ಚಿತ್ರದುರ್ಗದ ಮಹಿಳಾ ಸೇವಾ ಸಮಾಜದಲ್ಲಿ ಭಾರಿ ಗೊಂದಲ: ಚುನಾವಣೆ ನಡೆಸದೆ ಆಸ್ತಿ ದುರುಪಯೋಗ ಆರೋಪ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 2

ಸುಮಾರು 97 ವರ್ಷ ಇತಿಹಾಸವಿರುವ ರಾಜ್ಯದ ಅತೀ ಹಳೆಯ ಚಿತ್ರದುರ್ಗದ ಹೆಮ್ಮೆಯ ‘ಮಹಿಳಾ ಸೇವಾ ಸಮಾಜ’ದ ಆಡಳಿತ ಮಂಡಳಿಗೆ ಕಳೆದ 7 ವರ್ಷಗಳಿಂದ ಚುನಾವಣೆ ನಡೆಸದಿರುವ ಕಾರಣ ಉಂಟಾಗಿರುವ ಗೊಂದಲ, ಅವ್ಯವಹಾರ, ಅಧಿಕಾರ ದುರುಪಯೋಗ ಕಾರಣವಾಗಿದೆ ಎಂದು ‘ಮಹಿಳಾ ಸೇವಾ ಸಮಾಜ’ದ ಸದಸ್ಯರದ ರೂಪ ಜನಾರ್ಧನ ಆರೋಪಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಿಳಾ ಸೇವಾ ಸಮಾಜವು ರಾಜ್ಯದಲ್ಲೇ ಅಪರೂಪದ ಮಹಿಳಾ ಸಂಘಟನೆಯಾಗಿದ್ದು ಕಳೆದ 97 ವರ್ಷಗಳಿಂದಲೂ ಅಸ್ಥಿತ್ವದಲ್ಲಿದೆ. ಮಹಿಳೆಯರಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದ ಸಂಘಟನೆ ಈಗ ಗೊಂದಲದ ಗೂಡಾಗಿದೆ.ಸಂಘದ ಆಡಳಿತ ಮಂಡಳಿಗೆ ಕಳೆದ 7 ವರ್ಷಗಳಿಂದ ಚುನಾವಣೆ ನಡೆಸದ ಕಾರಣ ಭಾರಿ ಮೊತ್ತದ ಅವ್ಯವಹಾರ ನಡೆದಿದೆ. ಆಡಳಿತ ಮಂಡಳಿ ಕೊನೆಗೊಂಡಿದ್ದರೂ ಹಳೇ ಸಮಿತಿಯ ಉಪಾಧ್ಯಕ್ಷರಾದ ಮೋಕ್ಷಾ ರುದ್ರಸ್ವಾಮಿ ಹಾಗೂ ಅವರ ಪರ ಇರುವ ಕೆಲ ಕಮಿಟಿ ಸದಸ್ಯರು ತೆರೆಮರೆಯಲ್ಲಿ ಆಡಳಿತ ಮುಂದುವರಿಸುತ್ತಿದ್ದಾರೆ. ಅನುಮಾನಾಸ್ಪದ ರೀತಿಯಲ್ಲಿ ವಹಿವಾಟು ನಡೆಸುತ್ತಿದ್ದು ಸಮಾಜದ ಆಸ್ತಿಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಮಹಿಳಾ ಸೇವಾ ಸಮಾಜಕ್ಕೆ ಜಿಲ್ಲಾಧಿಕಾರಿಗಳ ಪತ್ನಿ ಅಧ್ಯಕ್ಷೆಯಾಗಿರುತ್ತಾರೆ.ಸಂಘಟನೆಗೆ ಐತಿಹಾಸಿಕ ಹಿನ್ನೆಲೆಯಿದ್ದು ಮೈಸೂರು ಮಹಾರಾಜರು ದೂರದೃಷ್ಟಿಯಿಂದ ಮಹಿಳೆಯರ ಪ್ರಗತಿಗಾಗಿ ಭೂಮಿಕೊಟ್ಟಿದ್ದರು… ಒಟ್ಟಾರೆ ಆಸ್ತಿಯ ಮೌಲ್ಯ ಅಂದಾಜು 150 ಕೋಟಿ ರೂ ಇದೆ. 10 ವರ್ಷಗಳ ಹಿಂದೆ ಮಳಿಗೆ ನಿರ್ಮಾಣ ಮಾಡಲಾಗಿದ್ದು ತಿಂಗಳಿಗೆ ಸುಮಾರು 1.5 ಲಕ್ಷ ರೂ ಬಾಡಿಗೆ ಬರುತ್ತದೆ ಇದನ್ನು ಮಹಿಳೆಯರ ವಿವಿಧ ಚಟುವಟಿಕೆ, ತರಬೇತಿಗಳಿಗೆ ವಿನಿಯೋಗಿಸುವ ಉದ್ದೇಶ ಹೊಂದಲಾಗಿದೆ ಆದರೆ ಇಲ್ಲಿಯವರೆಗೆ ಈ ಹಣವನ್ನು ಮಹಿಳೆಯರ ಪ್ರಗತಿಗೆ ವಿನಿಯೋಗಿಸದೇ ದುರುಪಯೋಗವಾಗಿದೆ. ಲಕ್ಷಾಂತರ ರೂಪಾಯಿ ಬಾಡಿಗೆ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ.ಹಿಂದಿನ ಆಡಳಿತ ಮಂಡಳಿ ಉಪಾಧ್ಯಕ್ಷೆಯಾಗಿರುವ ಮೋಕ್ಷಾ ರುದ್ರಸ್ವಾಮಿ ಅವರ ಅಧಿಕಾರಾವಧಿ ಮುಗಿದಿದ್ದರೂ ಈಗಲೂ ಮಹಿಳಾ ಸಮಾಜದ ಆಸ್ತಿಯನ್ನು ತಮ್ಮ ಸ್ವಂತ ಆಸ್ತಿಯಂತೆ ಮಾಡಿಕೊಂಡು ತೆರೆಮರೆಯಲ್ಲಿ ತಮ್ಮ ಆಡಳಿತ ನಡೆಸುತ್ತಿದ್ದಾರೆ. ಆಸ್ತಿಯ ಮೇಲೆ ಪಟ್ಟಭದ್ರ ಹಿತಾಸಕ್ತಿಗಳ ಕಣ್ಣು ಬಿದ್ದಿದೆ ಎಂದರು.

ಮಹಿಳಾ ಸಮಾಜದ ವತಿಯಿಂದ ನಡೆಯುತ್ತಿದ್ದ ಅಬಲಾಶ್ರಮ, ಶಿಶುವಿಹಾರ ಕೂಡ ಸ್ಥಗಿತಗೊಂಡಿದೆ.ಸಮಾಜ ಉಳಿಯಬೇಕು ಎಂಬ ಉದ್ದೇಶದಿಂದ ನಾವು ಕೆಲವು ಸದಸ್ಯರು ಕಳೆದ 1 ವರ್ಷದಿಂದ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸುತ್ತಾ ಬಂದಿದ್ದೇವೆ.ಜಿಲ್ಲಾಧಿಕಾರಿ ಕಛೇರಿ, ಸಹಕಾರ ಇಲಾಖೆಯ ಕಛೇರಿ ಸುತ್ತಿದ್ದೇವೆ. ಆದರೂ ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ ನಮ್ಮ ಪ್ರತಿ ಪ್ರಯತ್ನವನ್ನೂ ಮೋಕ್ಷಾ ರುದ್ರಸ್ವಾಮಿ ಅವರು ತಡೆಯುತ್ತಾ ಬಂದಿದ್ದಾರೆ. ಮಹಿಳಾ ಸಮಾಜದ ಆಡಳಿತ ಮಂಡಳಿಗೆ ಚುನಾವಣೆ ನಡೆಸಬೇಕು ಎಂದು ಸಹಕಾರ ಇಲಾಖೆ ಸಚಿವಾಲಯದಿಂದ ಜಿಲ್ಲಾಧಿಕಾರಿ ಹಾಗೂ ಡಿಆರ್ ಅವರಿಗೆ ಪತ್ರ ಬಂದಿದೆ.90 ದಿನಗಳ ಒಳಗಾಗಿ ಚುನಾವಣೆ ನಡೆಸಬೇಕು ಎಂದು ಇಲಾಖೆ ಸೂಚನೆ ನೀಡಿದೆ. ಜೊತೆಗೆ ಜಿಲ್ಲಾಧಿಕಾರಿಗಳು ಕೂಡ ಚುನಾವಣೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಇಷ್ಟಾದರೂ ಎಲ್ಲಾ ಆದೇಶ, ಸೂಚನೆಗಳನ್ನು ಸ್ಥಗಿತಗೊಳಿಸಿ ಚುನಾವಣೆ ನಡೆಸದಂತೆ ನೋಡಿಕೊಳ್ಳುತ್ತಿದ್ದಾರೆ.. ಜೊತೆಗೆ ಸಮಾಜಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ಕೋರಿ ಪತ್ರ ಕಳುಹಿಸಲಾಗಿದೆ ಎಂದು ತಿಳಿಸಿದರು.

ಚುನಾವಣೆ ನಡೆಸುವಂತೆ ಡಿಆರ್ ಅವರನ್ನು ಕೇಳಿಕೊಂಡಾಗ ಅವರು ನಮಗೆ ಚುನಾವಣೆ ನಡೆಸುವ ಅಧಿಕಾರ ಇಲ್ಲ ಎನ್ನುತ್ತಿದ್ದಾರೆ.. 97 ವರ್ಷಗಳಿಂದಲೂ ಸಂಘದಿಂದ ಶುಲ್ಕ ಪಡೆದರು ಬೈಲಾ ರಿನೀವಲ್ ಮಾಡುತ್ತಿದ್ದೀರಿ.. ಸದಸ್ಯರ ಪಟ್ಟಿ ದೃಢೀಕರಣ ಮಾಡುತ್ತಿದ್ದೀರಿ.. ಆದರೂ ಏಕೆ ಚುನಾವಣೆ ನಡೆಸುವ ಅಧಿಕಾರವಿಲ್ಲ ಎಂದು ಪ್ರಶ್ನೆ ಮಾಡಿದೆವು.ಮೋಕ್ಷಾ ರುದ್ರಸ್ವಾಮಿಯವರ ಅವ್ಯವಹಾರಗಳಿಗೆ ಡಿಆರ್ ಅಧಿಕಾರಿಗಳು ಸಹಕಾರ ನೀಡುತ್ತಿರುವ ಬಗ್ಗೆ ಸಂಶಯವಿದೆ.ಸಮಾಜವನ್ನು ಉಳಿಸಲೇಬೇಕು ಎಂಬ ಒಂದೇ ಒಂದು ಉದ್ದೇಶದಿಂದ ಒಂದು ವರ್ಷದಿಂದ ಸಹಕಾರ ಸಚಿವರಾಗಿದ್ದ ಕೆ.ಎಸ್.ರಾಜಣ್ಣರವರನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರನ್ನೂ ಭೇಟಿಯಾಗಿ ಸಾಕಷ್ಟು ಮನವಿ ಸಲ್ಲಿಸಿದ್ದೇವೆ.ಆದರೂ ಯಾವುದೇ ಪ್ರಯೋಜನವಾಗಿಲ ಮಹಿಳಾ ಸಮಾಜದ ಆಸ್ತಿ ದಾಖಲೆ ಪತ್ರಗಳು, ಆಸ್ತಿಯ ದಾನ ಪತ್ರಗಳು, ಬೈಲಾ ಪ್ರತಿ. ಬಾಡಿಗೆ ಕರಾರು ಪ್ರತಿ, ಸದಸ್ಯರ ರಶೀತಿಗಳು ನಾಪತ್ತೆಯಾಗಿವೆ.ಎಲ್ಲಾ ದಾಖಲಾತಿಗಳನ್ನು ಮೋಕ್ಷಾ ರುದ್ರಸ್ವಾಮಿರವರು ತಮ್ಮ ಮನೆಗೆ ಕೊಂಡೊಯ್ದಿದ್ದಾರೆ ಎಂದರು.

ಆಸ್ತಿ ಪತ್ರ ನಾಪತ್ತೆ, ಮನೆಯಲ್ಲಿ ಇಟ್ಟುಕೊಂಡಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಅವರ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲು ಮಾಡಿ ಕ್ರಮ ಜರುಗಿಸಬೇಕು. ಆದರೆ ಸರ್ಕಾರದ ಒತ್ತಡ ಇರುವ ಕಾರಣ ಎಸ್‍ಪಿಯವರು ಎಫ್‍ಐಆರ್ ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ.ಈ ಕುರಿತು ದಿನಾಂಕ: 21.01.2025ರಂದು ಲೋಕಾಯುಕ್ತಕ್ಕೂ ಸಹ ದೂರು ನೀಡಲಾಗಿದೆ. ಚುನಾವಣೆ ನಡೆಸಲು ಎಲ್ಲಾ ಅವಕಾಶಗಳಿದ್ದರೂ ಅಧಿಕಾರಿಗಳು ಚುನಾವಣೆ ನಡೆಸದೇ ಆಡಳಿತಾಧಿಕಾರಿ ನೇಮಕ ಮಾಡುವ ಹುನ್ನಾರ ನಡೆಯುತ್ತಿದೆ ಈ ಹಿಂದೆ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರೂ, ಚುನಾವಣೆ ನಡೆಸುವ ಅಧಿಕಾರ ನೀಡಿದ್ದರೂ ಪಟ್ಟಭದ್ರ ಹಿತಾಸಕ್ತಿಗಳು ಜಿಲ್ಲಾಧಿಕಾರಿ ಹಾಗೂ ಡಿ.ಆರ್.ಮೇಲೆ ಒತ್ತಡ ತಂದು ಆಡಳಿತಾಧಿಕಾರಿ ನೇಮಕ ಮಾಡುವಂತೆ ಕೋರಿ ಸರ್ಕಾರಕ್ಕೆ ಮತ್ತೆ ಮನವಿ ಕಳುಹಿಸುವಂತೆ ನೋಡಿಕೊಂಡಿದ್ದಾರೆ… ಇದರ ಹಿಂದೆ ಮೋಕ್ಷಾ ರುದ್ರಸ್ವಾಮಿ ಹಾಗೂ ಅವರ ಪರ ಇರುವ ಸದಸ್ಯರು ಇದ್ದಾರೆ. ಆ ಮೂಲಕ ಹಿಂದಿನ ಬಾಗಿಲ ಮೂಲಕ ಮಹಿಳಾ ಸಮಾಜದ ಆಸ್ತಿ.. ಹಣವನ್ನು ದುರುಪಯೋಗ ಮಾಡಿಕೊಳ್ಳಲು ಹುನ್ನಾರ ಮಾಡಿದ್ದಾರೆ ಎಂದು ದೂರಿದರು.

ಆಡಳಿತಾಧಿಕಾರಿ ನೇಮಕದ ನೆಪದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಮಹಿಳಾ ಸಮಾಜದ ಆಸ್ತಿ ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ.. ಕಳೆದೊಂದು ವರ್ಷದಿಂದ ಬ್ಯಾಂಕ್ ಅಕೌಂಟ್ ಅನ್ನೂ ಹೋಲ್ಡ್ ಮಾಡಿಸಿರುವ ಕಾರಣ ಸುಮಾರು 25 ಲಕ್ಷ ರೂ ಹಣ ಸಂಗ್ರಹವಾಗಿದೆ. ಮೋಕ್ಷಾ ರುದ್ರಸ್ವಾಮಿ ಅಧಿಕಾರದ ಅವಧಿಯಲ್ಲಿದ್ದ 7 ವರ್ಷದಲ್ಲಿ ಸಂಗ್ರಹವಾದ ಹಣ ಏನಾಯಿತು ಎಂಬುದು ತಿಳಿಯಬೇಕಾಗಿದೆ.7 ವರ್ಷಗಳಿಂದ ಕೇವಲ ಕಟ್ಟಡಗಳಿಗೆ ಬಣ್ಣ ಬಳಿಸುತ್ತಾ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸುತ್ತಿದ್ದಾರೆ ಈ ಕುರಿತು ಜಿಲ್ಲಾಧಿಕಾರಿ ಡಿ.ಆರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಿಳಿಸಿದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ, ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಇರುವ ಮಹಿಳಾ ಸಮಾಜದ ಅವ್ಯವಹಾರನ್ನು ಮುಚ್ಚಿ ಹಾಕುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಕಮಿಟಿಯಲ್ಲಿದ್ದ ಸದಸ್ಯರು ಮೋಕ್ಷಾ ರುದ್ರಸ್ವಾಮಿರವರ ಅವ್ಯವಹಾರಗಳನ್ನು ಪ್ರಶ್ನಿಸುವ ಕೆಲಸ ಮಾಡಿದ್ದಾರೆ. ಆದರೆ ಮೋಕ್ಷಾ ಹಾಗೂ ಅವರ ಪರ ಇರುವ ಸದಸ್ಯರು ಪ್ರಶ್ನೆ ಮಾಡುವ ಸದಸ್ಯರ ವಿರುದ್ಧ ಮಹಿಳಾ ಸಮಾಜದ ವಿರೋಧಿ ಚಟುವಟಿಕೆ ಆರೋಪ ಹೊರಿಸಿ ಸಮಾಜದಿಂದ ಉಚ್ಚಾಟನೆ ಮಾಡುವ ಅಸ್ತಿ ಬಳಕೆ ಮಾಡಿದ್ದಾರೆ.ಅವರ ಪರ ಇರುವ ಸದಸ್ಯರನ್ನು ಮಾತ್ರ ಕಮಿಟಿಗೆ ತೆಗೆದುಕೊಂಡು ಅವ್ಯವಹಾರ ಮುಂದುವರಿಸಿದ್ದಾರೆ.

ರಾಜ್ಯ ಸರ್ಕಾರ ಮಹಿಳೆಯರ ಪರ ಇದೆ,ಆದರೆ ಚಿತ್ರದುರ್ಗದ ಮಹಿಳಾ ಸೇವಾ ಸಮಾಜದಲ್ಲಿ ಮಹಿಳೆಯರಿಗೆ ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಅದನ್ನು ಸರಿಪಡಿಸುವ ಸಮಾಜವನ್ನು ಸರಿದಾರಿಗೆ ತರುವ ಯಾವುದೇ ಪ್ರಯತ್ನವನ್ನೂ ಮಾಡಿಲ್ಲ. ಡಿ.ಸಿ, ಡಿಆರ್. ಸರ್ಕಾರದ ಕಾರ್ಯದರ್ಶಿ, ಸಚಿವರವರೆಗೂ ಮಾಹಿತಿ ನೀಡಿದರೂ ಯಾರೂ ಸಮಾಜವನ್ನು ಸುಧಾರಿಸುವ ಕೆಲಸ ಮಾಡದಿರುವುದು ದುರದೃಷ್ಟಕರ ಎಂದರು.

Views: 99

Leave a Reply

Your email address will not be published. Required fields are marked *