟಿಯೇ ಪಾದ್ರಿಯಾಗಿ ವಿವಾಹ ನಿರ್ವಹಿಸಿದ ಆಶ್ಚರ್ಯಕರ ಪ್ರಕರಣ ಅಮೆರಿಕದಲ್ಲಿ ನಡೆದಿದೆ.
ಸ್ಯಾನ್ ಫ್ರಾನ್ಸಿಸ್ಕೊ: ಭಾರತದಲ್ಲಿ ಅಗ್ನಿಸಾಕ್ಷಿಯಾಗಿ ಮದುವೆಗಳು ನಡೆಯುತ್ತವೆ ಎಂಬುದು ನಿಮಗೆಲ್ಲ ಗೊತ್ತಿರುವ ಸಂಗತಿ.
ಆದರೆ ಅಮೆರಿಕದಲ್ಲಿ ತಂತ್ರಜ್ಞಾನ ಸಾಕ್ಷಿಯಾಗಿ ವಿವಾಹವೊಂದು ನೆರವೇರಿದೆ. ಇದೇನು ವಿಚಿತ್ರ ಅಂದುಕೊಳ್ಳಬೇಡಿ. ಇಂದಿನ ತಂತ್ರಜ್ಞಾನ ಯುಗದಲ್ಲಿ ಇಂಥದೆಲ್ಲ ಸಾಮಾನ್ಯ ಎಂದುಕೊಳ್ಳಿ. ಅಮೆರಿಕದಲ್ಲಿ ವಿಚಿತ್ರ, ಆದರೂ ಒಂದು ರೀತಿಯಲ್ಲಿ ಮೆಚ್ಚುಗೆಯಾಗುವ ಮದುವೆ ನಡೆದಿದೆ. ಈ ವಿಚಿತ್ರ, ತಂತ್ರಜ್ಞಾನ ಸಾಕ್ಷಿಯಾಗಿ ನಡೆದ ಮದುವೆಯ ಕತೆ ಇಲ್ಲಿದೆ.
ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಕ್ರಿಶ್ಚಿಯನ್ ಜೋಡಿಯೊಂದರ ವಿವಾಹ ಸಮಾರಂಭ ನಡೆಯುವುದಿತ್ತು. ವಿವಾಹ ಎಂದ ಮೇಲೆ ಚರ್ಚ್ನ ಪಾದ್ರಿ ಬಂದು ವಿವಾಹ ಸಂಪ್ರದಾಯಗಳನ್ನು ನೆರವೇರಿಸುವುದು ಸಾಮಾನ್ಯ. ಆದರೆ ವಿವಾಹ ಸಮಾರಂಬಕ್ಕೆ ಎಷ್ಟು ಹೊತ್ತಾದರೂ ಪಾದ್ರಿ ಬರಲೇ ಇಲ್ಲ. ಇದರಿಂದ ಚಿಂತೆಗೊಳಗಾದ ನವಜೋಡಿಯು ಚಾಟ್ ಜಿಪಿಟಿಯನ್ನೇ ಸಾಕ್ಷಿಯಾಗಿಸಿ ಮದುವೆಯಾಗಿದ್ದಾರೆ.
ರೀಸ್ ವಿಂಚ್ ಮತ್ತು ಡೇಟನ್ ಟ್ರುಯಿಟ್ ಈ ಜೋಡಿಯೇ ಕಳೆದ ವಾರಾಂತ್ಯದಲ್ಲಿ ChatGPT AI ಅಪ್ಲಿಕೇಶನ್‌ನ ಧ್ವನಿಯ ಸಾಕ್ಷಿಯಾಗಿ ತಮ್ಮ ವಿವಾಹ ಮಾಡಿಕೊಂಡಿದ್ದಾರೆ. “ರೀಸ್ ವಿಂಚ್ ಮತ್ತು ಡೇಟನ್ ಟ್ರುಯಿಟ್ ಅವರ ಅಸಾಧಾರಣ ಪ್ರೀತಿ ಮತ್ತು ಏಕತೆಯ ಸಮಾರಂಭದಲ್ಲಿ ನಮ್ಮೊಂದಿಗೆ ಸೇರಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು” ಎಂದು ವಿವಾಹದಲ್ಲಿ ಭಾಗಿಯಾಗಿದ್ದ ಚಾಟ್‌ಬಾಟ್ ಹೇಳಿದೆ.
ವಿಂಚ್ ಮತ್ತು ಟ್ರುಯಿಟ್ ಅವರು ಐದು ದಿನಗಳ ಕಾಲ ತಮ್ಮ ಮದುವೆ ಕಾರ್ಯಕ್ರಮಗಳನ್ನು ಪ್ಲಾನ್ ಮಾಡಿದ್ದರು. ಟ್ರುಯಿಟ್ ಸೈನ್ಯಕ್ಕೆ ನಿಯೋಜಿತನಾಗಲಿದ್ದರೆ, ವಿಂಚ್ ವಿದ್ಯಾಭ್ಯಾಸ ಮುಂದುವರೆಸುವವರಿದ್ದರು. ಅಮೆರಿಕದ ಕೊಲೊರಾಡೋದಲ್ಲಿ ವಿವಾಹ ಸಂಪ್ರದಾಯಗಳನ್ನು ನಿರ್ವಹಿಸಲು ಪರವಾನಗಿ ಪಡೆದ ಅಧಿಕಾರಿಯ ಅಗತ್ಯವಿಲ್ಲ. ಹೀಗಾಗಿ ವಧುವಿನ ತಂದೆ ಸ್ಟೀಫನ್ ವಿಂಚ್ ವಿವಾಹ ನೆರವೇರಿಸಲು ಸುಲಭವಾದ ಮತ್ತು ಕಡಿಮೆ ವೆಚ್ಚದ ಕಾರ್ಯಕ್ರಮದ ಪ್ಲಾನ್ ಮಾಡಿದರು. ಆದರೆ ಆರಂಭದಲ್ಲಿ ವಿವಾಹ ಸಮಾರಂಭ ನಿರ್ವಹಿಸಲು ಚಾಟ್‌ಬಾಟ್ ಹಿಂಜರಿದಿತ್ತು ಎಂದು ಹೇಳಲಾಗಿದೆ.
“ಚಾಟ್ ಬಾಟ್ ಮೊದಲಿಗೆ ‘ಆಗಲ್ಲ’ ಎಂದು ಹೇಳಿತು. ‘ನನಗೆ ಮಾಡಲು ಸಾಧ್ಯವಿಲ್ಲ, ನನಗೆ ಕಣ್ಣುಗಳಿಲ್ಲ, ನನಗೆ ದೇಹವಿಲ್ಲ. ನಿಮ್ಮ ಮದುವೆಯಲ್ಲಿ ನಾನು ಅಧಿಕೃತವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಅದು ಹೇಳಿತು” ಎಂದು ವಿಂಚ್ ಹೇಳಿದ್ದಾರೆ. ಆದರೆ ದಂಪತಿಗಳು ಪಟ್ಟುಹಿಡಿದು ತಮ್ಮ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಚಾಟ್‌ಬಾಟ್‌ಗೆ ಒದಗಿಸಿದರು. ಚಾಟ್ ಜಿಪಿಟಿಯಂಥ AI ಚಾಟ್‌ಬಾಟ್ ಈ ರೀತಿಯ ಅಸಾಮಾನ್ಯ ಕಾರ್ಯ ಮಾಡಿರುವುದು ಇದೇ ಮೊದಲಲ್ಲ.
ಕಳೆದ ವಾರ ಮಹಿಳೆಯೊಬ್ಬರು ಕಂಟೆಂಟ್ ಬರೆಯಲು ಚಾಟ್‌ಜಿಪಿಟಿ ತರಹದ ಕೃತಕ ಬುದ್ಧಿಮತ್ತೆ (ಎಐ) ಅನ್ನು ಬಳಸುತ್ತಿರುವುದನ್ನು ಕಂಡುಹಿಡಿದ ನಂತರ ತನ್ನ ದೀರ್ಘಕಾಲದ ಕ್ಲೈಂಟ್ ತನ್ನೊಂದಿಗೆ ಕೆಲಸ ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಿದ್ದರು. ಹಾಗೆಯೇ ಕಳೆದ ತಿಂಗಳು, ಚಾಟ್ ಜಿಪಿಟಿಯಿಂದ ಬರೆಸಲಾದ ಕಾನೂನು ಅರ್ಜಿಯೊಂದನ್ನು ತಿರಸ್ಕರಿಸಿದ್ದ ಅಮೆರಿಕದ ನ್ಯಾಯಾಲಯವೊಂದು ವಕೀಲರಿಗೆ ದಂಡ ವಿಧಿಸಿತ್ತು. ಚಾಟ್ ಜಿಪಿಟಿ ತಯಾರಿಸಿದ ಅರ್ಜಿಯಲ್ಲಿ ಅಸ್ತಿತ್ವದಲ್ಲಿಲ್ಲದ ನ್ಯಾಯಾಲಯದ ಅಭಿಪ್ರಾಯಗಳು ಮತ್ತು ನಕಲಿ ಉಲ್ಲೇಖಗಳಿದ್ದವು.