ವಾಷಿಂಗ್ಟನ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೆನೆಜುವೆಲಾ ಕುರಿತಂತೆ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ TRUTHನಲ್ಲಿ ಮಾಡಿದ ಆಘಾತಕಾರಿ ಪೋಸ್ಟ್ನಲ್ಲಿ, ಅವರು ತಮ್ಮನ್ನು “ವೆನೆಜುವೆಲಾದ ಹಂಗಾಮಿ ಅಧ್ಯಕ್ಷ” ಎಂದು ಬಣ್ಣಿಸಿಕೊಂಡಿದ್ದಾರೆ.
ಈ ಪೋಸ್ಟ್ನಲ್ಲಿ ಜನವರಿ 2026ರಿಂದ ವೆನೆಜುವೆಲಾದ ಪ್ರಸ್ತುತ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎಂದು ಪಟ್ಟಿ ಮಾಡಿರುವ ಸಂಪಾದಿತ ವಿಕಿಪೀಡಿಯಾ ಪುಟದ ಮಾದರಿ ಚಿತ್ರವನ್ನೂ ಅವರು ಹಂಚಿಕೊಂಡಿದ್ದು, ಇದು ಆನ್ಲೈನ್ನಲ್ಲಿ ವ್ಯಾಪಕ ಚರ್ಚೆ, ಟೀಕೆ ಹಾಗೂ ಅಚ್ಚರಿಗೆ ಕಾರಣವಾಗಿದೆ.
ವೆನೆಜುವೆಲಾ ಸರ್ಕಾರ ಉರುಳಿಸಿದ ಅಮೆರಿಕ
ಜನವರಿ ಆರಂಭದಲ್ಲಿ ವೆನೆಜುವೆಲಾದ ಸರ್ಕಾರವನ್ನು ಉರುಳಿಸುವ ಉದ್ದೇಶದಿಂದ ಅಮೆರಿಕ ಬೃಹತ್ ಮಿಲಿಟರಿ ಕಾರ್ಯಾಚರಣೆ ಆರಂಭಿಸಿತ್ತು. ಈ ಕಾರ್ಯಾಚರಣೆಯಲ್ಲಿ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.
ನಂತರ ಮಾತನಾಡಿದ ಟ್ರಂಪ್, “ಸುರಕ್ಷಿತ ಮತ್ತು ನ್ಯಾಯಯುತ ಅಧಿಕಾರ ಪರಿವರ್ತನೆ ಖಾತ್ರಿಯಾಗುವವರೆಗೆ ವೆನೆಜುವೆಲಾದ ಆಡಳಿತವನ್ನು ಅಮೆರಿಕ ಮುಂದುವರಿಸುತ್ತದೆ” ಎಂದು ಹೇಳಿದ್ದರು.
ಮಡುರೋ ಅಧಿಕಾರಕ್ಕೆ ತೆರೆ
ಇದಾದ ಬಳಿಕ ವೆನೆಜುವೆಲಾದ ಸುಪ್ರೀಂ ಕೋರ್ಟ್, ಮಡುರೊ ಅವರ ಸಹವರ್ತಿ ಹಾಗೂ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರನ್ನು ಮಧ್ಯಂತರ ಅಧ್ಯಕ್ಷರಾಗಿ ನೇಮಿಸಿತು. ಈ ನಿರ್ಧಾರಕ್ಕೆ ವೆನೆಜುವೆಲಾ ಸೇನೆಯೂ ಅನುಮೋದನೆ ನೀಡಿದ್ದು, ಮಡುರೊ ಆಡಳಿತಕ್ಕೆ ಅಧಿಕೃತ ತೆರೆ ಬಿದ್ದಂತಾಗಿದೆ.
ತೈಲದ ಮೇಲೆ ಟ್ರಂಪ್ ದೃಷ್ಟಿ
ತೈಲ ಸಂಪತ್ತಿನಿಂದ ಶ್ರೀಮಂತವಾಗಿರುವ ವೆನೆಜುವೆಲಾ ಮೇಲೆ ದಾಳಿ ಮಾಡುವ ಮೂಲಕ ಟ್ರಂಪ್ ನೇರ ಯುದ್ಧ ಘೋಷಣೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಮಡುರೊ ಅವರ ಆಪ್ತರು ಅಮೆರಿಕದ ಷರತ್ತುಗಳನ್ನು ಪಾಲಿಸದಿದ್ದರೆ ಮತ್ತಷ್ಟು ಮಿಲಿಟರಿ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಈ ಷರತ್ತುಗಳಲ್ಲಿ ಪ್ರಮುಖವಾದುದು ವೆನೆಜುವೆಲಾದ ತೈಲದ ಮೇಲಿನ ನಿಯಂತ್ರಣ. ಬುಧವಾರ ಅಮೆರಿಕದ ಪಡೆಗಳು ವೆನೆಜುವೆಲಾಗೆ ಸಂಬಂಧಿಸಿದ ಹಲವಾರು ತೈಲ ಟ್ಯಾಂಕರ್ಗಳನ್ನು ವಶಪಡಿಸಿಕೊಂಡಿವೆ. ಅಮೆರಿಕವು 50 ಮಿಲಿಯನ್ ಬ್ಯಾರೆಲ್ ವೆನೆಜುವೆಲಾದ ಕಚ್ಚಾ ತೈಲವನ್ನು ಸಂಸ್ಕರಿಸಿ ಮಾರಾಟ ಮಾಡಲು ಯೋಜನೆ ರೂಪಿಸಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಅಮೆರಿಕದ ಮೂರು ಹಂತದ ಯೋಜನೆ
ವೆನೆಜುವೆಲಾ ಸಂಬಂಧ ಅಮೆರಿಕ ಮೂರು ಹಂತದ ಯೋಜನೆಯನ್ನು ಜಾರಿಗೆ ತಂದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ.
- ಮಡುರೊ ಬಂಧನದ ಬಳಿಕ ದೇಶವನ್ನು ಸ್ಥಿರಗೊಳಿಸುವುದು
- ಚೇತರಿಕೆಯ ಹಂತದಲ್ಲಿ ಅಮೆರಿಕದ ತೈಲ ಕಂಪನಿಗಳಿಗೆ ಪ್ರವೇಶ ನೀಡುವುದು
- ಅಧಿಕಾರ ಪರಿವರ್ತನೆಯನ್ನು ಮೇಲ್ವಿಚಾರಣೆ ಮಾಡುವುದು
“ಮಧ್ಯಂತರ ಸರ್ಕಾರದ ಮೇಲೆ ಸಂಪೂರ್ಣ ನಿಯಂತ್ರಣ ಮತ್ತು ಒತ್ತಡ ಕಾಯ್ದುಕೊಳ್ಳುವಂತಹ ಪ್ರಕ್ರಿಯೆ ನಮ್ಮ ಬಳಿ ಇದೆ” ಎಂದು ರೂಬಿಯೊ ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ಕ್ರಮಕ್ಕೆ ಜಾಗತಿಕ ಖಂಡನೆ
ವೆನೆಜುವೆಲಾ ಮೇಲಿನ ಅಮೆರಿಕದ ಸೇನಾ ದಾಳಿಯನ್ನು ಚೀನಾ, ರಷ್ಯಾ, ಕೊಲಂಬಿಯಾ ಮತ್ತು ಸ್ಪೇನ್ ಸೇರಿದಂತೆ ಹಲವು ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ. ಈ ಕ್ರಮವನ್ನು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಅವರು ಟೀಕಿಸಿದ್ದು, ಮಡುರೊ ಅವರನ್ನು “ಅಪಹರಿಸಲಾಗಿದೆ” ಎಂದು ಕಿಡಿಕಾರಿವೆ.
ತೈಲ ಸಮೃದ್ಧ ರಾಷ್ಟ್ರವನ್ನು ಗುರಿಯಾಗಿಸಿಕೊಂಡು ತಿಂಗಳುಗಳ ಕಾಲ ನಡೆದ ಒತ್ತಡ, ನಿರ್ಬಂಧಗಳು ಮತ್ತು ಮಿಲಿಟರಿ ಚಟುವಟಿಕೆಗಳ ನಂತರ ಈ ಕಾರ್ಯಾಚರಣೆ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.