ಚಿತ್ರದುರ್ಗ, ಜುಲೈ 25, 2025
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಮಹಿಳೆಯರಿಗೆ ಗೌರವ ಕೊಡೋದು ಬರೀ ಮಾತುಗಳಿಂದ ಸಾದ್ಯವಲ್ಲ. ಅವರು ಅನುಭವಿಸಿದ ನೋವು, ದೌರ್ಜನ್ಯವನ್ನು ಅರಿತು, ಅವರಿಗೆ ನ್ಯಾಯ ದೊರಕಿಸಿಕೊಡುವ ಮೂಲಕ ಸತ್ಯವಾದ ಗೌರವ ನೀಡಬೇಕು ಎಂದು ಸಮಾಜವಾದಿ ಪಕ್ಷದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಹೇಳಿದರು.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಯು.ಪಿ.ಯ ಮಾಜಿ ಸಂಸದೆ ದಿ|| ಶ್ರೀಮತಿ ಫೋಲನ್ ದೇವಿಯ ಹುತಾತ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ “ಒಂದು ನೆನಪು” ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಲಕ್ಷ್ಮೀಕಾಂತ ಮಾತನಾಡುತ್ತಾ, “ಮಹಿಳೆಗೆ ಗೌರವ ಸಿಗುತ್ತಿಲ್ಲ ಎಂಬುದು ನಮ್ಮ ಸಮಾಜದ ಕಠಿಣ ಸತ್ಯ. ಅದರ ಬದಲಾವಣೆಗಾಗಿ ಇತಿಹಾಸವನ್ನು ಓದುತ್ತಾ ನಾವು ಕಲಿಯಬೇಕು. ಮಹಿಳೆಯರ ಮೇಲೆ ಅನ್ಯಾಯವಾಗಿದ್ರೆ, ಪ್ರಜ್ಞಾವಂತರು ಮುಂದೆ ಬಂದು ನ್ಯಾಯ ನೀಡಬೇಕು,” ಎಂದು ಹೇಳಿದರು.
ಅವರು ಪೂಲನ್ ದೇವಿಯ ಬಗ್ಗೆ ಮಾತನಾಡುತ್ತಾ, “ಅವರು ತಮ್ಮ ಬದುಕಿನಲ್ಲಿ ಅನೇಕ ನೋವುಗಳನ್ನು ಅನುಭವಿಸಿದರು. ಅವರನ್ನು ಶೋಷಿಸಿದವರ ವಿರುದ್ಧ ನಿಂತು, ಅಷ್ಟೆ ಅಲ್ಲದೆ ಡಕಾಯಿತಿ ಮೂಲಕ ಐಶ್ವರ್ಯ ಗಳಿಸಿ ಬಡವರಿಗೆ ಹಂಚಿದವರು. ತದ ನಂತರ ಇಂದಿರಾಗಾಂಧಿಯವರ ಮುಂದೆ ಶರಣಾಗಿ ಶಿಕ್ಷೆ ಅನುಭವಿಸಿದ್ರು. ಬಳಿಕ ಮುಲಾಯಂ ಸಿಂಗ್ ಯಾದವ್ ಅವರ ಮೆಚ್ಚುಗೆಯೊಂದಿಗೆ ಲೋಕಸಭಾ ಸದಸ್ಯೆಯಾಗಿ ಆಯ್ಕೆಯಾದರು,” ಎಂದು ಹೇಳಿದರು.
ಲೇಖಕ ಹೆಚ್.ಅನಂದ ಕುಮಾರ್ ಮಾತನಾಡುತ್ತಾ, “1963 ರಲ್ಲಿ ಜನಿಸಿದ ಪೂಲನ್ ದೇವಿಗೆ 11ನೇ ವಯಸ್ಸಿನಲ್ಲಿ ವಿವಾಹ. ನಂತರದ ಬದುಕಿನಲ್ಲಿ ಅವಮಾನ, ದೌರ್ಜನ್ಯ, ಅತ್ಯಾಚಾರ ಎದುರಿಸಿದ ಅವರು, ತನ್ನ ಮೇಲೆ ಜೋರಾದ ದಬ್ಬಾಳಿಕೆಗೆ ಸೇಡು ತೀರಿಸಲು ಡಕಾಯಿತಿ ಗುಂಪಿಗೆ ಸೇರಿದರು. ತಾನೇ ನಾಯಕಿಯಾಗಿ ತಂಡವನ್ನೇ ರೂಪಿಸಿ, ತಾನು ಅನುಭವಿಸಿದ ದೌರ್ಜನ್ಯಕ್ಕೇ ಕಾರಣರಾದವರನ್ನು ಕೊಂದರು,” ಎಂದು ವಿವರಿಸಿದರು.
“ಇಂದಿರಾಗಾಂಧಿಯವರ ಪ್ರೇರಣೆಯಿಂದ ಕಾನೂನಿಗೆ ಶರಣಾದ ಅವರು, ಶಿಕ್ಷೆ ಅನುಭವಿಸಿದ ನಂತರ ಸಮಾಜವಾದಿ ಪಕ್ಷದ ಆಶ್ರಯದಿಂದ ಸಂಸದೆ ಆಗುವವರೆಗೆ ಅವರ ಸಾಹಸಮಯ ಯಾನ ಪ್ರೇರಣಾದಾಯಕವಾಗಿದೆ. ಪೌಲನ್ ದೇವಿ ಇತಿಹಾಸದ ಪುಟಗಳಲ್ಲಿ ದೀರೋದಾತ್ತ ಮಹಿಳೆಯಾಗಿ ಹೆಸರು ಪಡೆದಿದ್ದಾರೆ,” ಎಂದು ಅನಂದಕುಮಾರ್ ಹೇಳಿದರು.
ಕರ್ಣಾಟಕ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಗಿರೀಶ್ ನಾಯ್ಕ ಆರ್. ಮಾತನಾಡಿ, “ಪೌಲನ್ ದೇವಿಯ ಬದುಕು ಮೈ ರೋಮಾಂಚನ ಉಂಟುಮಾಡುವಂತಹದ್ದು. ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಾನುಯಾಯಿಯಾಗಿ ಕೆಟ್ಟ ವ್ಯವಸ್ಥೆಗಳ ವಿರುದ್ಧ ಹೋರಾಡಿದರು,” ಎಂದು ಶ್ಲಾಘಿಸಿದರು.
ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಸಮಾಜವಾದಿ ಪಾರ್ಟಿಯ ಎಸ್.ಟಿ ಘಟಕದ ಅಧ್ಯಕ್ಷ ಡಾ.ಟಿ. ಶಿವಣ್ಣ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮೆಹಬೂಬ್‍ಬಾಷಾ ಎಸ್., ನ್ಯಾಯವಾದಿ ಗುರುಮೂರ್ತಿ ಮಹಲಿಂಗಪ್ಪ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.