ಅನಗತ್ಯ ಗೊಂದಲ ಪಕ್ಷ ಕಾರ್ಯಕರ್ತರಿಗೆ ಒಳ್ಳೆಯದಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ, ಡಿ.22:

ಸ್ಥಳೀಯ ಗೊಂದಲಗಳನ್ನು ಸ್ಥಳೀಯ ಮಟ್ಟದಲ್ಲೇ ಇತ್ಯರ್ಥಪಡಿಸಬೇಕು ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಪಕ್ಷದೊಳಗಿನ ಅನಗತ್ಯ ಗೊಂದಲಗಳು ಕಾರ್ಯಕರ್ತರಿಗೆ ಒಳ್ಳೆಯದಲ್ಲ ಎಂದು ಸ್ಪಷ್ಟಪಡಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೇ ನಮ್ಮ ನಾಯಕರು ಆಗಿರಲಿ, ಖರ್ಗೆ ಸಾಹೇಬರು ಹೇಳಿದಂತೆ ನಡೆಯಬೇಕು. ನಮ್ಮ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ. ಒಂದು ವಿಷಯದ ಬಗ್ಗೆ ಮಾತ್ರ ಅನಗತ್ಯ ಚರ್ಚೆ ನಡೆಯುತ್ತಿದೆ. ಈ ಕುರಿತು ಯಾರೂ ಸಹ ಹೇಳಿಕೆ ನೀಡುವ ಅಗತ್ಯವಿಲ್ಲ. ಮುಂದಿನ ತೀರ್ಮಾನವನ್ನು ಹೈಕಮಾಂಡ್ ಕೈಗೊಳ್ಳಲಿದೆ ಎಂದು ಹೇಳಿದರು.

ಮಾಧ್ಯಮ ಪ್ರತಿಕ್ರಿಯೆ ವೇಳೆ ಶಾಸಕರು ಹೇಳಿಕೆ ನೀಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾರೂ ಸಹ ಪತ್ರಿಕಾಗೋಷ್ಠಿ ಕರೆದು ಏನೂ ಹೇಳಿಲ್ಲ. ಸ್ನೇಹಿತರಿದ್ದವರು ಡಿನ್ನರ್ ಪಾರ್ಟಿಗೆ ಸೇರುವುದು ಸಹಜ. ನಾನು ಬೆಳಗಾವಿಯಲ್ಲಿ ಡಿನ್ನರ್ ಕರೆದಿದ್ದೆ, ಅದರಲ್ಲಿ 50–60 ಶಾಸಕರು ಭಾಗವಹಿಸಿದ್ದರು ಎಂದು ಸ್ಪಷ್ಟನೆ ನೀಡಿದರು.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇಂದ್ರ ಸರ್ಕಾರ ಘೋಷಿಸಿದ ಯೋಜನೆಗಳಿಗೂ ಸ್ಪಂದಿಸುತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೂ ಕೇಂದ್ರ ಹಣ ನೀಡಿಲ್ಲ ಎಂದು ಆರೋಪಿಸಿದರು.
ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಸುಮ್ಮನೆ ಸಚಿವರಾಗಿ ಮಾಡಿದ್ದಾರೆ ಅಷ್ಟೇ. ಅವರಿಗೆ ಅಮಿತ್ ಶಾ ಅಥವಾ ಮೋದಿ ಮುಂದೆ ಮಾತನಾಡುವ ಧೈರ್ಯವಿಲ್ಲ. ಅವರು ಇಲ್ಲ ಅಂದರೆ ಮುಗೀತು, ಯಾಕೆಂದರೆ ಅವರೇ ಸರ್ವಾಧಿಕಾರಿಗಳು ಎಂದು ಟೀಕಿಸಿದರು.

ಇನ್ನೂ ಮುಂದುವರೆದು, ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವರು ಪ್ರಯೋಜನರಹಿತರು. ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ಬಗ್ಗೆ ತಾತ್ಸಾರ ಮನೋಭಾವವಿದೆ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಎಲ್ಲರೂ ರಬ್ಬರ್ ಸ್ಟ್ಯಾಂಪ್‌ಗಳು ಎಂದು ಕಿಡಿಕಾರಿದರು.

ಮಹಾರಾಷ್ಟ್ರದಿಂದ ಬೆಳಗಾವಿ ಜಿಲ್ಲಾಧಿಕಾರಿಗೆ ಬೆದರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮಹಾರಾಷ್ಟ್ರದಲ್ಲಿ ರಾಜಕೀಯ ಕಾರಣಕ್ಕಾಗಿ ಇಂತಹ ಕೃತ್ಯಗಳು ನಡೆಯುತ್ತವೆ. ಬೆಳಗಾವಿ ಜಿಲ್ಲೆ ಎಂದಿಗೂ ನಮ್ಮದೇ ಎಂದು ಖಡಕ್ ಆಗಿ ಹೇಳಿದರು.

ಮಂಗಳೂರು ವೈದ್ಯಾಧಿಕಾರಿಗಳ ರಾಜೀನಾಮೆ ವಿಚಾರಕ್ಕೆ ಉತ್ತರಿಸಿದ ಅವರು, ಯಾರೂ ರಾಜೀನಾಮೆ ನೀಡಿಲ್ಲ. ಒಬ್ಬರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಪತ್ರಿಕೆಯಲ್ಲಿ ಓದಿದ್ದೇನೆ. ಈ ಕುರಿತು ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *