ಆರೋಗ್ಯ : ಮನುಷ್ಯನ ದೇಹದಲ್ಲಿ ಮೂತ್ರಜನಕಾಂಗ ವ್ಯವಸ್ಥೆಯು ಮುಖ್ಯವಾಗಿ ಮೂತ್ರಪಿಂಡಗಳು, ಮೂತ್ರನಾಳಗಳು, ಮೂತ್ರಕೋಶ, ಮತ್ತು ಮೂತ್ರನಳ್ಳಿ ಎಂಬ ನಾಲ್ಕು ಮುಖ್ಯ ಅಂಗಗಳಿಂದ ನಿರ್ಮಿತವಾಗಿದೆ. ಮೂತ್ರ ಜನಕಾಂಗ ವ್ಯವಸ್ಥೆಯು ದೇಹದಿಂದ ತ್ಯಾಜ್ಯವನ್ನು ಮೂತ್ರದ ಮೂಲಕ ತೆಗೆದುಹಾಕುತ್ತದೆ.
ಮೂತ್ರಪಿಂಡಗಳು ಹೊಟ್ಟೆಯ ಮೇಲ್ಭಾಗದ ಹಿಂಭಾಗದಲ್ಲಿವೆ. ಅವು ರಕ್ತದಿಂದ ತ್ಯಾಜ್ಯ ಮತ್ತು ದ್ರವವನ್ನು ಶೋಧಿಸಿ ಮೂತ್ರವನ್ನು ಉತ್ಪಾದಿಸುತ್ತವೆ. ಮೂತ್ರವು ಮೂತ್ರಪಿಂಡಗಳಿಂದ ಕಿರಿದಾದ ಮೂತ್ರನಾಳಗಳ ಮೂಲಕ ಮೂತ್ರಕೋಶಕ್ಕೆ ಚಲಿಸುತ್ತದೆ. ಮೂತ್ರ ವಿಸರ್ಜನೆಯ ಸಂವೇದನೆಯನ್ನು ನಾವು ಅನುಭವಿಸುವವರೆಗೆ ಮೂತ್ರಕೋಶವು ಮೂತ್ರವನ್ನು ಸಂಗ್ರಹಿಸುತ್ತದೆ. ಮೂತ್ರವು ಮೂತ್ರನಳ್ಳಿಯ ಮೂಲಕ ದೇಹದಿಂದ ಹೊರಹೋಗುತ್ತದೆ.
ಮೂತ್ರನಾಳದ ಸೋಂಕು ಎಂದರೇನು?
ಮೂತ್ರಜನಕಾಂಗ ವ್ಯವಸ್ಥೆಯ ಯಾವುದೇ ಭಾಗದಲ್ಲಿ ವೈರಸ್ ಅಥವಾ ಬ್ಯಾಕ್ಟೀರಿಯಾಗಳ ಪ್ರವೇಶದಿಂದಾಗಿ ಉಂಟಾಗುವ ಅಸ್ವಸ್ಥತೆಯನ್ನೇ ಮೂತ್ರನಾಳದ ಸೋಂಕು (ಯುಟಿಐ) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಈ ಸೋಂಕು ಕೆಳ ಮೂತ್ರ ಪ್ರದೇಶವನ್ನು ಅಂದರೆ, ಮೂತ್ರಕೋಶ ಮತ್ತು ಮೂತ್ರನಳ್ಳಿಗೆ ಸೀಮಿತವಾಗಿರುತ್ತದೆ.
ಮೂತ್ರನಾಳದ ಸೋಂಕುಗಳು ಎಷ್ಟು ಸಾಮಾನ್ಯವಾಗಿದೆ?
ವಾತಾವರಣ ಮತ್ತು ಜೀವನಶೈಲಿ ಬದಲಾಗುತ್ತಿರುವ ಈ ದಿನಗಳಲ್ಲಿ ಇದೊಂದು ಸಾಮಾನ್ಯ ಸೋಂಕಾಗಿದೆ. ವಿಶೇಷವಾಗಿ ಮಹಿಳೆಯರಲ್ಲಿ, ಸುಮಾರು ಶೇ. 50 ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಒಂದು ಬಾರಿ ಈ ಸೋಂಕನ್ನು ಅನುಭವಿಸುತ್ತಾರೆ. ಪುರುಷರಲ್ಲಿ ಮೂತ್ರನಾಳದ ಸೋಂಕುಗಳು ಕಡಿಮೆಯಾಗಿ ಕಂಡುಬರುತ್ತವೆ – ಸುಮಾರು ಶೇ. 12 ಪುರುಷರು ತಮ್ಮ ಜೀವನದಲ್ಲಿ ಕನಿಷ್ಠ ಒಂದು ಬಾರಿ ಇದನ್ನು ಅನುಭವಿಸುತ್ತಾರೆ. ಮಕ್ಕಳಲ್ಲಿಯೂ ಮೂತ್ರನಾಳದ ಸೋಂಕುಗಳು ಸಂಭವಿಸಬಹುದು, ಆದರೆ ಇವು ಅಪರೂಪವಾಗಿದ್ದು, ಕೇವಲ ಶೇ. 1-2 ಮಕ್ಕಳಿಗೆ ಈ ಸೋಂಕು ಉಂಟಾಗುತ್ತದೆ.
ಮೂತ್ರನಾಳದ ಸೋಂಕಿನ ಲಕ್ಷಣಗಳೇನು?
- ಮೂತ್ರ ಮಾಡುವಾಗ ಉರಿಯೂತ ಅಥವಾ ನೋವು
- ತುರ್ತಾಗಿ ಮೂತ್ರಕ್ಕೆ ಹೋಗಬೇಕೆನ್ನುವ ಅನಿಸುವಿಕೆ
- ದುರ್ವಾಸನೆಯ ಮೂತ್ರ
- ಮೂತ್ರದಲ್ಲಿ ರಕ್ತ ಕಾಣಿಸಬಹುದು
- ಹೊಟ್ಟೆಯ ಕೆಳಭಾಗದಲ್ಲಿ ನೋವು
- ಅನೇಕ ಬಾರಿ ಹಾಗೂ ತುಂಬಾ ಕಡಿಮೆ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ
- ಅನಾರೋಗ್ಯದ ಅನುಭವ, ಜ್ವರ ಅಥವಾ ಚಳಿಜ್ವರ ಬರುವುದು
- ಸೊಂಟದಲ್ಲಿ ನೋವು, ಬೆನ್ನು ನೋವು, ಮತ್ತು ನಿಶ್ಶಕ್ತಿಯ ಅನುಭವವಾಗುವುದು
- ಮಕ್ಕಳಲ್ಲಿ, ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ, ಹಸಿವು ಕಡಿಮೆಯಾಗುವುದು ಮತ್ತು ಆಲಸ್ಯ
ಮೂತ್ರನಾಳದ ಸೋಂಕನ್ನು ಪತ್ತೆ ಹಚ್ಚುವುದು ಹೇಗೆ?
ಮೂತ್ರನಾಳದಲ್ಲಿ ಸೋಂಕು ಉಂಟಾಗಿದೆ ಎಂದು ನಿಖರವಾಗಿ ಗುರುತಿಸಲು ವೈದ್ಯಕೀಯ ಮಾಹಿತಿ, ದೈಹಿಕ ಪರೀಕ್ಷೆ, ಮೂತ್ರ, ರಕ್ತ ಮತ್ತು ಅಲ್ಟ್ರಾಸೋನೊಗ್ರಾಫಿ ಪರೀಕ್ಷೆಗಳನ್ನು ಮಾಡಲಾಗುತ್ತದೆ.
ಮೂತ್ರನಾಳದ ಸೋಂಕಿಗೆ ಕಾರಣಗಳೇನು?
- ಗುಪ್ತಾಂಗಗಳ ಸ್ವಚ್ಛತೆ ಸರಿಯಾಗಿ ಕಾಪಾಡದಿರುವುದು
- ಸಾಕಷ್ಟು ನೀರು ಕುಡಿಯದಿರುವುದು – ಮೂತ್ರದ ಪ್ರಮಾಣ ಕಡಿಮೆಯಾಗುತ್ತದೆ
- ಹೆಚ್ಚು ಸಮಯ ಮೂತ್ರವನ್ನು ತಡೆದಿಡುವುದು
- ರೋಗನಿರೋಧಕ ಶಕ್ತಿಯ ಕೊರತೆ ಹಾಗೂ ಹಾರ್ಮೋನ್ ಬದಲಾವಣೆಗಳು (ಉದಾ: ಗರ್ಭಿಣಿಯರು)
- ಶುದ್ಧ ನೀರಿಲ್ಲದ ಅಥವಾ ಶುಚಿಯಾಗಿರದ ಶೌಚಾಲಯ ಬಳಕೆ (ಸಾರ್ವಜನಿಕ ಶೌಚಾಲಯದ ಹೆಚ್ಚು ಬಳಕೆ ಹಾಗೂ ವೆಸ್ಟರ್ನ್ ಕಮೋಡ್ ಪದ್ಧತಿ)
- ಬಿಗಿಯಾದ ಒಳ ಉಡುಪು ಅಥವಾ ಬಿಗಿಯಾದ ಸಿಂಥೆಟಿಕ್ ಬಟ್ಟೆಗಳನ್ನು ಧರಿಸುವುದು.
- ನಿಯಂತ್ರಣವಿಲ್ಲದ ಮಧುಮೇಹ
- ವಯಸ್ಸಾದ ಕೆಲವು ಪುರುಷರಲ್ಲಿ ದೊಡ್ಡದಾದ ಪ್ರೋಸ್ಟೇಟ್ ಗ್ರಂಥಿ
- ಮೂತ್ರಕೋಶಕ್ಕೆ ಮೂತ್ರದ ಕೊಳವೆಯನ್ನು (ಕ್ಯಾಥೆಟರ್) ಹಾಕುವುದು
- ಮೂತ್ರನಾಳಗಳಲ್ಲಿ ಅಡಚಣೆ (ಉದಾ: ಮೂತ್ರದ ಕಲ್ಲುಗಳು ಮತ್ತು ಗೆಡ್ಡೆಗಳು)
- ಲೈಂಗಿಕ ಚಟುವಟಿಕೆ – ಕೆಲವು ಸಂದರ್ಭಗಳಲ್ಲಿ, ಸೋಂಕು ಮೂತ್ರನಾಳಕ್ಕೆ ಹರಡಬಹುದು.
ತಡೆಗಟ್ಟುವ ಮಾರ್ಗಗಳು
ಮೂತ್ರನಾಳದ ಸೋಂಕುಗಳ ವಿರುದ್ಧ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯ. ಈ ಸೋಂಕು ವಿಸ್ತರಿಸುವ ಸಾಧ್ಯತೆಗಳನ್ನು ತಪ್ಪಿಸಲು ಈ ಕ್ರಮಗಳನ್ನು ಅನುಸರಿಸಿ.
- ದಿನಕ್ಕೆ ಕನಿಷ್ಠ 2.5 ಲೀಟರ್ (8-10 ಗ್ಲಾಸ್) ನೀರು ಕುಡಿಯಿರಿ. ಆಗಾಗ ಮೂತ್ರ ವಿಸರ್ಜನೆ ಮಾಡುವುದರಿಂದ ಬ್ಯಾಕ್ಟೀರಿಯಾವನ್ನು ಹೊರಹಾಕಲು ಸಹಾಯ ಮಾಡುತ್ತದೆ.
- ಮೂತ್ರನಾಳದ ಸೋಂಕು ತಡೆಯಲು ಸ್ವಚ್ಛತೆ ಮುಖ್ಯ. ಮಲಮೂತ್ರ ವಿಸರ್ಜನೆಯ ಅನಂತರ ಮೊದಲು ಜನನಾಂಗವನ್ನು ಸ್ವಚ್ಛಗೊಳಿಸಿ ಬಳಿಕ ಗುದದ್ವಾರವನ್ನು ಸ್ವಚ್ಛಗೊಳಿಸಬೇಕು; ಯಾವಾಗಲೂ ಮುಂಭಾಗದಿಂದ ಹಿಂಭಾಗಕ್ಕೆ ಮಾತ್ರ ಒರೆಸಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಇದರಿಂದ ಗುದದ ಸೋಂಕು ಜನನಾಂಗಕ್ಕೆ ಬರುವುದನ್ನು ತಡೆಯಬಹುದು.
- ಮಹಿಳೆಯರು ಮುಟ್ಟಿಗೆ ಮುಂಚೆ, ಮುಟ್ಟಿನ ವೇಳೆ ಮತ್ತು ಅನಂತರ ಸ್ವಚ್ಛತೆಗೆ ಬಹಳ ಒತ್ತು ನೀಡಬೇಕು ಹಾಗೂ ಈ ಸಮಯದಲ್ಲಿ ಬಳಸುವ ಪ್ಯಾಡುಗಳನ್ನು ನಿಯಮಿತವಾಗಿ ಬದಲಾಯಿಸಬೇಕು.
- ಸಾರ್ವಜನಿಕ ಶೌಚಾಲಯಗಳನ್ನು ಬಳಸುವಾಗ ಚೆನ್ನಾಗಿ ನೀರು ಹಾಕಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಬಳಸಬೇಕು ಹಾಗೂ ಶೌಚಾಲಯ ಬಳಸಿದ ನಂತರ ಕೈ ತೊಳೆಯುವ ಅಭ್ಯಾಸವನ್ನು ರೂಢಿಗೊಳಿಸಿ.
- ಹತ್ತಿಯ ಒಳ ಉಡುಪುಗಳನ್ನು ಧರಿಸುವುದು ಉತ್ತಮ – ಸಿಂಥೆಟಿಕ್ ಬಟ್ಟೆಗಳನ್ನು ತಪ್ಪಿಸಿ.
- ಒಳ ಉಡುಪುಗಳನ್ನು ಚೆನ್ನಾಗಿ ಒಗೆದು ಬಿಸಿಲಿಗೆ ಒಣಗಿಸಿ ಉಪಯೋಗಿಸಬೇಕು.
- ಶೌಚದ ತುರ್ತು ಸ್ಥಿತಿಯಲ್ಲಿ, ತಡಮಾಡದೆ ಮೂತ್ರವಿಸರ್ಜನೆ ಮಾಡುವುದು.
- ಸ್ನಾನ ಮಾಡುವಾಗ, ಮೂತ್ರ ವಿಸರ್ಜನೆಯ ಅನಂತರ, ಮತ್ತು ಲೈಂಗಿಕ ಕ್ರಿಯೆಯ ಅನಂತರ ಗುಪ್ತಾಂಗಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ.
- ಮಕ್ಕಳಿಗೆ ಶೌಚದ ಸ್ವಚ್ಛತೆ ಕಲಿಸುವುದು ಅತ್ಯವಶ್ಯಕ.
- ದಿನವಿಡೀ ಮೂತ್ರವನ್ನು ಹಿಡಿದಿಟ್ಟುಕೊಳ್ಳದೆ ನಿಯಮಿತವಾಗಿ ಮೂತ್ರ ವಿಸರ್ಜನೆ ಮಾಡುವುದು.
- ಹುಳಿಯುಕ್ತ, ಮಸಾಲೆಯುಕ್ತ ಪದಾರ್ಥ, ಹೆಚ್ಚು ಸಕ್ಕರೆ ಇರುವ ಆಹಾರ, ಕಾರ್ಬೊನೇಟೆಡ್ ಪಾನೀಯಗಳು, ಮದ್ಯಪಾನ, ಕಾಫಿ, ಚಾಕೊಲೇಟುಗಳ ಅತಿಯಾದ ಸೇವನೆಯನ್ನು ಕಡಿಮೆ ಮಾಡಿ.
- ಮೂತ್ರ ಮಾಡುವ ಜಾಗದಲ್ಲಿ ಸುಗಂಧ ದ್ರವ್ಯಗಳನ್ನು ಬಳಸುವುದನ್ನು ತಪ್ಪಿಸಿ – ಅವುಗಳು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುತ್ತವೆ.
- ಸಂಭೋಗದ ಅನಂತರ ನಿಮ್ಮ ಮೂತ್ರಕೋಶವನ್ನು ಖಾಲಿ ಮಾಡಿ. ಇದು ನಿಮ್ಮ ದೇಹದಿಂದ ಬ್ಯಾಕ್ಟೀರಿಯಾವನ್ನು ಹೊರಹಾಕಲು ಸಹಾಯ ಮಾಡುತ್ತದೆ.
- ಜನನ ನಿಯಂತ್ರಣ ವಿಧಾನಗಳನ್ನು ಬದಲಾಯಿಸಿ.ಲೂಬ್ರಿಕೇಟೆಡ್ ಕಾಂಡೋಮ್‌ಗಳು ಸೋಂಕಿನ ಬೆಳವಣಿಗೆಗೆ ಕಾರಣವಾಗಬಹುದು. ಆದ್ದರಿಂದ ಒಮ್ಮೆ ಉಪಯೋಗಿಸಿದ ಕಾಂಡೋಮ್‌ಗಳನ್ನು ಮತ್ತೂಮ್ಮೆ ಬಳಸಬೇಡಿ.
Views: 18