ಹರಾರೆ: ಆತಿಥೇಯ ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ನಾಯಕ ಶ್ರೇಯಸ್ ಅಯ್ಯರ್ ಅವರ ಯಶಸ್ವಿ ನಾಯಕತ್ವಕ್ಕೆ ಇದು ಶುಭಾರಂಭ ಒದಗಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಶಕ್ತವಾಯಿತು. 126 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ, ಕೇವಲ 3 ವಿಕೆಟ್ ಕಳೆದುಕೊಂಡು 14ನೇ ಓವರ್ನಲ್ಲಿಯೇ ಗೆಲುವಿನ ದಡ ಸೇರಿತು.
ವೈಭವ್ ಸೂರ್ಯವಂಶಿ ಸ್ಫೋಟಕ ಆಟ ಗುರಿ ಬೆನ್ನಟ್ಟಿದ ಭಾರತದ ಪರ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಇನಿಂಗ್ಸ್ ಆರಂಭಿಸಿದರು. ಅಭಿಷೇಕ್ ಶರ್ಮಾ 8 ಎಸೆತಗಳನ್ನು ಎದುರಿಸಿ ಕೇವಲ 1 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ಮತ್ತೊಂದೆಡೆ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಯುವ ಆಟಗಾರ ವೈಭವ್ ಸೂರ್ಯವಂಶಿ, ಕೇವಲ 18 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು. ಒಟ್ಟು 19 ಎಸೆತಗಳನ್ನು ಎದುರಿಸಿದ ಅವರು 4 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ 263ರ ಸ್ಟ್ರೈಕ್ ರೇಟ್ನಲ್ಲಿ 50 ರನ್ ಚಚ್ಚಿ ಔಟಾದರು. ಜೊತೆಗೆ ಇಶಾನ್ ಕಿಶನ್ ಕೂಡ 35 ರನ್ಗಳ ಮಹತ್ವದ ಕಾಣಿಕೆ ನೀಡಿದರು.
ಜಿಂಬಾಬ್ವೆ ಬ್ಯಾಟಿಂಗ್ ವೈಫಲ್ಯ ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಆರಂಭದಲ್ಲೇ ಆಘಾತ ಅನುಭವಿಸಿತು. ಸುಮಾರು ಎರಡೂವರೆ ವರ್ಷಗಳ ನಂತರ ಕಣಕ್ಕಿಳಿದ ವೇಗಿ ಮಯಾಂಕ್ ಯಾದವ್, ತಾವು ಎಸೆದ ಮೊದಲ ಎಸೆತದಲ್ಲೇ (149 ಕಿ.ಮೀ ವೇಗ) ಬ್ರಿಯಾನ್ ಬೆನೆಟ್ ಅವರ ವಿಕೆಟ್ ಕಬಳಿಸಿ ಮಿಂಚಿದರು. ಇದಾದ ಬಳಿಕವೂ ಜಿಂಬಾಬ್ವೆ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆದರೆ 7ನೇ ವಿಕೆಟ್ಗೆ ಜೊತೆಯಾದ ವೆಸ್ಲಿ ಮಾಧೇವೆರೆ (39 ರನ್) ಮತ್ತು ಮರುಮಾನಿ (27 ರನ್) ಅವರ ಹೋರಾಟದ ನೆರವಿನಿಂದ ಜಿಂಬಾಬ್ವೆ 125 ರನ್ಗಳ ಸವಾಲಿನ ಮೊತ್ತ ಕಲೆಹಾಕಿತು.
ಮಿಂಚಿದ ಬೌಲರ್ಗಳು ಟೀಂ ಇಂಡಿಯಾ ಪರ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಮಯಾಂಕ್ ಯಾದವ್ 4 ಓವರ್ಗಳಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಪಡೆದರೆ, ಪ್ರಿನ್ಸ್ ಯಾದವ್ ಕೂಡ 19 ರನ್ಗೆ 2 ವಿಕೆಟ್ ಕಿತ್ತರು. ಸ್ಪಿನ್ನರ್ ರವಿ ಬಿಷ್ಣೋಯ್ ಮತ್ತು ಶಿವಂ ದುಬೆ ತಲಾ 1 ವಿಕೆಟ್ ಪಡೆದರು. ಆದರೆ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅಶೋಕ್ ಶರ್ಮಾ 4 ಓವರ್ಗಳಲ್ಲಿ 29 ರನ್ ನೀಡಿದರೂ ವಿಕೆಟ್ ಪಡೆಯುವಲ್ಲಿ ವಿಫಲರಾದರು.
Follow the ಸಮಗ್ರ ಸುದ್ದಿ Telegram Channel: https://t.me/SamagraSuddi
ಸಮಗ್ರ ಸುದ್ದಿ channel on WhatsApp: https://whatsapp.com/channel/0029VbDbOsBD8SE2H0L3d40j