ಗೂಗಲ್ ಪ್ಲೇ ಸ್ಟೋರ್ನಲ್ಲಿನ 2 ಸಂಶಯಾಸ್ಪದ ಆಯಪ್ಗಳು ಬಳಕೆದಾರರ ಮಾಹಿತಿಯನ್ನು ಕದ್ದು ಚೀನಾದ ಸರ್ವರ್ಗಳಿಗೆ ರವಾನೆ ಮಾಡುತ್ತಿರುವುದು ಕಂಡು ಬಂದಿದೆ.
ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಗೂಗಲ್ ಪ್ಲೇ ಸ್ಟೋರ್ನಲ್ಲಿ ಸುಮಾರು 1.5 ಮಿಲಿಯನ್ ಬಾರಿಗಿಂತಲೂ ಹೆಚ್ಚು ಡೌನ್ಲೋಡ್ ಆಗಿರುವ 2 ಆಯಪ್ಗಳು ಚೀನಾದಲ್ಲಿರುವ ಸರ್ವರ್ಗಳಿಗೆ ಬಳಕೆದಾರರ ವೈಯಕ್ತಿಕ ಡೇಟಾ ರವಾನಿಸುತ್ತಿವೆ ಎಂಬುದನ್ನು ಗೂಗಲ್ ಭದ್ರತಾ ಸಂಶೋಧಕರು ಪತ್ತೆ ಮಾಡಿದ್ದಾರೆ.
ಈ ಆಯಪ್ಗಳು ಫೈಲ್ ಮ್ಯಾನೇಜ್‌ಮೆಂಟ್ ಆಯಪ್ಗಳಾಗಿವೆ ಎಂದು ಗೂಗಲ್ ಹೇಳಿದೆ.
“ನಮ್ಮ ಎಂಜಿನ್ Google Play Store ನಲ್ಲಿ ಅಡಗಿರುವ ಎರಡು ಸ್ಪೈವೇರ್ಗಳನ್ನು ಪತ್ತೆಹಚ್ಚಿದೆ. 1.5 ಮಿಲಿಯನ್ ಬಳಕೆದಾರರ ಮೇಲೆ ಪರಿಣಾಮ ಬೀರಬಹುದಾದ ಆಯಪ್ ಇವಾಗಿವೆ. ಎರಡೂ ಅಪ್ಲಿಕೇಶನ್‌ಗಳು ಒಂದೇ ಡೆವಲಪರ್‌ನಿಂದ ತಯಾರಿಸಲ್ಪಟ್ಟಿವೆ. ಇವು ಫೈಲ್ ಮ್ಯಾನೇಜ್‌ಮೆಂಟ್ ಅಪ್ಲಿಕೇಶನ್‌ಗಳಂತೆ ಕಾಣಿಸುತ್ತವೆಯಾದರೂ ಎರಡೂ ಒಂದೇ ರೀತಿಯ ದುರುದ್ದೇಶಪೂರಿತ ನಡವಳಿಕೆಗಳನ್ನು ಹೊಂದಿವೆ” ಎಂದು ಸೈಬರ್ ಸೆಕ್ಯೂರಿಟಿ ಕಂಪನಿ Pradeo ಹೇಳಿದೆ.
“ಬಳಕೆದಾರರು ತಾವಾಗಿಯೇ ಏನನ್ನೂ ಮಾಡದಿದ್ದರೂ ಇವು ತಾವಾಗಿಯೇ ಕೆಲಸ ಮಾಡುತ್ತವೆ ಮತ್ತು ಚೀನಾ ಮೂಲದ ವಿವಿಧ ದುರುದ್ದೇಶಪೂರಿತ ಸರ್ವರ್‌ಗಳ ಕಡೆಗೆ ಬಳಕೆದಾರರ ಸೂಕ್ಷ್ಮ ಡೇಟಾವನ್ನು ಗೌಪ್ಯವಾಗಿ ಕಳುಹಿಸುವಂತೆ ಅವುಗಳನ್ನು ಪ್ರೋಗ್ರಾಮ್ ಮಾಡಲಾಗಿದೆ” ಎಂದು ಅದು ತಿಳಿಸಿದೆ.
ತಾವು ಯಾವುದೇ ಡೇಟಾವನ್ನು ಸಂಗ್ರಹಿಸುವುದಿಲ್ಲ ಎಂದು ಎರಡೂ ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ವೆಬ್‌ಸೈಟ್‌ನಲ್ಲಿ ಹೇಳಿವೆ. ಆದಾಗ್ಯೂ ಎರಡೂ ಸ್ಪೈವೇರ್‌ಗಳು ತಮ್ಮ ಬಳಕೆದಾರರ ಬಹಳ ವೈಯಕ್ತಿಕ ಡೇಟಾವನ್ನು ಸಂಗ್ರಹಿಸಿವೆ ಮತ್ತು ಅದನ್ನು ಚೀನಾ ಸೇರಿದಂತೆ ಇತರ ಹಲವಡೆ ಸ್ಥಾಪಿಸಲಾಗಿರುವ ಸರ್ವರ್ಗಳಿಗೆ ರವಾನೆ ಮಾಡುತ್ತಿವೆ ಎಂದು ಭದ್ರತಾ ಸಂಶೋಧಕರು ಬಹಿರಂಗ ಪಡಿಸಿದ್ದಾರೆ.
ಡಿವೈಸ್ನಲ್ಲಿರುವ ಬಳಕೆದಾರರ ಕಾಂಟ್ಯಾಕ್ಟ್ ಲಿಸ್ಟ್ ಮತ್ತು ಇಮೇಲ್, ಸೋಶಿಯಲ್ ಮೀಡಿಯಾ ಅಕೌಂಟುಗಳು, ಆಯಪ್ನಲ್ಲಿ ಸಂಗ್ರಹವಾಗಿರುವ ಡೇಟಾ, ಫೋಟೊಗಳು, ವೀಡಿಯೊಗಳು, ಬಳಕೆದಾರರ ಲೋಕೆಶನ್, ನೆಟ್ವರ್ಕ್ ಪ್ರೊವೈಡರ್ ಹೆಸರು ಇತ್ಯಾದಿಗಳನ್ನು ಆಯಪ್ಗಳು ಕದಿಯುತ್ತಿವೆ.
File Recovery & Data Recovery ಮತ್ತು File Manager ಹೆಸರಿನ ಆಯಪ್ಗಳೇ ಡೇಟಾ ಕದ್ದು ಸಾಗಿಸುತ್ತಿರುವ ಆಯಪ್ಗಳಾಗಿವೆ. ಫೈಲ್ ರಿಕವರಿ ಮತ್ತು ಡೇಟಾ ರಿಕವರಿ ಆಯಪ್ 1 ಮಿಲಿಯನ್ಗೂ ಹೆಚ್ಚು ಬಾರಿ ಡೌನ್ಲೋಡ್ ಆಗಿದೆ. ಹಾಗೆಯೇ ಫೈಲ್ ಮ್ಯಾನೇಜರ್ ಆಯಪ್ 5 ಲಕ್ಷ ಬಾರಿ ಡೌನ್ಲೋಡ್ ಆಗಿದೆ. ಎರಡನ್ನೂ ವಾಂಗ್ ಟಾಮ್ ಹೆಸರಿನ ಪಬ್ಲಿಷರ್ ಅಪ್ಲೋಡ್ ಮಾಡಿದ್ದಾರೆ.
ತಮ್ಮ ಆಯಪ್ ಮೇಲ್ನೋಟಕ್ಕೆ ತುಂಬಾ ಅಧಿಕೃತವಾಗಿ ಕಾಣಿಸುವಂತೆ ಮಾಡುವುದು ಸೇರಿದಂತೆ ಇನ್ನೂ ಹಲವಾರು ತಂತ್ರಗಳ ಮೂಲಕ ಬಳಕೆದಾರರು ಅವನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ಪ್ರೇರೇಪಿಸಲಾಗುತ್ತದೆ. ದುರುದ್ದೇಶಪೂರಿತ ಅಪ್ಲಿಕೇಶನ್ (malicious app) ಎಂಬುದು ಅದನ್ನು ಡೌನ್ಲೋಡ್ ಮಾಡಲಾದ ಸಾಧನಗಳಿಗೆ ಹಾನಿ ಮಾಡಲು ವಿನ್ಯಾಸಗೊಳಿಸಲಾದ ಸಾಫ್ಟ್‌ವೇರ್ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್‌ಗಳನ್ನು ಕೆಲವೊಮ್ಮೆ ವಿಶ್ವಾಸಾರ್ಹವಲ್ಲದ ಸೈಟ್‌ಗಳಲ್ಲಿ ಪ್ರಚಾರ ಮಾಡಲಾಗುತ್ತದೆ. ಆದರೆ Apple App Store ಮತ್ತು Google Play ನಂತಹ ಅತ್ಯಂತ ಜನಪ್ರಿಯ ಪ್ಲಾಟ್‌ಫಾರ್ಮ್‌ಗಳಲ್ಲಿ ಸಹ ಇವು ಕಾಣಿಸಿಕೊಳ್ಳುತ್ತವೆ.