ಟೈಫಾಯಿಡ್ ಅಥವಾ ವಿಷಮ ಶೀತಜ್ವರ ಸಾಮಾನ್ಯವಾಗಿ ನೈರ್ಮಲ್ಯ ಕೊರತೆಯಿರುವ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುವ ಗಂಭೀರ ಜಲಜನ್ಯ ರೋಗ. ಸಾಲ್ಮೋನೆಲ್ಲಾ ಟೈಫಿ ಬ್ಯಾಕ್ಟೀರಿಯಾ ಮಲದ ಮೂಲಕ ಹೊರಬಂದು ನೀರು, ಮಣ್ಣು, ಆಹಾರ ಮತ್ತು ಪಾನೀಯಗಳನ್ನು ಮಾಲಿನ್ಯಗೊಳಿಸಿ ಮನುಷ್ಯರ ದೇಹಕ್ಕೆ ಪ್ರವೇಶಿಸುತ್ತದೆ. ತಂಪು ವಾತಾವರಣ, ಕೊಳಚೆನೀರು, ಹಾಲು ಮತ್ತು ಮಂಜುಗಡ್ಡೆಗಳಲ್ಲಿ ಈ ಬ್ಯಾಕ್ಟೀರಿಯಾ ತಿಂಗಳುಗಳ ಕಾಲ ಜೀವಂತವಾಗಿರಬಲ್ಲದು.
ದೇಹಕ್ಕೆ ಸೇರಿದ ಬಳಿಕ ಇದು ಸಣ್ಣಕರುಳಿನಲ್ಲಿ ಬೆಳೆಯುತ್ತದೆ ಮತ್ತು 1–3 ವಾರಗಳ ಬಳಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಿಧಾನವಾಗಿ ಏರುವ ಜ್ವರ, ತಲೆನೋವು, ಹೊಟ್ಟೆನೋವು, ಸುಸ್ತು, ಹಸಿವು ಕಡಿಮೆಯಾಗುವುದು, ಬೇಧಿ ಅಥವಾ ಮಲಬದ್ಧತೆ ಸಾಮಾನ್ಯ ಲಕ್ಷಣಗಳಾಗಿವೆ. ವೈದ್ಯಕೀಯ ಪರೀಕ್ಷೆಯಲ್ಲಿ ಯಕೃತ್, ಗುಲ್ಮದ ವೃದ್ಧಿ, ರಕ್ತದಲ್ಲಿನ ಬಿಳಿರಕ್ತಕಣಗಳ ಏರಿಕೆ ಇಲ್ಲದಿರುವುದು ಮತ್ತು ವೈಡಾಲ್ ಪರೀಕ್ಷೆಯಲ್ಲಿ H & O ಪ್ರಮಾಣ ಹೆಚ್ಚಿರುವುದು ಕಂಡುಬರುತ್ತದೆ. ಚಿಕಿತ್ಸೆ ವಿಳಂಬವಾದಲ್ಲಿ ಕರುಳಿನಲ್ಲಿ ಹುಣ್ಣು ಅಥವಾ ರಂಧ್ರ ನಿರ್ಮಾಣವಾಗುವ ಅಪಾಯಕಾರಿ ಪರಿಸ್ಥಿತಿ ಉಂಟಾಗಬಹುದು.
ಚಿಕಿತ್ಸೆ:
ಟೈಫಾಯಿಡ್‌ಗೆ ಪರಿಣಾಮಕಾರಿ ಆಂಟಿಬಯೋಟಿಕ್ಸ್ ಲಭ್ಯವಿರುವುದರಿಂದ 1–2 ವಾರಗಳ ಚಿಕಿತ್ಸೆಯಿಂದ ಹೆಚ್ಚಿನವರು ಗುಣಮುಖರಾಗುತ್ತಾರೆ. ವಾಂತಿ ಅಥವಾ ತೀವ್ರ ಹೊಟ್ಟೆನೋವಿದ್ದರೆ ಚುಚ್ಚುಮದ್ದು ರೂಪದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸಂಪೂರ್ಣ ವಿಶ್ರಾಂತಿ, ಪಥ್ಯ ಆಹಾರ ಮತ್ತು ವೈದ್ಯರ ಸಲಹೆಯಂತೆ ಮಾತ್ರೆಗಳನ್ನು ಸೇವಿಸುವುದು ಅತ್ಯವಶ್ಯಕ.
ಏನು ಮಾಡಬೇಕು?
ವೈದ್ಯರ ಸೂಚನೆ ಪ್ರಕಾರ ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳುವುದು.
ಜ್ವರ ಮತ್ತು ನೋವು ಕಡಿಮೆಯಾಗುವವರೆಗೆ ವಿಶ್ರಾಂತಿ.
ಸುಲಭವಾಗಿ ಜೀರ್ಣವಾಗುವ ದ್ರವ ಮತ್ತು ಲಘು ಆಹಾರ ಸೇವನೆ; ಎಣ್ಣೆ–ಮಸಾಲೆ ದೂರವಿಡುವುದು.
ಆಹಾರ ತಿನ್ನುವ ಮೊದಲು ಮತ್ತು ಶೌಚದ ಬಳಿಕ ಕೈ ತೊಳೆಯುವುದು.
ರೋಗಿಯು ಇತರರ ಆಹಾರಕ್ಕೆ ಮುಟ್ಟದಂತೆ ನೈರ್ಮಲ್ಯ ಕಾಯುವುದು.
ತಡೆಗಟ್ಟುವಿಕೆ:
ಟೈಫಾಯಿಡ್ ಹೆಚ್ಚಿರುವ ಪ್ರದೇಶಕ್ಕೆ ಹೋಗುವ ಮೊದಲು ಲಸಿಕೆ ತೆಗೆದುಕೊಳ್ಳುವುದು ಉತ್ತಮ. ವೈಯಕ್ತಿಕ ಮಟ್ಟದಲ್ಲಿ ಕುದಿಸಿದ ನೀರು ಕುಡಿಯುವುದು, ಬೀದಿ ಆಹಾರ ದೂರವಿಡುವುದು, ಹಣ್ಣು-ತರಕಾರಿಗಳನ್ನು ಚೆನ್ನಾಗಿ ತೊಳೆಯುವುದು ಮುಖ್ಯ. ಸಾರ್ವಜನಿಕ ಮಟ್ಟದಲ್ಲಿ ನೀರಿನ ಸಂಸ್ಕರಣೆ, ತ್ಯಾಜ್ಯ ವಿಲೇವಾರಿ, ಹೋಟೆಲ್–ಹಾಸ್ಟೆಲ್‌ಗಳಲ್ಲಿ ನೈರ್ಮಲ್ಯ ನಿಯಂತ್ರಣ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಕ್ರಮಗಳು ಪರಿಣಾಮಕಾರಿ.
ನೈರ್ಮಲ್ಯ ಮತ್ತು ಸ್ವಚ್ಛತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಟೈಫಾಯಿಡ್ ಜ್ವರವನ್ನು ಸಂಪೂರ್ಣವಾಗಿ ತಡೆಯುವುದು ಸಾಧ್ಯ.
Views: 19