Hand Wash Tips: ಮನೆಯಲ್ಲಿ ಹಿರಿಯರು ಊಟ ಮಾಡುವಾಗ ಕೈ ತೊಳೆಯುವಂತೆ ಸಲಹೆ ನೀಡುತ್ತಾರೆ. ಇದಲ್ಲದೆ, ಸ್ವಚ್ಛತೆಯ ದೃಷ್ಟಿಯಿಂದಲೂ ಆಗಾಗ್ಗ ಕೈ ತೊಳೆಯುವುದು ತುಂಬಾ ಒಳ್ಳೆಯದು. ಆದರೆ, ಕೈ ತೊಳೆಯುವಾಗ ಮಾಡುವ ಕೆಲವು ತಪ್ಪುಗಳು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು.
Hand Wash Tips: ಸಾಮಾನ್ಯವಾಗಿ ಹೊರಗಿನಿಂದ ಬಂದಾಗ, ಇಲ್ಲವೇ ಕೈಗಳು ಕೊಳಕಾದಾಗ ಕೈತೊಳೆಯುತ್ತೇವೆ. ಜನರು ಹೆಚ್ಚಾಗಿ ಊಟ ಮಾಡುವ ಮೊದಲು ತಮ್ಮ ಕೈಗಳನ್ನು ಚೆನ್ನಾಗಿ ತೊಳೆಯುತ್ತಾರೆ. ಇದರಿಂದ ಕೈಯಲ್ಲಿರುವ ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸುವುದಿಲ್ಲ ಎಂಬುದು ನಂಬಿಕೆ. ಆದರೆ, ಕೈ ತೊಳೆಯುವಾಗ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ನಿಮ್ಮ ಆರೋಗ್ಯಕ್ಕೆ ಆಪತ್ತು ತರಬಹುದು ಎಂದು ನಿಮಗೆ ತಿಳಿದಿದೆಯೇ? ಈ ಲೇಖನದಲ್ಲಿ ಕೈ ತೊಳೆಯುವಾಗ ಮಾಡುವ ಸಾಮಾನ್ಯ ತಪ್ಪುಗಳು ಯಾವುವು? ಅದು ನಮ್ಮ ಆರೋಗ್ಯಕ್ಕೆ ಹೇಗೆ ಹಾನಿಕಾರಕವಾಗಿದೆ ಎಂದು ತಿಳಿಯೋಣ…
ಕೈ ತೊಳೆಯುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಲೇಬಾರದು:
ಆರೋಗ್ಯ ತಜ್ಞರ ಪ್ರಕಾರ, ನಾವು ಕೈ ತೊಳೆಯುವಾಗ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ನಮ್ಮ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಆಗಿವೆ. ಇದು ನಮ್ಮನ್ನು ಗಂಭೀರ ರೋಗಗಳಿಗೆ ಬಲಿಯಾಗುವಂತೆಯೂ ಮಾಡಬಹುದು. ಅಂತಹ ಕೆಲವು ತಪ್ಪುಗಳೆಂದರೆ.
* ಕಾಟಾಚಾರಕ್ಕೆ ಕೈತೊಳೆಯುವುದು:
ಕೆಲವರು ಆಹಾರ ಸೇವನೆಗೂ ಮೊದಲು ಸುಮ್ಮನೆ ಕೈತೊಳೆಯಬೇಕಲ್ಲಾ ಎಂದು ಕಾಟಾಚಾರಕ್ಕೆ ಆತುರಾತುರವಾಗಿ ಕೈ ತೊಳೆಯುತ್ತಾರೆ. ಆದರೆ, ಇದರಿಂದ ಕೈಯಲ್ಲಿರುವ ಬ್ಯಾಕ್ಟೀರಿಯಾ ಹೋಗುವುದಿಲ್ಲ. ಆರೋಗ್ಯ ತಜ್ಞರ ಪ್ರಕಾರ, ಪ್ರತಿ ಬಾರಿ ಕನಿಷ್ಠ 20-30 ಸೆಕೆಂಡ್ ವರೆಗೆ ಕೈ ತೊಳೆಯಬೇಕು.
* ಸ್ಯಾನಿಟೈಸರ್ ಬಳಕೆ:
ಕರೋನಾ ಬಳಿಕ ಸ್ಯಾನಿಟೈಸರ್ ಬಳಕೆ ತುಂಬಾ ಹೆಚ್ಚಾಗಿದೆ. ಸ್ಯಾನಿಟೈಸರ್ ಬಳಕೆ ತಪ್ಪೇನಲ್ಲ. ಆದಾಗ್ಯೂ, ಅವಕಾಶವಿದ್ದಾಗ ಸ್ಯಾನಿಟೈಸರ್ ಬಳಸುವ ಬದಲು ನೀರಿನಿಂದ ಹ್ಯಾಂಡ್ ವಾಶ್ ಮಾಡಿರಿ.
* ಕೈ ಒರೆಸುವ ಬಟ್ಟೆ:
ಕೈ ತೊಳೆದ ಬಳಿಕ ಒದ್ದೆಯನ್ನು ಬಟ್ಟೆಗಳಿಂದ ಒರೆಸಲಾಗುತ್ತದೆ. ಆದರೆ, ನೀವು ಕೈ ಒರೆಸುವ ಬಟ್ಟೆ ಎಷ್ಟು ಶುಭ್ರವಾಗಿದೆ ಎಂಬ ಬಗ್ಗೆ ನಿಗಾವಹಿಸಲು ಮರೆಯಬೇಡಿ. ಕಾರಣ ನೀವು ಚೆನ್ನಾಗಿ ಕೈ ತೊಳೆದು ಬಳಿಕ ಕೊಳಕು ಬಟ್ಟೆಗೆ ಕೈ ಒರೆಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.
* ಹ್ಯಾಂಡ್ ವಾಶ್ ಬಳಿಕ ಕೈ ಒರಿಸದೆ ಇರುವುದು:
ಇನ್ನೂ ಕೆಲವರು ಕೈ ತೊಳೆದು ಬಳಿಕ ಕೈ ಒರೆಸುವುದೇ ಇಲ್ಲ. ಇದರಿಂದ ಒದ್ದೆಯಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಇಂತಹ ಕೈಗಳಿಂದ ಏನಾದರೂ ತಿಂದಾಗ ಆ ಬ್ಯಾಕ್ಟೀರಿಯಾಗಲು ನಮ್ಮ ದೇಹವನ್ನು ಸುಲಭವಾಗಿ ಪ್ರವೇಶಿಸುತ್ತವೆ. ಇದರಿಂದ ಅನಾರೋಗ್ಯವೂ ಉಂಟಾಗಬಹುದು.
* ಬರೀ ನೀರಿನಿಂದ ಕೈ ತೊಳೆಯುವುದು:
ಕೆಲವು ಸಂದರ್ಭಗಳಲ್ಲಿ ಎಂದರೆ ಕೈ ಹೆಚ್ಚು ಕೊಳಕಾಗದ ಸಂದರ್ಭದಲ್ಲಿ ಬರೀ ನೀರಿನಿಂದ ಕೈ ತೊಳೆಯುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ನೀವು ಕೆಲಸ ಮಾಡಿದ್ದ ಸಂದರ್ಭದಲ್ಲಿ, ನಿಮ್ಮ ಕೈನಲ್ಲಿ ಸಣ್ಣ-ಪುಟ್ಟ ಧೂಳು ಇದ್ದ ಸಂದರ್ಭದಲ್ಲಿ ಕೈ ತೊಳೆಯುವಾಗ ಸಾಬೂನನ್ನು ಬಳಸಿ. ಹೀಗೆ ಮಾಡುವುದರಿಂದ ಕೈಯಲ್ಲಿರುವ ಬ್ಯಾಕ್ಟೀರಿಯಾವನ್ನು ನಿರ್ಮೂಲನೆ ಮಾಡಬಹುದು. ಬರೀ ನೀರಿನಿಂದ ಕೈ ತೊಳೆದರೆ ಕೈಯಲ್ಲಿರುವ ರೋಗಾಣುಗಳು ಸಂಪೂರ್ಣವಾಗಿ ನಾಶವಾಗದೆ ಅದು ನಮ್ಮ ದೇಹವನ್ನು ಪ್ರವೇಶಿಸಬಹುದು. ಇದರಿಂದ ಅನಾರೋಗ್ಯ ಸಮಸ್ಯೆಗಳೂ ಉಂಟಾಗಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಸಮಗ್ರ ಸುದ್ದಿ ಖಚಿತಪಡಿಸುವುದಿಲ್ಲ.