ಥ್ರೆಡ್ಸ್ ಆಯಪ್ ಶರವೇಗದಲ್ಲಿ ಜನಬಳಕೆ ಮಾಡುತ್ತಿದ್ದು, ಟ್ವಿಟರ್ ಬಳಕೆದಾರರನ್ನು ಮೀರಿಸುವ ಹಾದಿಯಲ್ಲಿದೆ.
ನವದೆಹಲಿ: ಟ್ವಿಟರ್ ತದ್ರೂಪಿ ಮೆಟಾ ಒಡೆತನದ ಥ್ರೆಡ್ಸ್ ಆಯಪ್ ಇಂದು ಬಿಡುಗಡೆಯಾಗಿದೆ. ಲಾಂಚ್ ಆದ ಮೊದಲ 2 ಗಂಟೆಗಳಲ್ಲಿ 2 ಮಿಲಿಯನ್(20 ಲಕ್ಷ) ಸೈನ್ ಅಪ್ ಕಂಡರೆ, 4 ಗಂಟೆಗಳಲ್ಲಿ 5 ಮಿಲಿಯನ್ (50 ಲಕ್ಷ) ಲಾಗ್ಇನ್ ಆಗಿದೆ.
ಇದೇ ವೇಗದಲ್ಲಿ ಆಯಪ್ ಮುಂದುವರಿದರೆ, ಈಗಿರುವ ಜನಪ್ರಿಯ ಮೈಕ್ರೋಬ್ಲಾಗಿಂಗ್ ಟ್ವಿಟರ್ ಪಾತಾಳಕ್ಕೆ ಕುಸಿಯುವ ಸಾಧ್ಯತೆಗಳು ದಟ್ಟವಾಗಿವೆ.
ವಿಶ್ವದ ನಂಬರ್ 1 ಧನಿಕ ಎಲಾನ್ ಮಸ್ಕ್ ಒಡೆತನದ ಟ್ವಿಟರ್ಗೆ ಪರ್ಯಾಯವಾಗಿ ರೂಪುಗೊಂಡಿರುವ ಥ್ರೆಡ್ಸ್ ಆಯಪ್ ಬಹುಬೇಗನೇ ಜನರನ್ನು ಸೆಳೆಯುತ್ತಿದೆ. ಇದಕ್ಕೆ ಮಸ್ಕ್ರ ನೀತಿಗಳೇ ಕಾರಣವಾಗಿವೆ. ಟ್ವಿಟರ್ ಆರಂಭಿಸಿದಾಗಲೂ ಈ ಪ್ರಮಾಣದಲ್ಲಿ ಆಯಪ್ ಡೌನ್ಲೋಡ್ ಕಂಡಿರಲಿಕ್ಕಿಲ್ಲ ಎಂದು ಹೇಳಲಾಗಿದೆ.
“ಥ್ರೆಡ್ಸ್ ಆಯಪ್ ಪರಿಚಯಿಸಿದ ಮೊದಲ 2 ಗಂಟೆಯಲ್ಲಿ 2 ಮಿಲಿಯನ್ ಸೈನ್ ಅಪ್ ಕಂಡಿದೆ. ಬಳಿಕ ಅದು 4 ಗಂಟೆಗಳಲ್ಲಿ 5 ಮಿಲಿಯನ್ ದಾಟಿದೆ” ಎಂದು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಮಾಹಿತಿ ನೀಡಿದ್ದಾರೆ. ಹೀಗಾಗಿ ಇದು ಟ್ವಿಟರ್‌ಗಿಂತ ಹೆಚ್ಚಿನ ಬಳಕೆದಾರರನ್ನು ಕಾಣಬಹುದಾು ಎಂದು ಅಂದಾಜಿಸಲಾಗಿದೆ.
ಟ್ವಿಟರ್‌ಗಿಂತ ಥ್ರೆಡ್ಸ್ ಆಯಪ್ ಬಳಕೆದಾರರ ಮೀರಿಸಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಜುಕರ್‌ಬರ್ಗ್, “ಇದಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಟ್ವಿಟರ್ ಸದ್ಯ 1 ಬಿಲಿಯನ್ + ಬಳಕೆದಾರರನ್ನು ಹೊಂದಿರಬಹುದು ಎಂದು ಭಾವಿಸುತ್ತೇನೆ. ಹೀಗಾಗಿ ಟ್ವಿಟರ್ ಮೀರಲು ಅವಕಾಶವಿದೆ. ಈ ನಿರೀಕ್ಷೆಯನ್ನು ನಾವೂ ಹೊಂದಿದ್ದೇವೆ” ಎಂದು ಉತ್ತರಿಸಿದ್ದಾರೆ.
“ಮೊದಲು ಥ್ರೆಡ್ಸ್ ಆಯಪ್ ಅನ್ನು ಮುಕ್ತ ಸಂಭಾಷಣೆ ಮತ್ತು ಸ್ನೇಹ ಸಂಪರ್ಕಕ್ಕಾಗಿ ರೂಪಿಸುವ ಉದ್ದೇಶವಿತ್ತು. ತದನಂತರ ಇನ್‌ಸ್ಟಾಗ್ರಾಮ್‌ನ ಅತ್ಯುತ್ತಮ ತಾಂತ್ರಿಕತೆಯನ್ನು ಬಳಸಿಕೊಂಡು ಹೊಸದಾದ ಆಯಪ್ ಅನ್ನು ನೀಡುವ ಹಾದಿಯಲ್ಲಿ ರೂಪಿಸಲಾಗಿದೆ” ಎಂದು ಅವರು ಥ್ರೆಡ್ಸ್ ಜನ್ಮತಾಳಿದ ಬಗ್ಗೆ ಮಾಹಿತಿ ನೀಡಿದರು.
“ಇನ್‌ಸ್ಟಾಗ್ರಾಮ್‌ನ ಅತ್ಯುತ್ತಮ ಅಂಶಗಳನ್ನು ಇಲ್ಲಿ ಅಳವಡಿಸಲಾಗಿದೆ. ಟ್ವಿಟರ್ ಮಾದರಿಯಂತಿರುವ ಥ್ರೆಡ್ಸ್ ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ. ಆಲೋಚನೆ, ವಿಷಯ, ಮಾಹಿತಿಯನ್ನು ತಮ್ಮವರ ಜೊತೆಗೆ ಹಂಚಿಕೊಳ್ಳಲು ಇದು ವೇದಿಕೆ ನೀಡಲಿದೆ. ಕಡಿಮೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಜನರು ಸ್ವೀಕರಿಸಿದ್ದಕ್ಕೆ ಕೃತಜ್ಞನಾಗಿದ್ದೇನೆ. ಮೊದಲ ದಿನವೇ ಥ್ರೆಡ್ಸ್ ಇತಿಹಾಸ ರೂಪಿಸುತ್ತಿರುವುದಕ್ಕೆ ನಿಮಗೆಲ್ಲರಿಗೆ ನಾನು ಆಭಾರಿ” ಎಂದು ಜುಕರ್‌ಬರ್ಗ್ ಹೇಳಿದ್ದಾರೆ.
11 ವರ್ಷಗಳ ಬಳಿಕ ಟ್ವೀಟ್ ಮಾಡಿದ ಮಾರ್ಕ್ ಜುಕರ್‌ಬರ್ಗ್ : ಕುತೂಹಲಕಾರಿ ವಿಷಯವೆಂದರೆ, ಫೇಸ್ಬುಕ್, ಮೆಟಾ ಸಿಇಒ ಆಗಿರುವ ಮಾರ್ಕ್ ಜುಕರ್‌ಬರ್ಗ್ 11 ವರ್ಷಗಳ ಬಳಿಕ ಮೊದಲ ಬಾರಿಗೆ ಟ್ವೀಟ್ ಮಾಡಿದ್ದಾರೆ. ಅದೂ ಥ್ರೆಡ್ಸ್ ಆಯಪ್ ಆರಂಭದ ಮೊದಲ ದಿನ. ಸ್ಪೈಡರ್ಮ್ಯಾನ್ ಮೀಮ್ನ ಟ್ವೀಟ್ ಇದಾಗಿದ್ದು, ಟ್ವಿಟರ್ಗೆ ಗುದ್ದು ನೀಡುವ ರೀತಿಯಲ್ಲಿ ಅದನ್ನು ಮಾರ್ಮಿಕವಾಗಿ ಟ್ವೀಟಿಸಿದ್ದಾರೆ.
ಥ್ರೆಡ್ಸ್ ಆಯಪ್ ಟ್ವಿಟರ್ನಂತೆಯೇ ಫೀಚರ್ಗಳನ್ನು ಹೊಂದಿರುವ ಕಾರಣ, ಸ್ಪೈಡರ್‌ಮ್ಯಾನ್‌ನಂತೆಯೇ ಕಾಣುವ ಇನ್ನೊಬ್ಬ ತದ್ರೂಪಿ ಎದುರು ನಿಂತ ಮೀಮ್ ಚಿತ್ರವನ್ನು ಮಾರ್ಕ್ ಟ್ವೀಟ್ ಮಾಡಿದ್ದು, ಅದು 1967ರ ಸ್ಪೈಡರ್ಮ್ಯಾನ್ “ಡಬಲ್ ಐಡೆಂಟಿಟಿ” ಕಾರ್ಟೂನ್ ಆಗಿದೆ. ಇದರಲ್ಲಿ ವಿಲನ್ ನಾಯಕನಂತೆಯೇ ಗೆಟಪ್ ಹಾಕಿರುತ್ತಾನೆ.
ಟ್ವಿಟರ್ಗೆ ಬಿಗ್ ಫೈಟ್: ನೂತನವಾಗಿ ಲಾಂಚ್ ಆಗಿರುವ ಥ್ರೆಡ್ಸ್ ಟ್ವಿಟರ್ ಬಳಕೆದಾರರಿಗಿಂತ ಹೆಚ್ಚು ಸಂಖ್ಯೆಯನ್ನು ಹೊಂದಬೇಕಾದರೆ, ಈಗಿರುವ ಇನ್ಸ್ಟಾಗ್ರಾಮ್ ಬಳಕೆದಾರರ 1/4 ಜನರು ಸೈನ್ಅಪ್ ಆದರೆ ಸಾಕು. ಆಗ ಎಲಾನ್ ಮಸ್ಕ್ರ ಟ್ವಿಟರ್ ಗರ್ವಭಂಗ ಖಂಡಿತ ಎಂದು ಹೇಳಬಹುದು. ಸದ್ಯ ಜಗತ್ತಿನಲ್ಲಿ ಟ್ವಿಟರ್ ಬಳಕೆದಾರರು 354 ಮಿಲಿಯನ್ ಇದ್ದರೆ, ಇನ್ಸ್ಟ್ರಾಗ್ರಾಮ್ ಬಳಸುವವರು 4.54 ಬಿಲಿಯನ್ ಇದ್ದಾರೆ. ಥ್ರೆಡ್ಸ್ ಲಾಗ್ ಇನ್ ಆಗಲು ಮೆಟಾ ಸಂಸ್ಥೆ ಸರಳ ಮಾರ್ಗ ನೀಡಿದೆ. ಇನ್ಸ್ಟಾಗ್ರಾಮ್ ಖಾತೆ ಇದ್ದರೆ ಹೊಸ ಆಯಪ್ ಸೈನ್ ಅಪ್ ಆಗಬಹುದು.