ಹುಳಿ-ರಸವಿರುವ ನಿಂಬೆ ಹಣ್ಣನ್ನು ಸರಳವಾಗಿ ಶರಬತ್ ಮಾಡಲು ಬಳಸಲಾಗುತ್ತದೆ ಅಥವಾ ಅದರ ರಸವನ್ನು ಆಹಾರ ಮತ್ತು ಪಾನೀಯದ ಮೇಲೆ ಸಿಂಪಡಿಸುವುದರಿಂದ ಅದರ ರುಚಿಯನ್ನು ಹೆಚ್ಚಿಸಲಾಗುತ್ತದೆ. ನಿಂಬೆ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯವನ್ನೂ ಕಾಪಾಡುತ್ತದೆ.

ಬೆಂಗಳೂರು : ನಿಂಬೆ ಸೇವನೆಯು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ನಿಂಬೆ ವಿಟಮಿನ್ ಸಿ ಮತ್ತು ಹಲವಾರು ಉತ್ಕರ್ಷಣ ನಿರೋಧಕಗಳು, ಪೊಟ್ಯಾಸಿಯಮ್, ಸಿಟ್ರಿಕ್ ಆಮ್ಲ, ಹೈಡ್ರೋಕ್ಲೋರಿಕ್ ಆಮ್ಲದ ಉತ್ತಮ ಮೂಲವಾಗಿದೆ. ಇದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಚರ್ಮವು ಕಾಂತಿಯುತವಾಗಿರುತ್ತದೆ. ಇದಲ್ಲದೆ, ನಿಂಬೆಯ ನಿರಂತರ ಸೇವನೆಯಿಂದ ಅನೇಕ ಗಂಭೀರ ಕಾಯಿಲೆಗಳನ್ನು ಸಹ ತಪ್ಪಿಸಬಹುದು. 2-4 ರೂ.ಗೆ ಸಿಗುವ ನಿಂಬೆ ಹಣ್ಣನ್ನು ನಿತ್ಯ ಸೇವಿಸುವುದರಿಂದ ಆರೋಗ್ಯವಾಗಿರಬಹುದು ಮತ್ತು ಔಷಧಗಳ ವೆಚ್ಚವನ್ನೂ ಉಳಿಸಬಹುದು.
1. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ :
ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ವಿಟಮಿನ್ ಸಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂಥಹ ಪೋಷಕಾಂಶವಾಗಿದೆ. ಇದಲ್ಲದೆ, ವಿಟಮಿನ್ ಸಿ ದೇಹದಲ್ಲಿ ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ದೇಹವನ್ನು ಸೋಂಕುಗಳು ಮತ್ತು ರೋಗಗಳಿಂದ ರಕ್ಷಿಸುತ್ತದೆ.
2. ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ :
ನಿಂಬೆ ಆಂಟಿಆಕ್ಸಿಡೆಂಟ್ ಗುಣಗಳಿಂದ ತುಂಬಿದೆ. ಈ ಕಾರಣಕ್ಕಾಗಿ, ಇದು ನಮ್ಮ ಚರ್ಮದ ಹೊಳಪನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಯಮಿತವಾಗಿ ನಿಂಬೆಯನ್ನು ಸೇವಿಸಿದರೆ, ದುಬಾರಿ ಕಾಸ್ಮೆಟಿಕ್ ಉತ್ಪನ್ನಗಳ ಅಗತ್ಯವೂ ಕಡಿಮೆಯಾಗುತ್ತದೆ. ಒಂದು ಲೋಟ ನೀರಿಗೆ ನಿಂಬೆರಸ ಬೆರೆಸಿ ಕುಡಿದರೆ ಸಾಕು. ನಿರಂತರವಾಗಿ ಇದನ್ನು ಸೇವಿಸಿದರೆ, ಕೆಲವೇ ದಿನಗಳಲ್ಲಿ ಚರ್ಮವು ಕಾಂತಿಯುತವಾಗಿ ಹೊಳೆಯುತ್ತದೆ.
3. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ :
ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಸಕ್ಕರೆ ಅಂಶ ಇರುವ ಜ್ಯೂಸ್ ಮತ್ತು ಪಾನೀಯಗಳಿಗಿಂತ ನಿಂಬೆ ಪಾನಕ ಉತ್ತಮ ಆಯ್ಕೆಯಾಗಿದೆ. ಮಧುಮೇಹ ರೋಗಿಗಳಿಗೆ ನಿಂಬೆ ಪಾನಕ ಸಹಾಯ ಮಾಡುತ್ತದೆ. ಇದು ಸಕ್ಕರೆಯನ್ನು ನಿರ್ಣಾಯಕ ಮಟ್ಟ ತಲುಪದಂತೆ ತಡೆಯುತ್ತದೆ.
4. ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯಕವಾಗಿದೆ :
ನಿಂಬೆಯಲ್ಲಿ ಪೆಕ್ಟಿನ್ ಇರುತ್ತದೆ. ನಿಂಬೆ ಪಾನಕವನ್ನು ಸೇವಿಸಿದಾಗ, ಅದು ನಿಮ್ಮ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬುತ್ತದೆ. ಇದು ನಿಮ್ಮ ಹಸಿವನ್ನು ನಿಯಂತ್ರಣದಲ್ಲಿರಿಸುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.
5. ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ :
ಮಲಬದ್ಧತೆಯ ಸಮಸ್ಯೆ ಇದ್ದರೆ, ನಿಂಬೆ ನೀರು ನಿಮಗೆ ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಇದು ತುಂಬಾ ಸಹಕಾರಿಯಾಗಿದೆ. ಪ್ರತಿದಿನ ಬೆಳಿಗ್ಗೆ ಒಂದು ಲೋಟ ಉಗುರುಬೆಚ್ಚನೆಯ ನೀರನ್ನು ನಿಂಬೆ ರಸದೊಂದಿಗೆ ಬೆರೆಸಿ ಕುಡಿಯುವುದರಿಂದ ಮಲಬದ್ದತೆಯ ಸಮಸ್ಯೆ ನಿವಾರಣೆಯಾಗುತ್ತದೆ. .
ಈ ಎಲ್ಲಾ ಪ್ರಯೋಜನಗಳ ಹೊರತಾಗಿಯೂ, ನಿಂಬೆಯ ವ ಅಲರ್ಜಿಯನ್ನು ಹೊಂದಿದ್ದರೆ, ಅದರ ಬಳಕೆಯನ್ನು ತಪ್ಪಿಸಬೇಕು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)