ಆರೋಗ್ಯ : ಕುತ್ತಿಗೆಯ ಮುಂಭಾಗದಲ್ಲಿ ಧ್ವನಿಪೆಟ್ಟಿಗೆಯ ಕೆಳಭಾಗದಲ್ಲಿ ಇರುವ, ಪುಟ್ಟ ಚಿಟ್ಟೆಯಾಕಾರದ ಅಂಗವೇ ಥೈರಾಯ್ಡ್ ಗ್ರಂಥಿ. ಗಾತ್ರದಲ್ಲಿ ಸಣ್ಣದಾದರೂ ಚಯಾಪಚಯ ಕ್ರಿಯೆ, ಬೆಳವಣಿಗೆ ಮತ್ತು ಶಕ್ತಿ ಸಮತೋಲನಗಳ ಮೇಲೆ ಪ್ರಭಾವ ಬೀರುವ ಹಾರ್ಮೋನ್‌ಗಳನ್ನು ಉತ್ಪಾದಿಸುವ ಮೂಲಕ ಅದು ದೇಹದ ಹಲವು ಮುಖ್ಯ ಕಾರ್ಯಚಟುವಟಿಕೆಗಳ ನಿಯಂತ್ರಣದಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ.
ಥೈರಾಯ್ಡ್ ಗ್ರಂಥಿ ಅನಾರೋಗ್ಯಗಳು ಉಂಟಾಗುವುದು ಸರ್ವೇ ಸಾಮಾನ್ಯವಾದರೂ ಅವುಗಳ ಬಗ್ಗೆ ನಿರ್ಲಕ್ಷ್ಯವೇ ಹೆಚ್ಚು. ಆದರೆ ಈ ಅನಾರೋಗ್ಯಗಳಿಗೆ ಚಿಕಿತ್ಸೆ ಒದಗಿಸದೆ ಹೋದಲ್ಲಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದಾಗಿದೆ.
ಥೈರಾಯ್ಡ್ ಗ್ರಂಥಿಯ ಸಾಮಾನ್ಯ ತೊಂದರೆಗಳು
ಹೈಪೊಥೈರಾಯ್ಡಿಸಂ
ಥೈರಾಯ್ಡ್ ಗ್ರಂಥಿಯು ಉತ್ಪಾದಿಸುವ ಹಾರ್ಮೋನ್ ಪ್ರಮಾಣ ಕಡಿಮೆಯಾದಾಗ ಈ ಸ್ಥಿತಿ ಉಂಟಾಗುತ್ತದೆ. ದಣಿವು, ದೇಹ ತೂಕ ಗಳಿಕೆ, ಶುಷ್ಕ ಚರ್ಮ, ಕೂದಲು ಉದುರುವಿಕೆ, ಮಲಬದ್ಧತೆ ಮತ್ತು ಚಳಿಯನ್ನು ಸಹಿಸಲಾಗದಿರುವುದು ಇದರ ಕೆಲವು ಲಕ್ಷಣಗಳು. ಇದು ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತಿದ್ದು, ವಯಸ್ಸಾದಂತೆ ತೀವ್ರತೆ ಹೆಚ್ಚುತ್ತದೆ.
ಹೈಪರ್‌ಥೈರಾಯ್ಡಿಸಂ
ಈ ಅನಾರೋಗ್ಯ ಸ್ಥಿತಿಯಲ್ಲಿ ಥೈರಾಯ್ಡ ಗ್ರಂಥಿಯು ಹೆಚ್ಚು ಕ್ರಿಯಾಶೀಲವಾಗಿದ್ದು, ಹೆಚ್ಚುವರಿ ಹಾರ್ಮೋನ್ ಉತ್ಪಾದಿಸುತ್ತದೆ. ರೋಗಿಗಳಿಗೆ ಹಸಿವು ಚೆನ್ನಾಗಿದ್ದರೂ ದೇಹತೂಕ ನಷ್ಟ, ಹೆಚ್ಚು ಬೆವರುವುದು, ತೀವ್ರ ಎದೆಬಡಿತ, ನಡುಕ, ಉದ್ವಿಗ್ನತೆ ಮತ್ತು ನಿದ್ದೆ ಬಾರದಿರುವಿಕೆಯಂತಹ ಲಕ್ಷಣಗಳನ್ನು ಅನುಭವಿಸಬಹುದು.
ಗೊಯಟರ್
ಇದರಲ್ಲಿ ಥೈರಾಯ್ಡ ಗ್ರಂಥಿಯು ಊದಿಕೊಂಡು, ಕೊರಳಿನ ಭಾಗದಲ್ಲಿ ಊತದಂತೆ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಇದು ನಿರಪಾಯಕಾರಿಯಾಗಿದ್ದು, ಅಯೋಡಿನ್ ಕೊರತೆ ಅಥವಾ ಥೈರಾಯ್ಡ ಗ್ರಂಥಿಯ ಇತರ ಅನಾರೋಗ್ಯಕ್ಕೆ ಸಂಬಂಧಿಸಿರಬಹುದು.
ಥೈರಾಯ್ಡ್ ಗಂಟುಗಳು
ಥೈರಾಯ್ಡ್ ಗ್ರಂಥಿಯಲ್ಲಿ ಗಡ್ಡೆಗಳು ಉಂಟಾಗುವುದು ಕಡಿಮೆ. ಇಂತಹ ಗಡ್ಡೆಗಳು ಸಾಮಾನ್ಯವಾಗಿ ನಿರಪಾಯಕಾರಿಯಾಗಿರುತ್ತವೆ; ಕೆಲವು ಮಾತ್ರ ಥೈರಾಯ್ಡ ಕ್ಯಾನ್ಸರ್ ಆಗಿರಬಹುದು. ಇದನ್ನು ಪತ್ತೆಹಚ್ಚಲು ಕೂಲಂಕಷ ತಪಾಸಣೆ ಅಗತ್ಯವಾಗಿರುತ್ತದೆ.
ಥೈರಾಯ್ಡ್ ಕ್ಯಾನ್ಸರ್
ಇತರ ಕ್ಯಾನ್ಸರ್‌ಗಳಿಗೆ ಹೋಲಿಸಿದರೆ ಇದು ಸಾಮಾನ್ಯವಲ್ಲ; ಇವು ನಿಧಾನ ಗತಿಯಲ್ಲಿ ಬೆಳವಣಿಗೆ ಹೊಂದುವಂಥವಾಗಿದ್ದು, ಆರಂಭದಲ್ಲಿಯೇ ಪತ್ತೆಹಚ್ಚಿದರೆ ಚಿಕಿತ್ಸೆಗೆ ಒಳಪಡಿಸಬಹುದಾದಂಥವು. ಕುತ್ತಿಗೆ ಭಾಗದಲ್ಲಿ ಊತ, ಧ್ವನಿಯಲ್ಲಿ ಬದಲಾವಣೆ, ನುಂಗಲು ಕಷ್ಟವಾಗುವುದು ಅಥವಾ ಕುತ್ತಿಗೆ ಭಾಗದಲ್ಲಿ ದುಗ್ಧ ರಸ ಗ್ರಂಥಿಗಳ ಊತ ಇದರ ಕೆಲವು ಲಕ್ಷಣಗಳು.
ಶೀಘ್ರ ಪತ್ತೆ ಏಕೆ ಮುಖ್ಯ?
ಥೈರಾಯ್ಡ್ ಗ್ರಂಥಿಯ ಸಮಸ್ಯೆಗಳಿಗೆ ಒಳಗಾಗಿರುವ ಬಹುತೇಕ ರೋಗಿಗಳು ಕುತ್ತಿಗೆ ಭಾಗದಲ್ಲಿ ಗಡ್ಡೆ, ಪದೇ ಪದೆ ಗಂಟಲು ಕಿರಿಕಿರಿ, ಧ್ವನಿಯಲ್ಲಿ ಬದಲಾವಣೆ ಅಥವಾ ನುಂಗಲು ಕಷ್ಟವಾಗುವಂತಹ ಸಮಸ್ಯೆಗಳೊಂದಿಗೆ ಇಎನ್‌ಟಿ ತಜ್ಞರಲ್ಲಿಗೆ ಬರುತ್ತಾರೆ. ಕೂಲಂಕಷ ಪರೀಕ್ಷೆಯಿಂದ ರೋಗ ಲಕ್ಷಣಗಳಿಗೆ ಕಾರಣವಾದ ಥೈರಾಯ್ಡ್ ಅನಾರೋಗ್ಯ ಪತ್ತೆಯಾಗುತ್ತದೆ. ಕ್ಲಪ್ತ ಕಾಲದಲ್ಲಿ ರೋಗಪತ್ತೆ ಮತ್ತು ಚಿಕಿತ್ಸೆ- ಔಷಧ, ಶಸ್ತ್ರಕ್ರಿಯೆ ಅಥವಾ ಇತರ ಚಿಕಿತ್ಸೆಗಳ ಮೂಲಕ ಥೈರಾಯ್ಡ್ ಗ್ರಂಥಿಯ ಬಹುತೇಕ ಅನಾರೋಗ್ಯಗಳನ್ನು ಗುಣಪಡಿಸಬಹುದಾಗಿದೆ.
ಥೈರಾಯ್ಡ್ ಆರೋಗ್ಯ ರಕ್ಷಣೆ
ತಿಳಿವಳಿಕೆ ಇರಲಿ: ಕುತ್ತಿಗೆ ಭಾಗದಲ್ಲಿ ಕಾರಣವಿಲ್ಲದ ಊತ ಅಥವಾ ಧ್ವನಿಯಲ್ಲಿ ಪದೇಪದೆ ಬದಲಾವಣೆ ಉಂಟಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ.
ಸಮತೋಲಿತ ಆಹಾರ: ಅಯೋಡಿನ್‌ಯುಕ್ತ ಉಪ್ಪಿನ ಬಳಕೆಯಿಂದ ಅಯೋಡಿನ್ ಕೊರತೆ ಸಂಬಂಧಿ ಗೊಯಟರ್ ಉಂಟಾಗುವುದನ್ನು ತಪ್ಪಿಸಬಹುದಾಗಿದೆ.
ತಪಾಸಣೆ: ಥೈರಾಯ್ಡ ಕಾಯಿಲೆಯ ಕುಟುಂಬ ಇತಿಹಾಸವನ್ನು ಹೊಂದಿರುವವರು ಅಥವಾ ಕಾರಣವಿಲ್ಲದೆ ದೇಹತೂಕ ಗಳಿಕೆ ಅಥವಾ ನಷ್ಟ ಅನುಭವಿಸುತ್ತಿರುವವರು, ದೇಹ ಶಕ್ತಿಯಲ್ಲಿ ಬದಲಾವಣೆ ಹೊಂದುತ್ತಿರುವವರು ನಿಯಮಿತವಾಗಿ ಥೈರಾಯ್ಡ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ.
ಕ್ಲಪ್ತ ಕಾಲದಲ್ಲಿ ಚಿಕಿತ್ಸೆ: ಶೀಘ್ರವಾಗಿ ವೈದ್ಯರನ್ನು ಕಂಡು ತಪಾಸಣೆ ಮಾಡಿಸಿಕೊಳ್ಳುವುದರಿಂದ ಸಮಸ್ಯೆಯನ್ನು ಬೇಗನೆ ಪತ್ತೆಹಚ್ಚಿ ಗಂಭೀರ ಕಾಯಿಲೆಯಾಗಿ ಉಲ್ಬಣಿಸುವುದನ್ನು ತಡೆಯಬಹುದಾಗಿದೆ.
ಥೈರಾಯ್ಡ್ ಗ್ರಂಥಿಯು ಗಾತ್ರದಲ್ಲಿ ಸಣ್ಣದಾದರೂ ನಮ್ಮ ದೇಹಾರೋಗ್ಯದ ಮೇಲೆ ಅಪಾರ ಪ್ರಭಾವವನ್ನು ಬೀರುತ್ತದೆ. ತಿಳಿವಳಿಕೆ, ನಿಗಾ ಮತ್ತು ಕ್ಲಪ್ತ ಕಾಲದಲ್ಲಿ ವೈದ್ಯಕೀಯ ಆರೈಕೆಯನ್ನು ಪಡೆದುಕೊಳ್ಳುವುದರಿಂದ ಗಂಭೀರ ತೊಂದರೆಗಳು ಉಂಟಾಗುವುದನ್ನು ತಡೆಯಬಹುದು. ನೀವು ನಿಮ್ಮ ಕುತ್ತಿಗೆ, ಧ್ವನಿ ಅಥವಾ ಒಟ್ಟಾರೆ ಆರೋಗ್ಯದಲ್ಲಿ ಬದಲಾವಣೆಗಳನ್ನು ಅನುಭವಿಸುತ್ತಿದ್ದರೆ ತಡ ಮಾಡದೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಥೈರಾಯ್ಡ್ ಆರೋಗ್ಯ: ನಿಮ್ಮ ಗಮನದಲ್ಲಿರಲಿ
ಥೈರಾಯ್ಡ್ ಗ್ರಂಥಿ ಕೇವಲ 25 ಗ್ರಾಂನಷ್ಟು ತೂಗುತ್ತದೆ; ಆದರೆ ದೇಹದ ಚಯಾಪಚಯ ಕ್ರಿಯೆಯನ್ನಿಡೀ ನಿಯಂತ್ರಿಸುತ್ತದೆ.
ಮಹಿಳೆಯರು ಥೈರಾಯ್ಡ್ ಗ್ರಂಥಿಯ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳು ಪುರುಷರಿಗಿಂತ 8 ಪಟ್ಟು ಹೆಚ್ಚು.
ಸರಳ ರಕ್ತಪರೀಕ್ಷೆ (ಟಿಎಸ್‌ಎಚ್)ಯಿಂದ ಥೈರಾಯ್ಡ್ ಕಾರ್ಯ ನಿರ್ವಹಣೆಯಲ್ಲಿ ತೊಂದರೆಯನ್ನು ಪತ್ತೆಹಚ್ಚಲು ಸಾಧ್ಯ.
ಥೈರಾಯ್ಡ್ ಗ್ರಂಥಿಯಲ್ಲಿ ಉಂಟಾಗುವ ಗಂಟುಗಳು ಬಹುತೇಕವಾಗಿ ನಿರಪಾಯಕಾರಿಯಾಗಿರುತ್ತವೆ; ಆದರೆ ಸರಿಸುಮಾರು ಶೇ. 5ರಷ್ಟು ಗಡ್ಡೆಗಳು ಕ್ಯಾನ್ಸರ್ ಆಗಿರಬಹುದು.
ಅಯೋಡಿನ್ ಕೊರತೆಯಿಂದ ಉಂಟಾಗುವ ಗೊಯಟರ್ ರೋಗವನ್ನು ತಡೆಯಲು ಅಯೋಡಿನ್‌ಯುಕ್ತ ಉಪ್ಪನ್ನು ಸೇವಿಸುವುದು ಸುಲಭ ಮಾರ್ಗ.
ಥೈರಾಯ್ಡ್ ಗ್ರಂಥಿಯ ಸಮಸ್ಯೆಗಳನ್ನು ಬೇಗನೆ ಪತ್ತೆಹಚ್ಚಿ ಚಿಕಿತ್ಸೆ ಒದಗಿಸುವುದರಿಂದ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ.